ಹಾಸನ: ಹಾಸನ ಜಿಲ್ಲೆಯ ಮಲೆನಾಡು ‌ಭಾಗದಲ್ಲಿ ಮಳೆಯ ಆರ್ಭಟ  ಮುಂದುವರಿದಿದ್ದು, ಶಿರಾಡಿ ಘಾಟಿಯ ರೈಲ್ವೆ ಹಳಿಯ  ಮೇಲೆ ಮಣ್ಣು ಕುಸಿತಗೊಂಡಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ-ಎಡಕುಮೇರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದಿದ್ದು, ಈ ಮಾರ್ಗದ ಎಲ್ಲಾ ರೈಲುಗಳ‌ ಸಂಚಾರ ಬಂದ್  ಮಾಡಲಾಗಿದೆ. ಜೊತೆಗೆ ಶಾಂತಿಗ್ರಾಮ ಬಳಿ ಚಲಿಸುತ್ತಿರುವ ರೈಲಿನ ಮೇಲೆಯೇ ಮಣ್ಣು ಕುಸಿತ ಸಂಭವಿಸಿದ್ದು, ಅದೃಷ್ಟವಶಾತ್‌ ಭಾರಿ ಅಪಾಯ ತಪ್ಪಿದೆ.

ಕಿಲೋಮೀಟರ್ ನಂಬರ್ 63ರಲ್ಲಿ ರೈಲ್ವೆ ಹಳಿಯ ಮೇಲೆ‌ ನಿನ್ನೆ ರಾತ್ರಿ ಮಣ್ಣು ಕುಸಿತವಾಗಿತ್ತು. ಇದರಿಂದಾಗಿ ಬೆಂಗಳೂರು- ಹಾಸನ- ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ಇಲಾಖೆ ಬಂದ್ ಮಾಡಿದೆ. ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ರೈಲು ಸಂಚಾರ ಮಾರ್ಗಗಳನ್ನು ಬದಲಿಸಲಾಗಿದೆ.

ಹಾಸನ- ಬೆಂಗಳೂರು, ಬೆಂಗಳೂರು- ಹಾಸನ ರೈಲುಗಳ ಸಂಚಾರದ ಸಮಯ ಬದಲಾವಣೆ ಮಾಡಲಾಗಿದೆ. ಮಣ್ಣು ತೆರವು ಬಳಿಕ ಹಾಸನ ಬೆಂಗಳೂರು ಮಾರ್ಗದ ರೈಲುಗಳ ಸಂಚಾರ ಪುನಾರಂಭವಾಗಲಿದೆ.