ಚನ್ನಪಟ್ಟಣ : ನಟ ಸುದೀಪ್ ಅವರು ತಾಲ್ಲೂಕಿನ ಪ್ರಸಿದ್ಧ ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸವಪ್ಪಕ್ಷೇತ್ರಕ್ಕೆ ಭೇಟಿ ನೀಡಿ, ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇದೇ ವೇಳೆ ಇತ್ತೀಚೆಗೆ ಲೋಕಾರ್ಪಣೆಗೊಂಡ 60 ಅಡಿ ಎತ್ತರದ ಸುವರ್ಣ ಲೇಪಿತ ಪಂಚಲೋಹದಿಂದ ನಿರ್ಮಾಣಗೊಂಡಿರುವ ಶ್ರೀ ಚಾಮುಂಡೇಶ್ವರಿ ವಿಗ್ರಹವನ್ನು ವೀಕ್ಷಿಸಿ ಕಣ್ತುಂಬಿಕೊಂಡರು. ಇದಕ್ಕೂ ಮುನ್ನ ಅವರು ಶ್ರೀಕ್ಷೇತ್ರಕ್ಕೆ ಆಗಮಿಸಿದಾಗ ಶ್ರೀಕ್ಷೇತ್ರದ ಧರ್ಮದರ್ಶಿ ಡಾ.ಜಿ.ಬಿ.ಮಲ್ಲೇಶ್ ಅವರು ಸುದೀಪ್ ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿ, ಶ್ರೀಕ್ಷೇತ್ರದಲ್ಲಿ ವಿಶೇಷ ಪೂಜೆ ವ್ಯವಸ್ಥೆ ಮಾಡಿ ಗೌರವಿಸಿ ಬೀಳ್ಕೊಟ್ಟರು. ಅಲ್ಲಿಂದ ಸಾತನೂರು ಸಮೀಪದ ಪ್ರಸಿದ್ಧ ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಕಬ್ಬಾಳಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸುದೀಪ್ ಆಗಮಿಸುತ್ತಿರುವ ವಿಷಯ ತಿಳಿದು ತಾಲ್ಲೂಕಿನ ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸವಪ್ಪ ಶ್ರೀಕ್ಷೇತ್ರ ಹಾಗೂ ಶ್ರೀ ಕಬ್ಬಾಳಮ್ಮ ದೇವಾಲಯದ ಆವರಣದಲ್ಲಿ ಅಭಿಮಾನಿಗಳು ಮತ್ತು ಸಾರ್ವಜನಿಕರು ನೆರೆದಿದ್ದರು.