ಬ್ಯಾಡ್ಮಿಂಟನ್ ಇಡೀ ದೇಹಕ್ಕೆ ಉತ್ತಮ ವ್ಯಾಯಾಮ ನೀಡುವ ಸಕ್ರಿಯ ಕ್ರೀಡೆ. ಈ ಆಟ ಸ್ನಾಯುಗಳನ್ನು ಬಲಪಡಿಸುವುದಲ್ಲದೆ, ರಕ್ತ ಪರಿಚಲನೆಯನ್ನು ಸುಧಾರಿಸಿ ಲವಲವಿಕೆಯಿಂದ ಇರಿಸುತ್ತದೆ.

ಬ್ಯಾಡ್ಮಿಂಟನ್ ಆಡುವಾಗ ದೇಹದ ನಿರಂತರ ಚಲನೆಯಿಂದಾಗಿ ಸ್ನಾಯುಗಳು ಬಲಗೊಳ್ಳುತ್ತವೆ. ಇದು ವಿಶೇಷವಾಗಿ ಕಾಲುಗಳ ಸ್ನಾಯುಗಳಾದ ಕಾಫ್ಸ್, ಕ್ವಾಡ್ಸ್ ಮತ್ತು ಹ್ಯಾಮ್‌ಸ್ಟ್ರಿಂಗ್ಸ್ ಹಾಗೂ ಕೋರ್ ಸ್ನಾಯುಗಳನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ ಎಂದರೆ ಇದು ದೇಹಕ್ಕೆ ಉತ್ತಮ ಆಕಾರವನ್ನು ನೀಡುತ್ತದೆ.

ಈ ಆಟದಲ್ಲಿನ ವೇಗದ ಚಲನೆಗಳು ಹೃದಯದ ಸ್ನಾಯುಗಳನ್ನು ಬಲಪಡಿಸುತ್ತವೆ. ಇದು ರಕ್ತದ ಹರಿವನ್ನು ಸುಧಾರಿಸುವುದಲ್ಲದೆ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ತಗ್ಗಿಸುತ್ತದೆ.

ದೈನಂದಿನ ಒತ್ತಡದಿಂದ ಮುಕ್ತಿ ಪಡೆಯಲು ಬ್ಯಾಡ್ಮಿಂಟನ್ ಅತ್ಯುತ್ತಮ ಮಾರ್ಗ. ಈ ಕ್ರೀಡೆ ದೇಹದಲ್ಲಿನ ಒತ್ತಡದ ಹಾರ್ಮೋನ್‌ಗಳನ್ನು ಕಡಿಮೆ ಮಾಡಿ, ‘ಹ್ಯಾಪಿ ಹಾರ್ಮೋನ್’ಗಳನ್ನು ಹೆಚ್ಚಿಸುವ ಮೂಲಕ ಮನಸ್ಸನ್ನು ಪ್ರಫುಲ್ಲವಾಗಿರಿಸಲು ಸಹಾಯ ಮಾಡುತ್ತದೆ.

ಬ್ಯಾಡ್ಮಿಂಟನ್‌ನಲ್ಲಿ ಹೊಡೆಯಲು ಮಾಡುವ ವೇಗದ ಚಲನೆಗಳು ಮತ್ತು ಸ್ಮ್ಯಾಶ್‌ಗಳು ದೇಹದ ಸ್ನಾಯುಗಳ ನಮ್ಯತೆಯನ್ನು ಹೆಚ್ಚಿಸುತ್ತವೆ. ಇದರಿಂದ ದೇಹ ಹೆಚ್ಚು ಚುರುಕಾಗುತ್ತದೆ. ಇದನ್ನು ಅಭ್ಯಾಸ ಮಾಡುವುದರಿಂದ ಸ್ನಾಯುಗಳು ಹೆಚ್ಚು ಸುಲಭವಾಗಿ ಬಾಗುತ್ತವೆ ಮತ್ತು ಬಲಗೊಳ್ಳುತ್ತವೆ.

