News Karnataka Kannada
Monday, April 29 2024
ಸಂಪಾದಕೀಯ

ಸದ್ದಿಲ್ಲದೆ ಸುದ್ದಿಯಾದ ಬೆಲೆಯೇರಿಕೆ ಎಂಬ ಪೆಡಂಭೂತ: ಯಾವಾಗ ಕಡಿವಾಣ?

price rise
Photo Credit : By Author

ದೇಶದಲ್ಲಿ ಕಳೆದ ಹಲವು ದಿನಗಳಿಂದ ಬೆಲೆ ಏರಿಕೆಯದ್ದೇ ಸುದ್ದಿ. ಈರುಳ್ಳಿ, ಮೊಟ್ಟೆ, ತರಕಾರಿ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಿಂದ ಸಾಕಷ್ಟು ಸುದ್ದಿ ಮಾಡುತ್ತಿದೆ. ಬೆಲೆ ಏರಿಕೆ ಸಂಭವಿಸಲು ಕಾರಣಗಳು ಹಲವಾರು. . .

ಬೇಡಿಕೆ ಮತ್ತು ಸರಬರಾಜು ನಡುವಿನ ಅಂತರ ಇದಕ್ಕೆ ಬಹು ಮುಖ್ಯ ಕಾರಣ ಎನ್ನಬಹುದು. ಜಾಗತಿಕ ತಾಪಮಾನದ ವೈಪರೀತ್ಯ ಜಗತ್ತಿನ ಅತಿ ದೊಡ್ಡ ಸಮಸ್ಯೆಯಾಗಿದೆ. ಜಗತ್ತಿನ ಶ್ರೀಮಂತ ಮತ್ತು ಬಲಶಾಲಿ ರಾಷ್ಟ್ರಗಳು ಕೇವಲ ಸಭೆ ನಡೆಸಿ ಕೈತೊಳೆದುಕೊಳ್ಳುತ್ತಿವೆ. ನಿಜವಾಗಿ ವಾತಾವರಣ ಬದಲಾವಣೆ ತಡೆಯಲು ಏನು ಮಾಡಬೇಕು ಅದನ್ನು ಮಾತ್ರ ಮಾಡುತ್ತಿಲ್ಲ. ಹೀಗಾಗಿ ಆಯಾ ಋತುಗಳಲ್ಲಿ ಯಾವ ತರಕಾರಿ ಹಣ್ಣುಗಳು ಹೇರಳವಾಗಿ ಸಿಗುತ್ತಿದ್ದವು ಅವುಗಳಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಸಹಜವಾಗಿಯೇ ಬೆಲೆಯೇರಿಕೆ ಎನ್ನುವ ಪೆಡಂಭೂತ ಬಲಶಾಲಿಯಾಗಿದೆ.

ಇತ್ತೀಚೆಗೆ ಟೊಮೆಟೋ ಬೆಲೆ ಗಗನಕ್ಕೇರಿತ್ತು. ದೇಶದ ಪ್ರಮುಖ ನಗರಗಳಲ್ಲಿ ಟೊಮೇಟೊ ಬೆಲೆ 100 ರೂಪಾಯಿಗೂ ಹೆಚ್ಚಾಗಿತ್ತು. ಇಲಾಖೆಯ ಅಂಕಿಅಂಶಗಳ ಪ್ರಕಾರ ಗೋರಖ್‌ಪುರ(ಉತ್ತರ ಪ್ರದೇಶ) ಮತ್ತು ಬಳ್ಳಾರಿ(ಕರ್ನಾಟಕ)ಯಲ್ಲಿ ಅತಿ ಹೆಚ್ಚು ಅಂದರೆ ಕೆಜಿಗೆ 122 ರೂಪಾಯಿಗೆ ಟೊಮೆಟೊ ಮಾರಾಟವಾಗಿದೆ. ಟೊಮೆಟೊ ಶತಕ ಬಾರಿಸಿದೆ. ತರಕಾರಿ ಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದರು. ಇನ್ನು ಕೆಲವರು ಟೊಮೆಟೊ ಬದಲು ಹುಣಸೆ ಸೇರಿದಂತೆ ಇತರೆ ಪದಾರ್ಥವನ್ನ ಬಳಸಲು ಶುರು ಮಾಡಿದ್ದಾರೆ. ಅದರಂತೆ ಸಧ್ಯಕ್ಕೆ ಹೊಸ ಬೆಳೆ ಬರುವವರೆಗೂ ಟೊಮೆಟೊ ಬೆಲೆ ಕಡಿಮೆ ಆಗೋದಿಲ್ಲವೆಂದು ರೈತರು ಹೇಳಿದ್ದುಂಟು. ಅಲ್ಲದೆ ಅದೆಷ್ಟೋ ರೈತರ ಬದುಕನ್ನೇ ಈ ಟೊಮೊಟೊ ಕೃಷಿ ಬದಲಾಯಿಸಿತ್ತು. ಟೊಮೊಟೊ ಬೆಳೆಗಾರ ಲಕ್ಷ ಲಕ್ಷ ಸಂಪಾದನೆ ಮಾಡಿ ತನ್ನ ಜೀವನವನ್ನು ಕಂಡು ಕೊಂಡಿದ್ದಾನೆ.

