News Karnataka Kannada
Monday, April 29 2024
ವಿಶೇಷ

ಇಂದು ವಿಜಯದಶಮಿ ಸಂಭ್ರಮ: ಇದರ ಮಹತ್ವವೇನು ತಿಳಿಯಿರಿ

Vijayadashami celebrations today: Know its significance
Photo Credit : News Kannada

ದಸರಾ ಎಂದರೆ ಹೆಸರೇ ಹೇಳುವಂತೆ ಇದು ದಶಮಿ – ಹತ್ತನೆಯ ದಿನ. ಅಂದರೆ ದಸರಾ ಉತ್ಸವದ ಹತ್ತನೆಯ ದಿನ. ‘ದಶ ಅಹರ್’ – ದಶಹರ – ದಶರಾ – ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿ ಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವ ದಿನ.

ನವರಾತ್ರಿ ಹಬ್ಬದ ಕೊನೆಯ ದಿನ ಅಂದರೆ 10ನೇ ದಿನವನ್ನ ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಕ್ಯಾಲೆಂಡರ್ ಪ್ರಕಾರ ವಿಜಯದಶಮಿ ಹಬ್ಬವನ್ನು ಪ್ರತಿ ವರ್ಷ ಆಶ್ವಯುಜ ಮಾಸದ ಶುಕ್ಲ ಪಕ್ಷದ ಹತ್ತನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ಶ್ರೀರಾಮ ರಾವಣನ ವಧೆ ಮಾಡಿದ ಎನ್ನುವ ನಂಬಿಕೆ ಸಹ ಇದೆ.

ಈ ಕಾರಣದಿಂದಲೇ ಪ್ರತಿ ವರ್ಷ ವಿಜಯದಶಮಿಯಂದು ರಾವಣ ದಹನ ಮಾಡಲಾಗುತ್ತದೆ. ಪಂಚಾಂಗದ ಪ್ರಕಾರ ಈ ಬಾರಿ ಅಶ್ವಯುಜ ಮಾಸದ ಶುಕ್ಲ ಪಕ್ಷದ ದಶಮಿ ತಿಥಿ ಸೋಮವಾರ ಅಕ್ಟೋಬರ್ 23 ರಂದು ಸಂಜೆ 05.44 ಕ್ಕೆ ಪ್ರಾರಂಭವಾಗುತ್ತದೆ. ಹಾಗೆಯೇ, ಇದು 24 ಅಕ್ಟೋಬರ್ 2023 ರಂದು ಮಧ್ಯಾಹ್ನ 03:14 ಕ್ಕೆ ಮುಗಿಯುತ್ತದೆ. ಹಾಗಾಗಿ ಈ ವರ್ಷ ವಿಜಯದಶಮಿಯನ್ನು ಉದಯತಿಥಿಯ ಆಧಾರದ ಮೇಲೆ ನಾವು ಅಕ್ಟೋಬರ್ 24 ರಂದು ಆಚರಿಸಬೇಕು. ಈ ಬಾರಿಯ ವಿಜಯದಶಮಿ ಪೂಜೆಯ ಶುಭ ಮುಹೂರ್ತವು ಮಧ್ಯಾಹ್ನ 01:58 ರಿಂದ 02:43 ರವರೆಗೆ ಇರುತ್ತದೆ. ಅಭಿಜಿತ್ ಮುಹೂರ್ತದ ಶುಭ ಸಮ ಬೆಳಗ್ಗೆ 11:43  ನಿಂದ 12:28 ಮಧ್ಯಾಹ್ನ ದ ವರೆಗೆ ಇರಲಿದ್ದು, ಈ ಸಮಯದಲ್ಲಿ ಪೂಜೆ ಮಾಡಬಹುದು.

