ಸ್ಯಾಂಡಲ್ವುಡ್: ಸ್ಯಾಂಡಲ್ವುಡ್, ಕಿರುತೆರೆಯಲ್ಲಿ ಮಿಂಚಿದ ನಟಿ ತೇಜಸ್ವಿನಿ ಪ್ರಕಾಶ್ ಅವರು ತಮ್ಮ ಬಾಲ್ಯದ ಸ್ನೇಹಿತ ಫಣಿ ವರ್ಮ ನದೀಮ್ಪಳ್ಳಿ ಅವರೊಂದಿಗೆ ನಿನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ತೇಜಸ್ವಿನಿಯವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬಿಗ್ ಬಾಸ್ ನಲ್ಲಿ ತೇಜಸ್ವಿನಿ ಸಹ ಸ್ಪರ್ಧಿಗಳಾಗಿದ್ದ ನಟ ಜಯರಾಮ್ ಕಾರ್ತಿಕ್, ನಟಿ ಕಾರುಣ್ಯ ರಾಮ್, ಆಶಿತಾ ಚಂದ್ರಪ್ಪ, ಕಿರುತೆರೆ ನಟಿ ವೀಣಾ ರಾವ್ ಸೇರಿದಂತೆ ಸೆಲೆಬ್ರಿಟಿಗಳು ಈ ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
2008ರಲ್ಲಿ ತೆರೆಕಂಡ ದರ್ಶನ್ ಅಭಿನಯದ ಗಜ ಚಿತ್ರದ ಪಾತ್ರವೊಂದರಲ್ಲಿ ತೇಜಸ್ವಿನಿ ಕಾಣಿಸಿಕೊಂಡಿದ್ದರು. ನಂತರ ರಾಬರ್ಟ್ ಚಿತ್ರದಲ್ಲಿ ಮತ್ತೂಮ್ಮೆ ದರ್ಶನ್ ಜೊತೆ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು.
ಈ ಹಿಂದೆ ಅವರು ಮಾತಾಡ್ ಮಾತಾಡ್ ಮಲ್ಲಿಗೆ, ಪ್ರೀತಿ ಏಕೆ ಭೂಮಿ ಮೇಲಿದೆ, ಅರಮನೆ ಮೊದಲಾದ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ, ತೆಲುಗು ಸೇರಿದಂತೆ ಒಟ್ಟು 22 ಚಿತ್ರಗಳಲ್ಲಿ ನಟಿಸಿದ್ದಾರೆ.