ಗದಗ : ಟ್ಯೂಷನ್‌ಗೆಂದು ಮನೆಯಿಂದ ಹೊರಟಿದ್ದ ಅಪ್ರಾಪ್ತ ಬಾಲಕಿಯನ್ನು ನಂಬಿಸಿ ಅಪಹರಿಸಿ ಅತ್ಯಾಚಾರ ಎಸಗಿರುವ ಕ್ರೂರ ಘಟನೆ ಗದಗ ತಾಲೂಕಿನ ಗ್ರಾಮವೊಂದರಲ್ಲಿ ಶನಿವಾರ ನಡೆದಿದೆ.

ಸಂತ್ರಸ್ತೆಯ ತಾಯಿಯ ದೂರಿನ ಮೇರೆಗೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅದೇ ಗ್ರಾಮದ ನಿವಾಸಿಗಳಾದ ಅಲ್ಲಾಭಕ್ಷ ಕೊಪ್ಪದ ಮತ್ತು ಆಸಿಫ್ ನಡಾಫ್ ಎಂದು ಗುರುತಿಸಲಾಗಿದೆ.

ಶನಿವಾರದಂದು ಬಾಲಕಿ ಎಂದಿನಂತೆ ಗ್ರಾಮದಲ್ಲಿ ಟ್ಯೂಷನ್ ಕ್ಲಾಸ್‌ಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಈ ಇಬ್ಬರು ಕಿಡಿಗೇಡಿಗಳು ಆಕೆಯನ್ನು ಅಡ್ಡಗಟ್ಟಿದ್ದಾರೆ. “ನಿಮ್ಮ ಅಣ್ಣ ನಿನ್ನನ್ನು ಅರ್ಜೆಂಟ್ ಆಗಿ ಕರೆಯುತ್ತಿದ್ದಾನೆ, ನಮ್ಮ ಜೊತೆ ಬಾ” ಎಂದು ಸುಳ್ಳು ಹೇಳಿ ನಂಬಿಸಲು ಯತ್ನಿಸಿದ್ದಾರೆ.

ಬಾಲಕಿ ಅವರ ಮಾತನ್ನು ನಂಬದೆ ತಡೆಯಲು ಯತ್ನಿಸಿದಾಗ, ಆಕೆಯನ್ನು ಬಲವಂತವಾಗಿ ವಾಹನಕ್ಕೆ ತಳ್ಳಿ ಅಪಹರಿಸಿದ್ದಾರೆ. ತದನಂತರ ಜನರಿಲ್ಲದ ನಿರ್ಜನ ಪ್ರದೇಶಕ್ಕೆ ವಾಹನ ಚಲಾಯಿಸಿಕೊಂಡು ಹೋಗಿ, ಬಾಲಕಿಯ ಮೇಲೆ ಇಬ್ಬರೂ ಸೇರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಕಾಮುಕರ ಕೃತ್ಯದಿಂದ ನೊಂದ ಬಾಲಕಿ ಕಣ್ಣೀರು ಹಾಕುತ್ತಾ ಮನೆಗೆ ಬಂದು ಪೋಷಕರಿಗೆ ವಿಷಯ ಮುಟ್ಟಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಬಾಲಕಿಯ ತಾಯಿ ತಕ್ಷಣವೇ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳಾದ ಅಲ್ಲಾಭಕ್ಷ ಹಾಗೂ ಆಸಿಫ್‌ನನ್ನು ವಶಕ್ಕೆ ಪಡೆದು, ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.