ವಿಜಯದಶಮಿಯ ಹಿನ್ನೆಲೆ ಏನು?: ಕಾಡೆಮ್ಮೆ ರೂಪದ ಮಹಿಷಾಸುರ ದೀರ್ಘ ತಪಸ್ಸು ಮಾಡಿ, ಯಾವುದೇ ಮನುಷ್ಯನಿಂದ, ದೇವರಿಂದ ಅಥವಾ ವಿಶಿಷ್ಟ ಶಕ್ತಿಯಿಂದ ತನ್ನನ್ನು ಸಂಹರಿಸಲು ಸಾಧ್ಯವಾಗಬಾರದು ಎಂದು ಬ್ರಹ್ಮನಿಂದ ವರವನ್ನು ಪಡೆದಿದ್ದನು. ವರ ಸಿಕ್ಕಿದ ಕೂಡಲೇ ಅಹಂಕಾರದಿಂದ ಜನರಿಗೆ ಮತ್ತು ದೇವತೆಗಳಿಗೆ ತೊಂದರೆ ಕೊಡಲು ಆರಂಭಿಸಿದ. ಈತನ ಉಪಟಳವನ್ನು ತಾಳಲಾರದೇ ದೇವತೆಗಳು ಆದಿಶಕ್ತಿಯನ್ನು ಪೂಜಿಸಿ ಮಹಿಷನನ್ನು ಹತ್ಯೆ ಮಾಡುವಂತೆ ಬೇಡಿಕೊಳ್ಳುತ್ತಾರೆ. ಪ್ರಾರ್ಥನೆ ಕೇಳಿದ ದೇವಿ ದುರ್ಗೆಯಾಗಿ ಸಿಂಹದ ಮೇಲೆ ಕುಳಿತು, ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಧರೆಗಿಳಿದಳು. ರಾಕ್ಷಸನಾದ ಮಹಿಷಾಸುರನನ್ನು ದಶಮಿಯ ದಿನ ಸಂಹಾರ ಮಾಡಿದಳು. ಅಂದಿನಿಂದ ದಶಮಿಯಂದು ಮಹಿಷಾಸುರನ್ನು ಕೊಂದು ವಿಜಯ ಸಿಕ್ಕಿದ್ದಕ್ಕೆ `ವಿಜಯದಶಮಿ’ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ.

ಕಲಿಯುಗದಲ್ಲೂ ಆಚರಣೆ: ನವಮಿಯಂದು ಆಯುಧಗಳಿಗೆ ಪೂಜೆ ಮಾಡಿ ದಶಮಿಯಂದು ದಂಡಯಾತ್ರೆಗೆ ಹೊರಟರೆ ವಿಜಯ ಸಿದ್ಧಿ ಎನ್ನುವ ನಂಬಿಕೆ ಈ ಹಿಂದೆ ರಾಜರಲ್ಲಿತ್ತು. ಹೀಗಾಗಿ ದಶಮಿಯಂದೇ ಪೂಜೆ ಸಲ್ಲಿಸಿ ದಂಡಯಾತ್ರೆಗೆ ಹೊರಡುತ್ತಿದ್ದರು. ಈ ಪದ್ದತಿ ಈಗಲೂ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ಕೆಲ ರಾಜವಂಶಸ್ಥರು ಸಾಂಕೇತಿಕವಾಗಿ ತಮ್ಮ ರಾಜ್ಯದ ಗಡಿಯನ್ನು ದಾಟಿ ಮತ್ತೆ ಹಿಂದಿರುಗುತ್ತಾರೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಸೀಮೋಲ್ಲಂಘನ ಮೈಸೂರಿನ ಒಡೆಯರ ಕಾಲದಲ್ಲಿ ಮುಂದುವರಿದಿದೆ.

ದಸರಾ ಹಬ್ಬವು ಅಸತ್ಯದ ವಿರುದ್ಧ ಸತ್ಯದ ವಿಜಯ ಮತ್ತು ಅಧರ್ಮದ ವಿರುದ್ಧ ಧರ್ಮದ ವಿಜಯವನ್ನು ಸೂಚಿಸುತ್ತದೆ. ಕೆಟ್ಟದ್ದರ ವಿರುದ್ಧ ಒಳ್ಳೆಯದು ಸಾಧಿಸಿದ ಗೆಲುವನ್ನು ಆಚರಿಸಲು ವಿಜಯ ದಶಮಿಯನ್ನು ಆಚರಿಸಲಾಗುತ್ತದೆ. ಯಾವುದೇ ಧರ್ಮ, ಮತಗಳ ಭೇದವಿಲ್ಲದೆ ಹಲವರು ಈ ಹಬ್ಬವನ್ನು ಆಚರಿಸುತ್ತಾರೆ. ಇದರೊಂದಿಗೆ ಈ ದಿನ ಚಂಡಿ ಪಾಠ ಅಥವಾ ದುರ್ಗಾ ಸಪ್ತಶತಿಯನ್ನು ಪಠಿಸುವುದು ಮತ್ತು ಹವನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು