ಪೇರಳೆ ಹಣ್ಣಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕಬ್ಬಿಣ, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್‌ಗಳಿದ್ದು, ಇದು ದೇಹಕ್ಕೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ.

ಸೀಬೆಹಣ್ಣು ಫೈಬರ್‌ನಿಂದ ಸಮೃದ್ಧವಾಗಿದೆ. ಈ ಫೈಬರ್ ಕರುಳಿನ ಸಾಮಾನ್ಯ ಕಾರ್ಯನಿರ್ವಹಣೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ, ಈ ಹಣ್ಣು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿಡಲು ಸಹಾಯ ಮಾಡುತ್ತದೆ.

ವಿಟಮಿನ್ ಸಿ ಹೇರಳವಾಗಿದ್ದು, ಇದು ದೇಹದ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಪೇರಳೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದ ಜೀವಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಪೇರಳೆಯಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಇದರ ಫೈಬರ್ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಕಾರಿ. ಆದರೆ ಪೇರಳೆ ತಿನ್ನುವುದರಿಂದ ಮಾತ್ರ ಹೃದಯ ಕಾಯಿಲೆಯ ಅಪಾಯ ಕಡಿಮೆಯಾಗುವುದಿಲ್ಲ. ಇದಕ್ಕಾಗಿ, ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದು ಅಗತ್ಯ. ಇದಲ್ಲದೆ ಪೇರಳೆ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೂಡ ತುಂಬಾನೇ ಸಹಕಾರಿ.

ಸೀಬೆಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ದೇಹದಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯುತ್ತದೆ. ಇದಲ್ಲದೆ, ಪೇರಳೆ ಸೇವಿಸುವುದರಿಂದ ಹೊಟ್ಟೆ ಹೆಚ್ಚು ಸಮಯದವರೆಗೆ ತುಂಬಿರುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಈ ಹಣ್ಣು ತೂಕವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.

ಪೇರಳೆಹಣ್ಣು ಹೇರಳವಾದ ನೀರಿನಾಂಶವನ್ನು ಹೊಂದಿದ್ದು, ಇದು ಚರ್ಮವನ್ನು ಒಳಗಿನಿಂದ ಹೈಡ್ರೇಟ್ ಆಗಿಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಆರೋಗ್ಯಕರ ಚರ್ಮದ ಕೋಶಗಳನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ, ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಚರ್ಮದ ಹೊಳಪನ್ನು ಹೆಚ್ಚಿಸುವುದು ಮಾತ್ರವಲ್ಲ ಸುಕ್ಕುಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ಪೇರಳೆವು ಪೌಷ್ಟಿಕ ಹಣ್ಣಾಗಿದ್ದರೂ, ಅತಿಯಾಗಿ ತಿನ್ನುವುದರಿಂದ ಹೊಟ್ಟೆಯುಬ್ಬರ, ಗ್ಯಾಸ್‌ ಅಥವಾ ಹೊಟ್ಟೆಯಲ್ಲಿ ಅಸ್ವಸ್ಥತೆ ಉಂಟಾಗುತ್ತದೆ. ಆದ್ದರಿಂದ ಸಾಮಾನ್ಯವಾಗಿ, ದಿನಕ್ಕೆ ಒಂದು ಮಧ್ಯಮ ಗಾತ್ರದ ಪೇರಳೆ ಅಥವಾ ಒಂದು ಸಣ್ಣ ಕಪ್ ಕತ್ತರಿಸಿದ ಪೇರಳೆ ತಿನ್ನುವುದು ಉತ್ತಮ.