ಟೊಮೆಟೊ ಬೆಲೆ ಏರಿಕೆಗೆ ಕಾರಣಗಳೇನು?
ಟೊಮೆಟೊ  ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದರೆ ಮಳೆ ಕೊರತೆ, ಟೊಮೆಟೊ ಬೆಳೆಯ ವ್ಯವಸಾಯದ ವೇಳೆ ಮಳೆಯ ಕೊರತೆ ಅಧಿಕವಾಗಿತ್ತು. ಇದೇ ವೇಳೆ ಟೊಮೆಟೊದಲ್ಲಿ ಎಲೆರೋಗವು ಕಾಣಿಸಿಕೊಂಡಿತ್ತು. ಈ ಎರಡು ಪ್ರಮುಖ ಕಾರಣಗಳಿಂದ ಈ ಬಾರಿ ಕಡಿಮೆ ಬೆಳೆ ಬೆಳೆದಿದ್ದಾರೆ. ಅಲ್ಲದೇ ಉತ್ತರ ಪ್ರದೇಶ, ಚತ್ತೀಸ್ ಘಡ್, ಡೆಲ್ಲಿಯಲ್ಲಿಯೂ ಟೊಮೆಟೊ  ಬೆಳೆ ಈ ವರ್ಷ ಕಡಿಮೆಯಾಗಿದೆ. ಹೀಗಾಗಿ ಈ ಭಾಗಗಳಿಂದ ನಮ್ಮ‌ ರಾಜ್ಯಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು, ಕರ್ನಾಟಕದಿಂದ ಈ ಭಾಗಗಳಿಗೆ ಟೊಮೆಟೊ  ರಪ್ತು ಮಾಡಲಾಗುತ್ತಿದೆ. ಈ ವರ್ಷ ಟೊಮೆಟೊಗೆ  ಹೊರರಾಜ್ಯಗಳಿಂದಲೂ ಅತ್ಯಧಿಕ ಬೇಡಿಕೆ ಇದ್ದು, ಬೇಡಿಕೆಗೆ ತಕ್ಕಂತೆ ಟೊಮೆಟೊ  ಸಿಗದ ಕಾರಣ ಹೆಚ್ಚಿನ ಬೆಲೆ ನಿಗಧಿ ಪಡಿಸಿ, ವ್ಯಾಪಾರ‌ ಮಾಡಲಾಗುತ್ತಿದೆ. ಅಲ್ಲದೇ ಪ್ರತಿಭಾರಿ ನಮ್ನ ರಾಜ್ಯಕ್ಕೆ ನಾಸಿಕ್ ಇಂದ ಟೊಮೆಟೊ  ಬರುತ್ತಿತ್ತು. ಆದ್ರೆ, ಈ ಬಾರಿ ನಾಸಿಕ್‌ನಲ್ಲಿಯು ಬೆಳೆ ಬಂದಿಲ್ಲ. ಹೀಗಾಗಿ ನಾಸಿಕ್ ,ತಮಿಳುನಾಡು, ಚನೈಗೆ ಕರ್ನಾಟಕದಿಂದ ರಫ್ತು ಮಾಡಲಾಗುತ್ತಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಟೊಮೆಟೊ ಬೆಲೆ ಜೂನ್ ಆರಂಭದಿಂದ ಸರಾಸರಿ 85-90% ರಷ್ಟು ಏರಿಕೆಯಾಗಿದೆ.

ಏಷ್ಯಾದಲ್ಲೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯನ್ನು ಹೊಂದಿರುವುದು ಕೋಲಾರ. ಮಾತ್ರವಲ್ಲದೆ, ಇದೇ ಜಿಲ್ಲೆಯಲ್ಲೇ ಅತಿ ಹೆಚ್ಚು ಟೊಮೆಟೊವನ್ನು ಬೆಳೆಯಲಾಗುತ್ತದೆ. ಆದರೆ ಈ ಬಾರಿ ಜಿಲ್ಲೆಯಲ್ಲಿ ಎಲೆ ಸುರುಳಿ ವೈರಸ್‌ನಿಂದಾಗಿ ಬೆಳೆ ಸರಿಯಾಗಿ ಆಗಿಲ್ಲ.

ಟೊಮೆಟೊ ಬಳಿಕ ಸದ್ದಿಲ್ಲದೇ ಹೆಚ್ಚಳವಾಗುತ್ತಿರುವ ಈರುಳ್ಳಿ ದರ:
ಸದ್ದಿಲ್ಲದಂತೆ ಈರುಳ್ಳಿ ದರ ಹೆಚ್ಚಳವಾಗುತ್ತಿದೆ. ಕಳೆದ ವಾರ ₹25 ಇದ್ದ ಈರುಳ್ಳಿ ದರ ಇದೀಗ ₹30 – ₹40 ತಲುಪಿದೆ. ಸೂಪರ್‌ ಮಾರುಕಟ್ಟೆಗಳಲ್ಲಿ ಕೆಜಿ ಈರುಳ್ಳಿಗೆ ₹45 ನಂತೆ ಮಾರಾಟ ಮಾಡಲಾಗುತ್ತಿದೆ. ಜೂನ್ ತಿಂಗಳಿನಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ. ಮುಂಗಾರು ಕೈಕೊಟ್ಟ ಕಾರಣ ರಾಜ್ಯದ ಹಲವೆಡೆ ಉತ್ತಮ ಬೆಳೆ ಬಂದಿಲ್ಲ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ರಾಜ್ಯದ ಹಲವು ಕಡೆಗಳಿಂದ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಈ ವರ್ಷ ರಾಜ್ಯದಲ್ಲಿ 4000 ಹೆಕ್ಟೇರ್ ಬೆಳೆ ಕೊರತೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ₹50 – ₹60 ಏರಿಕೆಯಾಗುವ ಸಾಧ್ಯತೆ ಇದೆ.

ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಈರುಳ್ಳಿಯ ಹೊಸ ಬೆಳೆ ಒಂದು ತಿಂಗಳು ವಿಳಂಬವಾಗಿದೆ. ಅಹ್ಮದ್‌ ನಗರದಲ್ಲಿಯೂ ಪೂರೈಕೆ ಕಡಿಮೆ ಇದೆ. ಹೀಗಾಗಿ, ಈರುಳ್ಳಿ ಬೆಲೆ ಏರಿಕೆಯಾಗಿದೆ. ದೇಶದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯ ಮಹಾರಾಷ್ಟ್ರ. ಇಲ್ಲಿ ಕಳೆದ ಒಂದು ವಾರದಲ್ಲಿ ಕ್ವಿಂಟಾಲ್‌ ಈರುಳ್ಳಿ ದರ ಶೇ. 48ರಷ್ಟು ಏರಿಕೆ ಕಂಡಿದೆ.  .

ಈರುಳ್ಳಿ ಬೆಲೆ ಏರಿಕೆಗೆ ಕಾರಣವೇನು?
ರೈತರು ಈಗ ಬಿತ್ತನೆ ಚಟುವಟಿಕೆಯಲ್ಲಿ ನಿರತರಾಗಿದ್ದು, ಲಾಸಲ್‌ಗಾಂವ್ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದ ಈರುಳ್ಳಿ ಭಾರಿ ಕುಸಿತ ಕಂಡಿದೆ. ಸಾಮಾನ್ಯವಾಗಿ ನಿತ್ಯ 20,000ದಿಂದ 25,000 ಕ್ವಿಂಟಲ್ ಈರುಳ್ಳಿ ಮಹಾರಾಷ್ಟ್ರದ ಲಾಸಲ್‌ಗಾಂವ್ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈಗ ಕೇವಲ 15,000 ಕ್ವಿಂಟಲ್ ಬರುತ್ತಿದ್ದು, ಬೆಲೆ ಭಾರಿ ಏರುತ್ತಿದೆ.

ಅತ್ತ ಈರುಳ್ಳಿ ಆಗಮನ ಕೂಡ ತಡವಾಗುತ್ತಿದೆ,  ಇನ್ನೊಂದು ಕಡೆ ನೆರೆಯ ಬಾಂಗ್ಲಾದಲ್ಲಿ ಈರುಳ್ಳಿಗೆ ಭಾರಿ ಬೇಡಿಕೆ ಬಂದಿದೆ. ಹೀಗಾಗಿ ಎರಡೂ ಕಾರಣದಿಂದ ದೇಶದಲ್ಲಿ ಈರುಳ್ಳಿಯ ಬೆಲೆ ಮುಗಿಲು ಮುಟ್ಟುತ್ತಿದೆ ಎನ್ನುತ್ತಿದ್ದಾರೆ ಲಾಸಲ್‌ಗಾಂವ್ ಮಾರುಕಟ್ಟೆಯ ವರ್ತಕರು. ಯಾವಾಗ ಮಾರುಕಟ್ಟೆಗಳಿಗೆ ಈರುಳ್ಳಿ ಪೂರಕೆ ಕಡಿಮೆ ಆಗುತ್ತದೆಯೋ ಆಗ ಅದರ ದರಗಳು ಗಣನೀಯವಾಗಿ ಹೆಚ್ಚಾಗುತ್ತದೆ.

ಏಷ್ಯಾದಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡ ಅಕ್ಕಿ ಬೆಲೆ:
ಇದರ ನಡುವೆ  ಅಕ್ಕಿ ಬೆಲೆ ಭಾರತ ಮಾತ್ರವಲ್ಲದೆ ಏಷ್ಯಾದಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಅಕ್ಕಿ ಬೆಲೆ ದಾಖಲೆ ಏರಿಕೆ ಕಂಡಿದ್ದು, ಕಳೆದ 15 ವರ್ಷಗಳಲ್ಲೇ ಅತಿ ಹೆಚ್ಚಿನ ಮಟ್ಟಕ್ಕೆ ಜಿಗಿದಿದೆ. ಶುಷ್ಕ ಹವಾಮಾನದಿಂದ ಥಾಯ್ಲೆಂಡ್‌ನಲ್ಲಿ ಅಕ್ಕಿ ಉತ್ಪಾದನೆ ಕುಸಿದಿದೆ. ಪ್ರತಿಟನ್‌ ಅಕ್ಕಿ ಬೆಲೆ 648 ಡಾಲರ್‌ಗೆ ಏರಿಕೆಯಾಗಿದೆ. ಇದು 2008ರ ನಂತರ ಬಲು ದುಬಾರಿ ಎಂದು ಸುದ್ದಿ ಸಂಸ್ಥೆ ಬ್ಲೂಂಬರ್ಗ್‌ ವರದಿ ಮಾಡಿದೆ. ಏಷ್ಯಾ ಮತ್ತು ಆಫ್ರಿಕಾದ ಶತಕೋಟಿ ಜನರ ಆಹಾರಕ್ಕೆ ಅಕ್ಕಿ ಅತ್ಯಗತ್ಯ ಮತ್ತು ಬೆಲೆ ಏರಿಕೆಯು ಹಣದುಬ್ಬರದ ಒತ್ತಡವನ್ನು ಹೆಚ್ಚಿಸುತ್ತಿದೆ. ಅಕ್ಕಿಯ ಅತಿ ದೊಡ್ಡ 2ನೇ ಪೂರೈಕೆದಾರ ಎಂಬ ಹಿರಿಮೆ ಸಾಧಿಸಿರುವ ಥಾಯ್ಲೆಂಡ್‌ ಸಂಕಷ್ಟಕ್ಕೆ ಸಿಲುಕಿದೆ. ದೇಶೀಯ ಮಾರುಕಟ್ಟೆಯನ್ನು ಕಾಪಾಡಲು ಭಾರತ ಅಕ್ಕಿ ರಫ್ತಿಗೆ ಕಡಿವಾಣ ಹಾಕಿದೆ. ಇದರಿಂದ ಕೆಲ ದೇಶಗಳು ಕೊರತೆ ಭೀತಿಯಿಂದ ಹೆಚ್ಚು ಖರೀದಿ ಮಾಡಿವೆ. ಇದು ಕೂಡ ಬೆಲೆ ಏರಿಕೆಯನ್ನು ಉತ್ತೇಜಿಸಿದೆ.

ಕಳೆದ ಕೆಲವು ವಾರಗಳಿಂದ ಅಕ್ಕಿಯ ಬೆಲೆಯು ಸರಾಸರಿ 15% ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಭಾರೀ ಮಳೆಯಿಂದಾಗಿ ಅಕ್ಕಿ ಉತ್ಪಾದನೆ ಕಡಿಮೆಯಾಗಿದೆ.

ಸೋನಾ ಮಸೂರಿ ಅಕ್ಕಿಯ ಹೋಲ್ ಸೇಲ್ ಬೆಲೆ ಪ್ರತಿ ಕೆಜಿಗೆ ₹ 50 ರಿಂದ ₹ 60 ರೂಗೆ ಏರಿಕೆಯಾಗಿದೆ. ರಿಟೇಲ್ ದರ ಸಾಮಾನ್ಯವಾಗಿ ಹೋಲ್ ಸೇಲ್ ಬೆಲೆಗಿಂತ ಕನಿಷ್ಠ 10% ಹೆಚ್ಚಾಗಿದೆ. ದಕ್ಷಿಣ ಕರ್ನಾಟಕದ ಜನಪ್ರಿಯ ರಾಜಮುಡಿ ಅಕ್ಕಿ ಕೆ.ಜಿಗೆ ₹ 62 ರಿಂದ ₹ 64 ಇತ್ತು. ಆದ್ರೆ ಈಗ ₹ 70 ರಿಂದ ₹ 74 ರವರೆಗೆ ತಲುಪಿದೆ.

ಇವೆಲ್ಲದರ ನಡುವೆ ರಾಜಕೀಯ ಪಕ್ಷಗಳು ಜನಸಾಮಾನ್ಯರನ್ನು ಕುಣಿಸುತ್ತಿದೆ. ಈ  ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 5ಕೆಜಿ ಉಚಿತ ಅಕ್ಕಿ ನೀಡುವುದಾಗಿ  ಘೋಷಣೆ ಮಾಡಿತ್ತು. ಸರ್ಕಾರ ಏನೋ ಅಧಿಕಾರಕ್ಕೆ ಬಂತು. ಆದರೆ ವಾಗ್ಧಾನ ಮಾತ್ರ ಪಾಲಿಸಲಿಲ್ಲ. ಬಡವರಿಗೆ ಉಚಿತ ಅಕ್ಕಿ ಕೊಡುವ ಕೈ ಯೋಜನೆ ಜಾರಿಗೆ ಬರಲೇ ಇಲ್ಲ. ಅಕ್ಕಿಯ ಸರಬರಾಜು ಇಲ್ಲದೆ, ಅಕ್ಕಿಯ ಕೊರತೆಯಿಂದ ಕಾಂಗ್ರೆಸ್ ಸರ್ಕಾರ ಅಕ್ಕಿಯ ಬದಲಿಗೆ ಹಣ ನೀಡಲು ಮುಂದಾಗಿದೆ. ಈಗೀರುವಾಗ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ನಾಡಿಗೆ ದರಿದ್ರ ಬರ ಬರುತ್ತದೆ ಎಂಬ ಪ್ರತೀತಿಯಿದೆ. ಯಾಕೋ ಈಗಲೂ ಅದೇ ವಾತಾವರಣವಿದೆ. ಸರಿಯಾಗಿ ಮಳೆಯೂ ಆಗುತ್ತಿಲ್ಲ’ ಎಂದು ಜೆಡಿಎಸ್ ಪಕ್ಷದ ನಾಯಕ ಎಚ್ ಡಿ ಕುಮಾರ ಸ್ವಾಮಿ ವ್ಯಂಗ್ಯವಾಡಿದ್ದು ಉಂಟು.

ಒಟ್ನಲ್ಲಿ ಬೆಲೆ ಏರಿಕೆ ಬಿಸಿಯಲ್ಲಿ ಜನರು ಪರದಾಡುತ್ತಿದ್ದಾರೆ. ದೇಶಾದ್ಯಂತ ಟೊಮೆಟೊ ಈರುಳ್ಳಿ, ಅಕ್ಕಿ  ಬೆಲೆಯದ್ದೇ ಸುದ್ದಿ ಸದ್ದು ಮಾಡುತ್ತಿದೆ. ಟೊಮೆಟೊ ಬೆಲೆ ಏರಿಕೆಯಾದಾಗ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಅಲರ್ಟ್ ಆಗಿರುವ ಕೇಂದ್ರ ಸರ್ಕಾರ ಈರುಳ್ಳಿ ಬೆಲೆ ಏರಿಕೆ ಆಗದಂತೆ, ಬೆಲೆ ನಿಯಂತ್ರಣಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಆದ್ರೆ ಈ ಕ್ರಮ ಅದೆಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ? ಈರುಳ್ಳಿ ಬೆಲೆ ಇನ್ನೆಷ್ಟು ಏರಿಕೆಯಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು