ಹಾಗಲಕಾಯಿ ಪ್ರತಿರೋಧಕತೆ ಹೆಚ್ಚಿಸಿ, ಜೀರ್ಣಕ್ರಿಯೆ ಚುರುಕು ಮಾಡಿ, ರಕ್ತದಲ್ಲಿನ ಸಕ್ಕರೆಯಂಶ ನಿಯಂತ್ರಿಸಿ, ಯಕೃತ್‌ನ ಸಾಮರ್ಥ್ಯ ಹೆಚ್ಚಿಸುತ್ತದೆ. ವಿಟಮಿನ್‌ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳು ಭರಪೂರ ಇರುವ ಹಾಗಲ ಕಾಯಿಯ ಸೇವನೆಯಿಂದ ಸೋಂಕುಗಳ ವಿರುದ್ಧ ಹೋರಾಡುವುದಕ್ಕೆ ಹೆಚ್ಚಿನ ಬಲ ದೊರೆಯುತ್ತದೆ.

ದೇಹದಲ್ಲಿನ ಬಿಳಿ ರಕ್ತಕಣಗಳನ್ನು ಬಲಪಡಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ನೆಗಡಿ, ಕೆಮ್ಮು, ಜ್ವರದಂಥ ಸೋಂಕು ರೋಗಗಳ ವಿರುದ್ಧ ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಹಾಗಲ ಹೆಚ್ಚಿನ ದಕ್ಷತೆಯನ್ನು ಮೆರೆದಿದೆ. ಅದರಲ್ಲೂ ಮಧುಮೇಹ-ಪೂರ್ವ ಸ್ಥಿತಿಯಲ್ಲಿ ಇರುವವರು ಇದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಪಾಲಿಪೆಪ್‌ಟೈಡ್‌-ಪಿ ಮಾದರಿಯ ಸಂಯುಕ್ತಗಳು ಇದರಲ್ಲಿದ್ದು, ಇವು ರಕ್ತದಲ್ಲಿನ ಸಕ್ಕರೆಯಂಶವನ್ನು ಕಡಿಮೆ ಮಾಡುತ್ತವೆ. ಇನ್‌ಸುಲಿನ್‌ ಪ್ರತಿರೋಧವನ್ನು ಕಡಿಮೆ ಮಾಡುವುದರಿಂದ, ಮಳೆಗಾಲದಲ್ಲಿ ಮಧುಮೇಹ ನಿಯಂತ್ರಣಕ್ಕೆ ಇದನ್ನು ತಿನ್ನುವುದು ಪ್ರಯೋಜನವಾಗುತ್ತದೆ.

ಮಳೆಗಾಲದಲ್ಲಿ ಇದನ್ನು ಸೇವಿಸುವುದರಿಂದ ಮಲಬದ್ಧತೆಯ ನಿವಾರಣೆಗೆ ನೆರವು ದೊರೆಯುತ್ತದೆ. ಜೊತೆಗೆ, ಹಾಗಲ ಬೈಲ್‌ ರಸದ ಉತ್ಪಾದನೆಗೂ ಪ್ರೋತ್ಸಾಹ ನೀಡುವುದರಿಂದ ಜೀರ್ಣಾಂಗಗಳು ಚುರುಕಾಗುತ್ತವೆ. ವಾತಾವರಣದಲ್ಲಿ ತೇವ ಹೆಚ್ಚುತ್ತಿದ್ದಂತೆ, ತ್ವಚೆಯಲ್ಲಿ ಎಣ್ಣೆಯಂಶವೂ ಹೆಚ್ಚುತ್ತದೆ. ಇದರಿಂದ ಫಂಗಸ್‌ ಸೋಂಕು, ಮೊಡವೆಯಂಥ ತೊಂದರೆಗಳು ಕಾಣಬಹುದು.

ಹಾಗಲದಲ್ಲಿರುವ ಉರಿಯೂತ ಶಾಮಕ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಚರ್ಮದ ಸಮಸ್ಯೆ ಪರಿಹಾರಕ್ಕೆ ಸಹಾಯ ಮಾಡುತ್ತವೆ. ಹಾಗಲ ಕಾಯಿಯನ್ನು ಆಗೀಗ ತಿನ್ನುವುದರಿಂದ ಅಥವಾ ಅದರ ರಸ ಕುಡಿಯುವುದರಿಂದ ಫಳಫಳ ಹೊಳೆಯುವ ತ್ವಚೆಯನ್ನು ಹೊಂದಬಹುದು.