News Karnataka Kannada
Sunday, April 28 2024
ಸಾಂಡಲ್ ವುಡ್

ಮನೋರಂಜನೆ ಭರಿತ ಕನ್ನಡ ವೈಜ್ಞಾನಿಕ ಚಿತ್ರ – ಸ್ಟೆಬಿಲಿಟಿ

Stabiliti Kannada Movie Newskannada 01
Photo Credit :

ಬೆಂಗಳೂರು: ಮನೋರಂಜನಾ ಕ್ಷೇತ್ರದಲ್ಲಿ, ಸಿನಿಮಾ ಒಂದು ಮುಖ್ಯವಾದ ಜನಪ್ರಿಯವಾದ ಮಾಧ್ಯಮ. ಈಗಿನ ದಿನಗಳಲ್ಲಿ ಅದು ಸಾಮಾಜಿಕ ಮೌಲ್ಯಗಳನ್ನು ಪ್ರಸ್ತುತಗೊಳಿಸುವ ಪ್ರಬಲ ಮಾಧ್ಯಮವಾಗಿದೆ. ಪಿಡುಗಿನ ಈ ಪ್ರಸ್ತುತ ಸ್ಥಿತಿಯಲ್ಲಿ ಜನರಿಗೆ, ತಮ್ಮ ಮನೆಗಳಲ್ಲೇ ಇದ್ದು, ಮಾನಸಿಕ ಸ್ಥಿರತೆ ಮತ್ತು ಸಮಾಧಾನವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ.

ಹೀಗಿರುವಾಗ, ಸಿನಿಮಾಕ್ಕಿಂತ ಬೇರೆ ಮಾರ್ಗವೇನಿದೆ? ನಮ್ಮನ್ನು ಅಳಿಸಿ, ನಗಿಸಿ, ಉತ್ತೇಜಿಸಿ, ನಮ್ಮವರಿಂದ ದೂರವಿರುಕೆಯನ್ನು ಮರೆಸಿ, ಜೀವನದಲ್ಲಿ ಆಶಾದಾಯಕರನ್ನಾಗಿ ಮಾಡಿದೆ. ಒಂದು ಒಳ್ಳೆಯ ಕಥಾಹಂದರ, ಚಿತ್ರಕಥೆ, ಛಾಯಾಗ್ರಹಣ ಜನರನ್ನು ರಂಜಿಸಿ, ಪರದೆಗೆ ಅಂಟಿಕೊಳ್ಳುವಂತೆ ಮಾಡುತ್ತದೆ. ಸಿನಿಮಾ ರಂಗದ ಈ ಶಕ್ತಿ ಮತ್ತು ಮನೋರಂಜನೆಯ ತಾಕತ್ತಿಗೆ, ನಾವು ಚಿತ್ರರಂಗಕ್ಕೆ ಋಣಿಯಾಗಬೇಕಿದೆ.

ಚಿತ್ರೀಕರಣ ಎಂದರೆ ತುಂಬಾ ಕಷ್ಟ, ವೆಚ್ಛಭರಿತವೆಂದು ನಾವೆಲ್ಲಾ ಅಂದುಕೊಂಡಿದ್ದೇವೆ. ಪ್ರತಿಭಾನ್ವಿತ ಕಲಾವಿದರ ಆಯ್ಕೆ, ನಿರ್ಮಾಣ ವೆಚ್ಛ, ಪ್ರಚಾರ ಮತ್ತು ಮಾರುಕಟ್ಟೆ ವೆಚ್ಛ, ವಿಮೆ, ಚಿತ್ರಹಂಚಿಕೆ ಇತ್ಯಾದಿ ಒಂದು ಚಿತ್ರನಿರ್ಮಾಣದ ಖರ್ಚಿನಲ್ಲಿ ಸೇರಿದೆ ಎಂದು ನಮಗೆ ತಿಳಿದಿದೆ. ಹೌದು, ಇವೆಲ್ಲಾ ನಿಜ. ಆದರೆ ಇವೆಲ್ಲ ಇರಲೇಬೇಕಂತಿಲ್ಲ. “ಸ್ಟೆಬಿಲಿಟಿ” ಎಂಬ ಈ ಹೊಸ, ಸ್ವಂತ ನಿರ್ಮಾಣದ ಒಂದು ವೈಜ್ಞಾನಿಕ ರೋಮಾಂಚಕ ಕನ್ನಡ ಚಿತ್ರವು, ಅನ್ಯ ಕ್ಷೇತ್ರಗಳಲ್ಲಿ ವೃತ್ತಿಪರರಾದ ಕಲಾವಿದರಿಂದ ನಿರ್ಮಾಣವಾಗಿದೆ. ಚಿತ್ರನಿರ್ಮಾಣದ ಪೂರ್ವ ತಯಾರಿ, ಚಿತ್ರೀಕರಣ ಮತ್ತು ನಂತರದ ಕೆಲಸಗಳೆಲ್ಲವೂ ಕಛೇರಿಯ ಕೆಲಸದ ನಂತರ ಮತ್ತು ವಾರಾಂತ್ಯಗಳಲ್ಲಿ ಮಾಡಲಾಗಿದೆ. ವಿಶೇಷವೆಂದರೆ, 110 ನಿಮಿಷಗಳ ಈ ಚಿತ್ರವು ಕೇವಲ 5 ಲಕ್ಷಕ್ಕಿಂತ ಕಡಿಮೆ ವೆಚ್ಛದಲ್ಲಿ ತಯಾರಿಸಲಾಗಿದೆ. ಆಶ್ಚರ್ಯವಲ್ಲವೇ?

