ಹಾಸನ: ಕೆ‌ಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಲೂರು ತಾಲೂಕಿನ ಯಡಿಯೂರು ಕೊಡಿಗೆ ಬಳಿ ನಡೆದಿದೆ.

ರಂಗಸ್ವಾಮಿ ಮೃತ ದುರ್ದೈವಿ. ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ರಂಗಸ್ವಾಮಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ. ಯಡಿಯೂರು ಕೊಡಿಗೆ ಬಳಿ ಆಕ್ಟಿವಾ ಹೋಂಡಾಗೆ ಕೆ‌ಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ ಹಾಸನ ಕಡೆಯಿಂದ ಆಲೂರು ಕಡೆಗೆ ಬರುತ್ತಿತ್ತು. ಈ ವೇಳೆ ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಬಸ್‌ ಗುದ್ದಿದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬೈಕ್ ಸವಾರ ರಂಗಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.