ಈ ಆಟದಲ್ಲಿ ಅತಿಯಾಗಿ ಬೆವರುವುದರಿಂದ ದೇಹದ ಕ್ಯಾಲೊರಿಗಳು ದಹಿಸಲ್ಪಡುತ್ತವೆ ಮತ್ತು ವಿಷಕಾರಿ ಅಂಶಗಳು ಹೊರಹೋಗುತ್ತವೆ. ಇದರಿಂದ ಚಯಾಪಚಯ ಕ್ರಿಯೆ (Metabolism) ವೃದ್ಧಿಯಾಗಿ, ಇದು ತೂಕ ಇಳಿಕೆಗೆ ಮತ್ತು ಸದೃಢ ಮೈಕಟ್ಟು ಪಡೆಯಲು ಸಹಕಾರಿ.

ದಿನನಿತ್ಯ ಬ್ಯಾಡ್ಮಿಂಟನ್ ಆಡುವುದರಿಂದ ಮೂಳೆಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ವೃದ್ಧಿಯಾಗಿ ಮೂಳೆಗಳು ಬಲಗೊಳ್ಳುತ್ತವೆ. ಇದರಿಂದ ಮೂಳೆ ಮುರಿತದ ಅಪಾಯಗಳು ಕಡಿಮೆಯಾಗುತ್ತವೆ. ವೇಗವಾಗಿ ಬರುವ ಶಟಲ್ ಕಾಕ್ ಮೇಲೆ ನಿರಂತರ ನಿಗಾ ಇಡಬೇಕಿರುವುದರಿಂದ ಇದು ಏಕಾಗ್ರತೆಯ ಮಟ್ಟವನ್ನು ಸುಧಾರಿಸುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ಎಚ್ಚರದಿಂದ ಇರುವುದನ್ನು ಇದು ಕಲಿಸುತ್ತದೆ. ಎದುರಾಳಿಯ ನಡೆಯನ್ನು ಮೊದಲೇ ಊಹಿಸುವ ಸಾಮರ್ಥ್ಯ ಮತ್ತು ಸಮಯಪ್ರಜ್ಞೆ ಈ ಆಟದಿಂದ ಬೆಳೆಯುತ್ತದೆ.

ಬ್ಯಾಡ್ಮಿಂಟನ್ ಕನಿಷ್ಠ ಇಬ್ಬರು ಅಥವಾ ನಾಲ್ವರು ಸೇರಿ ಆಡುವ ಆಟ. ಇದು ಡಿಜಿಟಲ್ ಜಗತ್ತಿನಿಂದ ಹೊರಬಂದು ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯಲು ಮತ್ತು ಬಾಂಧವ್ಯ ವೃದ್ಧಿಸಲು ಸಹಾಯ ಮಾಡುತ್ತದೆ.

ನೀವು ಆಹಾರದ ಪಥ್ಯದೊಂದಿಗೆ ಬೇಸತ್ತಿದ್ದರೆ, ಬ್ಯಾಡ್ಮಿಂಟನ್ ಒಂದು ಉತ್ತಮ ಆಯ್ಕೆ. ಇದು ದೇಹದಲ್ಲಿನ ಕೊಬ್ಬನ್ನು ಕರಗಿಸಿ ದೇಹ ಸುಂದರವಾದ ಆಕಾರ ಪಡೆಯಲು ನೆರವಾಗುತ್ತದೆ. ಆಟದ ಸಮಯದಲ್ಲಿ ದೈಹಿಕ ಶ್ರಮದಿಂದ ಸುರಿಯುವ ಬೆವರಿನಿಂದಾಗಿ ದೇಹದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಇದು ಲಿವರ್‌ನಲ್ಲಿ ಸಕ್ಕರೆ ಉತ್ಪಾದನೆ ಕಡಿಮೆಯಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಇದು ಮಧುಮೇಹಿಗಳಿಗೆ ಉಪಯುಕ್ತ.