ಹೊಳೆನರಸೀಪುರ: ಗಿಡ ಮರಗಳು ಮಾನವನ ಜೀವನಾಡಿಗಳು. ನಾವೆಲ್ಲರೂ ಗಿಡಗಳನ್ನು ನೆಟ್ಟು ಪೋಷಿಸುವುದರ ಮೂಲಕ ಪರಿಸರ ಜಾಗೃತಿ ಮೂಡಿಸಬೇಕು ಎಂದು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದ ಎಂ.ಎಂ.ಎ.ಕೆ. ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯಶಿಕ್ಷಕ ಮಹೇಶಪ್ಪ ಡಿ.ಸಿ.ಹೇಳಿದರು.
ಅವರು ವಿಶ್ವ ಪರಿಸರ ದಿನೋತ್ಸವದ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡುವುದರ ಮೂಲಕ ಮಕ್ಕಳಿಗೆ ಪರಿಸರ ಜಾಗೃತಿ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ತಿಳಿಸಿದರು.ಮರಗಿಡಗಳು ಮಾನವನ ಜೀವನಾಡಿಗಳು ಪರಿಸರ ಅಸಮತೋಲನ ತಪ್ಪಿಸಲು ಹೆಚ್ಚು ಗಿಡಮರಗಳನ್ನು ಬೆಳೆಸಿ ಕಾಡುಗಳನ್ನು ಸಂರಕ್ಷಿಸಿದರೆ ಮಾತ್ರ ಭವಿಷ್ಯದಲ್ಲಿ ಎಲ್ಲರೂ ಸಮೃದ್ಧ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಹಿರಿಯ ಶಿಕ್ಷಕರಾದ ಹೆಚ್.ಸಿ.ಕೃಷ್ಣಯ್ಯ ಮಾತನಾಡಿ,ವಿವಿಧ ಗಿಡಗಳಿಂದಾಗುವ ಔಷಧೀಯ ಗುಣಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.ತುಳಸಿ,ನಿಂಬೆ,ಬೇವು, ನುಗ್ಗೆ,ಪಪ್ಪಾಯ,ಸೀಬೆ,ಮಾವು, ಸಪೋಟ ಮುಂತಾದ ಗಿಡಗಳನ್ನು ಬೆಳೆಸುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಮಕ್ಕಳು ವಿವಿಧ ಪರಿಸರ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಜ್ಯೋತಿಲಕ್ಷ್ಮಿ, ಪುಷ್ಪಲತ, ನಿರ್ಮಲಾದೇವಿ, ಬಿಂದು ಆರ್ ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.

