ಅಧಿಕ ತೂಕದಿಂದಾಗಿ ಅನೇಕ ಮಂದಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಹುತೇಕ ಮಂದಿ ನಾನಾ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಮೇಲ್ನೋಟಕ್ಕೆ ಇದು ಸುಲಭವಾಗಿ ಕಂಡರೂ ಬಹಳ ಮಂದಿಗೆ ಇದು ಸಾಹಸವಿದ್ದಂತೆ.
ಜೀ ನ್ಯೂಸ್ ವರದಿ ಪ್ರಕಾರ, ಕೆಲವರು ಜಿಮ್, ಯೋಗ, ಡಯೆಟ್, ವರ್ಕೌಟ್ ಹೀಗೆ ಹಲವಾರು ಸರ್ಕಸ್ಗಳನ್ನು ಮಾಡುವ ಮೂಲಕ ಬೆವರಿಳಿಸುತ್ತಾರೆ. ಆದರೆ ವಾಸ್ತವವಾಗಿ ನಮ್ಮ ತೂಕ ನಾವು ಯಾವ ರೀತಿಯ ಆಹಾರವನ್ನು ತಿನ್ನುತ್ತೇವೆ ಮತ್ತು ಯಾವ ರೀತಿಯ ಪಾನೀಯಗಳನ್ನು ಕುಡಿಯುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸರಿಯಾದ ಆಹಾರ ಪದ್ಧತಿ ಅನುಸರಿಸುವ ಮೂಲಕ ನೀವು ಸ್ಲಿಮ್ ಆಗಬಹುದು.
ಬೆಳಗಿನ ಉಪಾಹಾರದ ಹೆಸರಿನಲ್ಲಿ ಎಣ್ಣೆಯುಕ್ತ ಪೂರಿ, ಬೋಂಡಾ, ಚಪಾತಿಗಳನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ. ಅದರಲ್ಲೂ ನಾವು ಬೆಳಿಗ್ಗೆ ತೆಗೆದುಕೊಳ್ಳುವ ಉಪಹಾರ ಬಹಳ ಮುಖ್ಯ. ಆದ್ದರಿಂದಲೇ ಬೆಳಗಿನ ಉಪಾಹಾರದಲ್ಲಿ ಓಟ್ಸ್ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಓಟ್ಸ್: ಓಟ್ಸ್ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದಲ್ಲದೆ, ಓಟ್ಸ್ನಲ್ಲಿರುವ ಹೆಚ್ಚಿನ ಫೈಬರ್ ಅಂಶವು ನಮ್ಮನ್ನು ದೀರ್ಘಕಾಲ ಹಸಿವಿನಿಂದ ದೂರವಿರಿಸುತ್ತದೆ. ಆದರೆ ಸಿಹಿ ಓಟ್ಸ್ ತಿನ್ನಲು ಬಯಸುವವರು ಸಕ್ಕರೆಯ ಬದಲು ಯಾವುದಾದರೂ ಹಣ್ಣುಗಳನ್ನು ಸೇರಿಸಿ ತಿಂದರೆ ಹೊಟ್ಟೆಯ ಕೊಬ್ಬನ್ನು ತಪ್ಪಿಸಬಹುದು.
ಮೊಟ್ಟೆ: ಪ್ರೋಟೀನ್ ವಿಚಾರಕ್ಕೆ ಬಂದಾಗ ನಮ್ಮ ಮನಸ್ಸಿಗೆ ಬರುವ ಮೊದಲ ಆಹಾರವೆಂದರೆ ಮೊಟ್ಟೆ. ಅದರಲ್ಲೂ ಬಿಳಿ ಲೋಳೆಯಲ್ಲಿ ಇರುವ ಪೋಷಕಾಂಶಗಳು ಬೇರೆಲ್ಲೂ ಸಿಗುವುದಿಲ್ಲ. ವಿಟಮಿನ್ ಬಿ12, ವಿಟಮಿನ್ ಡಿ, ಒಮೆಗಾ ತ್ರೀ ಫ್ಯಾಟಿ ಆಸಿಡ್ ನಂತಹ ಹಲವು ಪೋಷಕಾಂಶಗಳು ಮೊಟ್ಟೆಯ ಬಿಳಿಯಲ್ಲಿ ಅಡಗಿವೆ. ನಮ್ಮ ತೂಕವನ್ನು ಕಡಿಮೆ ಮಾಡಲು ಇವು ತುಂಬಾ ಉಪಯುಕ್ತವಾಗಿವೆ. ಮೊಟ್ಟೆಯ ಬಿಳಿಭಾಗವನ್ನು ಮಾತ್ರ ತಿನ್ನಲು ಮರೆಯದಿರಿ.
ಡ್ರೈ ಫ್ರೂಟ್ಸ್: ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಬಾದಾಮಿಯಲ್ಲಿರುವ ಮೊನೊಸಾಚುರೇಟೆಡ್ ಕೊಬ್ಬುಗಳು ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುವ ಶಕ್ತಿ ಹೊಂದಿದೆ. ಪ್ರತಿದಿನ ಬಾದಾಮಿ ತಿನ್ನುವುದರಿಂದ ನಮ್ಮ ದೇಹದಲ್ಲಿ ನೀರು ಸಂಗ್ರಹವಾಗುವುದಿಲ್ಲ. ಇರುವ ಕೊಬ್ಬು ಕೂಡ ಕಡಿಮೆಯಾಗುತ್ತದೆ.
ಆಪಲ್ ಸೈಡರ್ ವಿನೆಗರ್: ಒಂದು ಲೋಟ ನೀರಿಗೆ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಹಾಕಿ ಕುಡಿದರೆ ಹೊಟ್ಟೆಯ ಸುತ್ತಲಿನ ಕೊಬ್ಬು ಬೇಗನೆ ಮಾಯವಾಗುತ್ತದೆ. ಇದಲ್ಲದೆ, ಆಪಲ್ ಸೈಡರ್ ವಿನೆಗರ್ ನಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ.
ಬಿಸಿ ನೀರು: ಬೆಳಗ್ಗೆ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುವುದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಚಯಾಪಚಯ ದರವೂ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹಾಗಾಗಿ ಹೊಟ್ಟೆಯೂ ಕಡಿಮೆಯಾಗುತ್ತದೆ.
ಹಣ್ಣುಗಳು: ಸಂಜೆಯಾದರೆ ಆಗೊಮ್ಮೆ ಈಗೊಮ್ಮೆ ಹಸಿವಾಗುತ್ತದೆ. ಇಂತಹ ಸಮಯದಲ್ಲಿ ಒಂದಿಷ್ಟು ತಿಂಡಿ ತಿನ್ನುವ ಬದಲು ಹಣ್ಣುಗಳನ್ನು ಸೇವಿಸುವುದು ಉತ್ತಮ. ಹಣ್ಣುಗಳಲ್ಲಿ ಸಕ್ಕರೆ ಮತ್ತು ಕೊಬ್ಬಿನಂಶ ಕಡಿಮೆ ಇರುತ್ತದೆ. ಹೆಚ್ಚಿನ ಪೋಷಕಾಂಶಗಳನ್ನು ಒಳಗೊಂಡಿದೆ. ಆದ್ದರಿಂದ ಹಣ್ಣುಗಳನ್ನು ತಿನ್ನುವುದರಿಂದ ನಮ್ಮ ಹಸಿವನ್ನು ನೀಗಿಸಬಹುದು ಮತ್ತು ತೂಕವನ್ನು ಕಡಿಮೆ ಮಾಡಬಹುದು. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

