ತುಳಸಿ ಎಲೆಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ತುಳಸಿ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸುಮಾರು 6 ತಿಂಗಳ ಕಾಲ ನಿಯಮಿತವಾಗಿ ಸೇವಿಸುವುದರಿಂದ ಮೂತ್ರಪಿಂಡಗಳು ಬಲಗೊಳ್ಳುತ್ತವೆ. ಅಲ್ಲದೆ, ಇದು ಮೂತ್ರಪಿಂಡದ ಕಲ್ಲುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ತುಳಸಿ ಎಲೆಗಳು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.
ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಾಂತಿ, ಭೇದಿ ಮತ್ತು ಜ್ವರದಂತಹ ಸಮಸ್ಯೆಗಳಿಗೆ ತುಳಸಿ ಎಲೆಯ ರಸ ಉತ್ತಮ ಔಷಧಿಯಾಗಿದೆ. ತುಳಸಿ ಎಲೆಗಳು ಒತ್ತಡ ನಿವಾರಕ ಆಗಿ ಕಾರ್ಯನಿರ್ವಹಿಸುತ್ತವೆ. ದಿನಕ್ಕೆರಡು ಬಾರಿ 12 ತುಳಸಿ ಎಲೆಗಳನ್ನು ಜಗಿದು ತಿನ್ನುವುದರಿಂದ ರಕ್ತ ಶುದ್ಧಿಯಾಗುತ್ತದೆ ಮತ್ತು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
ತುಳಸಿ ಎಲೆಗಳನ್ನು ಜಗಿಯುವುದರಿಂದ ಬಾಯಿಯಲ್ಲಿನ ಹುಣ್ಣುಗಳು ಮತ್ತು ಸೋಂಕುಗಳು ನಿವಾರಣೆಯಾಗುತ್ತವೆ. ಒಣಗಿಸಿದ ತುಳಸಿ ಎಲೆಗಳ ಪುಡಿಯನ್ನು ಹಲ್ಲುಜ್ಜಲು ಬಳಸಬಹುದು. ಸಾಸಿವೆ ಎಣ್ಣೆಯೊಂದಿಗೆ ತುಳಸಿ ಪೇಸ್ಟ್ ತಯಾರಿಸಿ ವಸಡುಗಳಿಗೆ ಮಸಾಜ್ ಮಾಡುವುದರಿಂದ ಬಾಯಿ ದುರ್ವಾಸನೆ ಹೋಗಲಾಡಿಸಬಹುದು ಮತ್ತು ಒಟ್ಟಾರೆ ದಂತದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

