ಬೆಂಗಳೂರು: ಸಿನಿಮಾ ರಿಲೀಸ್ ಮುನ್ನವೇ ದುನಿಯಾ ವಿಜಯ್ ಅಭಿನಯದ ವಿಜಿ V29 ಪೋಸ್ಟರ್ಗೆ ಭಾರೀ ವಿರೋಧ ವ್ಯಕ್ತವಾಗಿದೆ. ತಲ್ವಾರ್ ಹಿಡಿದ ದುನಿಯಾ ವಿಜಯ್ ವಿರುದ್ಧ ಹಿಂದೂ ಸಂಘಟನೆಗಳು ಕೆಂಡವಾಗಿವೆ.
ಇತ್ತೀಚೆಗೆ ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಅವರು ತಮ್ಮ ಮುಂದಿನ ಸಿನಿಮಾ ಪ್ರೊಡಕ್ಷನ್ ನಂಬರ್ 2 ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ್ದರು. ಇದೇ ಪೋಸ್ಟರ್ ಸದ್ಯ ಹಿಂದೂಗಳ ಆಕ್ರೋಶದ ಜ್ವಾಲೆಗೆ ಗುರಿಯಾಗಿದೆ.
ದೇವಸ್ಥಾನದ ರಥಕ್ಕೆ ಬೆಂಕಿ, ಅದರ ಮುಂದೆ ತಲ್ವಾರ್ ಇಟ್ಕೊಂಡು ಪೋಸ್ ಕೊಡಲಾಗಿದೆ. ಈ ಸಿನಿಮಾ ಪೋಸ್ಟರ್ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಶಾಂತಿಯ ತಾಣವಾದ ದೇವಸ್ಥಾನವನ್ನ ಕೆಟ್ಟದಾಗಿ ಬಿಂಬಿಸಿದ್ದಾರೆ. ದೇವಾಲಯದ ಪೋಸ್ಟರ್ ಅನ್ನ ಕೆಟ್ಟದಾಗಿ ಬಳಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಪದೇ ಪದೇ ಹಿಂದೂ ದೇವಾಲಯಗಳನ್ನ ಈ ರೀತಿ ಬಳಕೆ ಮಾಡಿದ್ದು ಎಷ್ಟು ಸರಿ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸಂಚಾಲಕ ಮೋಹನ್ ಅವರು ಪ್ರಶ್ನಿಸಿದ್ದಾರೆ. ಈ ಪೋಸ್ಟ್ ಡಿಲೀಟ್ ಮಾಡಬೇಕು. ಇಲ್ಲದಿದ್ರೆ ರಾಜ್ಯವ್ಯಾಪಿ ಈ ಸಿನಿಮಾ ಬ್ಯಾನ್ ಮಾಡ್ತೇವೆ ಅಂತ ಹಿಂದೂ ಜನಜಾಗೃತಿ ಸಮಿತಿ ಎಚ್ಚರಿಕೆಯನ್ನು ನೀಡಿದೆ.