ಹಾಗಾದರೆ ಈ ಚಿತ್ರದ ಕಥೆಯೇನು? ಇದು ಒಬ್ಬ R&AW ಏಜೆಂಟ್, ದೇಶವನ್ನೇ ಅಲ್ಲೋಲ ಕಲ್ಲೋಲಗೊಳಿಸುವ ಅಪರಾಧಿಯೊಬ್ಬವನ್ನು ಎದುರಿಸುವ ಕಥೆ. ಇದರ ಚಿತ್ರೀಕರಣ ಬೆಂಗಳೂರು, ಹಾಸನ, ಹುಬ್ಬಳ್ಳಿ ಮತ್ತು ಕೊಕ್ಕಡದಲ್ಲಿ ಮಾಡಲಾಗಿದೆ. ಈ ಆಶಾದಾಯಕವಾದ ಚಿತ್ರವು ಕಶ್ಯಪ್ ಭಾಸ್ಕರ್, ಸಂದೀಪ್ ಟಿ ಸಿ, ಲಕ್ಷ್ಮೀ ಅಂಬುಗ, ಶ್ರೀನಿಧಿ ತಳಕ್ ರಂತಹ ಹೊಸ ಪ್ರತಿಭೆಗಳನ್ನು ಪರಿಚಯಿಸುವುದರ ಜೊತೆಗೆ, ಎಸ್. ಎನ್. ಸೇತುರಾಂ, ಸಂತೋಷ್ ಕರ್ಕಿ ಅವರಂತಹ ಅನುಭವಿ ಕಲಾವಿದರ ಶ್ರೀಮಂತಿಕೆಯನ್ನೊಳಗೊಂಡಿದೆ.

ಈ ಚಿತ್ರದ ಲೇಖಕ, ನಿರ್ಮಾಪಕ, ನಿರ್ದೇಶಕ ಗೌತಮ್ ಕಾನಡೆಯವರನ್ನು ಅವರ ಚಿತ್ರನಿರ್ಮಾಣದ ಆಸಕ್ತಿಯ ಬಗ್ಗೆ ಕೇಳಿದಾಗ ಅವರ ಮಾತು ಹೀಗಿದೆ, “ಸಮರ್ಪಣೆ ಮತ್ತು ಸ್ಥಿರತೆ ತುಂಬಾ ಮುಖ್ಯ. ಸಾಕಾರವಾಗದ ಕನಸುಗಳೇಕೆ?” ಗೌತಮ್ ಮತ್ತು ಅವರ ಉತ್ಸಾಹಿ ತಂಡ “ಸ್ಟೆಬಿಲಿಟಿ”ಯ ಬರಹದ ಬಗ್ಗೆ ತುಂಬಾ ವಿಶ್ವಾಸವನ್ನಿಟ್ಟುಕೊಂಡಿದ್ದಾರೆ. “ಸ್ಟೆಬಿಲಿಟಿ” ತಂಡದ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ನಿರ್ಮಾಣದ ಹಂತದಲ್ಲಿ ಸಹಾಯಕರಾಗಿದ್ದಾರೆ. ಯಾವ ಲಾಭದ ನಿರೀಕ್ಷೆ ಇಲ್ಲದೆ, ನಟನೆ, ಪರಿಕರಗಳು, ಪ್ರಸಾದನ, ಬೆಳಕು, ಊಟೋಪಚಾರ ಇತ್ಯಾದಿಗಳಲ್ಲಿ ಇವರ ಪ್ರಮುಖ ಕೊಡುಗೆ ಇದೆ.

ಈ ಚಿತ್ರದ ಚಿತ್ರಕಥೆ ಈಗಾಗಲೇ Golden Sparrow, Havelock, Indo-French, Indo-Singapore, Gona ಮತ್ತು Uruvatti ಅಂತಹ ಚಿತ್ರೋತ್ಸವಗಳಲ್ಲಿ 9 ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಅಲ್ಲದೆ Los Angeles CineFest ನಲ್ಲಿ semi-finalist ಆಗಿ ಆಯ್ಕೆಯಾಗಿದೆ. ಈ ಚಿತ್ರದ ಜಾಹಿರಾತು ಪತ್ರವನ್ನು (poster) ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಾದ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರು ಬಿಡುಗಡೆ ಮಾಡಿದ್ದಾರೆ.

“ಸ್ಟೆಬಿಲಿಟಿ” ಕೇವಲ ಒಂದು ಚಿತ್ರವಲ್ಲ. ಸರಿಯಾದ ಹಾದಿಯಲ್ಲಿ ನಡೆದರೆ, ಸಾಗುವ ಬಯಕೆಯಿದ್ದರೆ, ಖಂಡಿತಾ ಯಶಸ್ಸು ನಮ್ಮದು ಎಂಬ ನಂಬಿಕೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 2

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು