News Karnataka Kannada
Friday, May 17 2024
ನುಡಿಚಿತ್ರ

ಬ್ರಿಟೀಷರು ಜೆಸ್ಸಿ ಎಂದು ಕರೆದರೂ ಬದಲಾಗದ ಅಬ್ಬಿ

Photo Credit :

ಬ್ರಿಟೀಷರು ಜೆಸ್ಸಿ ಎಂದು ಕರೆದರೂ ಬದಲಾಗದ ಅಬ್ಬಿ

ಸಾಮಾನ್ಯವಾಗಿ ಕೊಡಗಿನಲ್ಲಿ ಪ್ರತಿ ಮುಂಗಾರು ಆರಂಭವಾಗುವಾಗ ನಿಸರ್ಗ ಹಸಿರ ಹೊದಿಕೆಯನ್ನೊದ್ದು ಥಳಥಳಿಸುತ್ತಿದ್ದರೆ ಬೆಟ್ಟದ ಮೇಲಿನ ಗುಡ್ಡದ ಕೆಳಗಿನ ಹೆಬ್ಬಂಡೆಗಳ ಮೇಲೆ ಜಲಪಾತಗಳು ಮೈಕೈ ತುಂಬಿಕೊಂಡ ಬೆಡಗಿಯರಂತೆ ವಯ್ಯಾರದಿಂದ ಬಳುಕುತ್ತವೆ.

ಹಿಂದೆ ವರ್ಷದ ಆರು ತಿಂಗಳು ಮಳೆ ಸುರಿಯುತ್ತಿತ್ತು. ಅವತ್ತಿನ ಮಳೆ ಈಗಿನಂತೆ ಅನಾಹುತಕಾರಿಯಾಗಿರಲಿಲ್ಲ. ಸದಾ ಜಿಟಿ ಜಿಟಿ ಸುರಿಯುತ್ತಾ ನಡುಮಳೆಗಾಲದ ಅವಧಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿತ್ತು. ಹೀಗಾಗಿ ಭೂಮಿಯಲ್ಲಿ ಅಂತರ್ಜಲ ಹೆಚ್ಚಾಗಿ ನದಿ ತೊರೆಗಳು ಬತ್ತದೆ ತುಂಬಿ ಹರಿಯುತ್ತಿದ್ದವು. ನದಿ, ತೊರೆಗಳಿಂದ ಸೃಷ್ಠಿಯಾದ ಜಲಪಾತಗಳು ಕೂಡ ಸೊರಗದೆ ಧುಮ್ಮಿಕ್ಕುತ್ತಿದ್ದವು. ಹೀಗೆ ಧುಮುಕುವ ಜಲಪಾತಗಳ ಪೈಕಿ ಮಡಿಕೇರಿ ಬಳಿಯಿರುವ ಕೆ.ನಿಡುಗಣೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಅಬ್ಬಿ ಜಲಪಾತ ಒಂದಾಗಿದೆ.

ಮಡಿಕೇರಿಗೆ ಸಮೀಪವಿರುವುದರಿಂದ ಪ್ರಮುಖ ಪ್ರವಾಸಿ ತಾಣವಾಗಿ ಹೆಸರುವಾಸಿಯಾಗಿದ್ದು, ಸದಾ ತನ್ನದೇ ಆದ ಸೌಂದರ್ಯದಿಂದ ನಿಸರ್ಗ ಪ್ರೇಮಿಗಳ ಮನ ತಣಿಸುತ್ತಿದೆ.

ಇತರೆ ಜಲಧಾರೆಗಳಿಗೆ ಹೋಲಿಸಿದರೆ ಇದು ಸ್ವಲ್ಪ ಭಿನ್ನ ಏಕೆಂದರೆ ಮಡಿಕೇರಿಯಲ್ಲಿ ಮಳೆ ಸುರಿದರೆ ಅಬ್ಬಿ ಜಲಪಾತ ಭೋರ್ಗರೆಯುತ್ತದೆ. ಅದಕ್ಕೆ ಕಾರಣವೂ ಇದೆ ಮಡಿಕೇರಿಯಲ್ಲಿ ಬಿದ್ದ ಮಳೆನೀರೆಲ್ಲಾ ಒಟ್ಟಾಗಿ ಹರಿದು ಈ ಜಲಪಾತವನ್ನು ಸೇರುತ್ತದೆ. ಆಗ ಅದರ ಸೌಂದರ್ಯ ಇಮ್ಮಡಿಯಾಗುತ್ತದೆ.

ಮೋಹಕ ಜಲಪಾತ: ಮಡಿಕೇರಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಅಬ್ಬಿ ಜಲಪಾತ ನಿಜಕ್ಕೂ ಒಂದು ಮೋಹಕ ಜಲಪಾತವೇ… ಈ ಜಲಪಾತವನ್ನು ನೋಡಲು ತೆರಳುವವರಿಗೆ ಮಡಿಕೇರಿಯಿಂದ ಜಲಪಾತದವರೆಗೆ ಯಾವುದೇ ಬಸ್ ಸೌಕರ್ಯವಿಲ್ಲ. ಹಾಗಾಗಿ ಮಡಿಕೇರಿಯಿಂದ ಬಾಡಿಗೆಗೆ ಆಟೋ, ಜೀಪು ಅಥವಾ ಸ್ವಂತ ವಾಹನಗಳಲ್ಲಿ ತೆರಳಬಹುದು. ನಡೆದೇ ಹೋಗುವುದಾದರೆ ಅದರ ಮಜಾವೇ ಬೇರೆ… ಅಂಕುಡೊಂಕಾದ ರಸ್ತೆಯಲ್ಲಿ ಕಾಡು, ಕಾಫಿ, ಏಲಕ್ಕಿ ತೋಟದ ನಡುವೆ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಿದ್ದರೆ ದಾರಿ ಸಾಗುವುದೇ ಗೊತ್ತಾಗುವುದಿಲ್ಲ. ಇನ್ನೇನು ಕೆಲವೇ ಕಿ.ಮೀ. ಅಂತರಗಳಲ್ಲಿ ಜಲಪಾತ ಇದೆ ಎನ್ನುವುದು ಭೋರ್ಗರೆಯುವ ಸದ್ದಿಗೆ ಗೊತ್ತಾಗಿ ಬಿಡುತ್ತದೆ. ಗುಡ್ಡದಲ್ಲಿ ತೋಟದ ನಡುವೆ ರಭಸದಿಂದ ಭೋರ್ಗರೆಯುತ್ತಾ ಹರಿಯುವ ನದಿ ನಮಗೆ ರಸ್ತೆಯಿಂದಲೇ ಕಾಣಸಿಗುತ್ತದೆ. ಅಲ್ಲಿಂದ ಮುಂದೆ ಇಳಿಜಾರು ರಸ್ತೆಯಲ್ಲಿ ಸಾಗಿದರೆ ನಮಗೆ ಸಮತಟ್ಟಾದ ವಾಹನ ನಿಲುಗಡೆಯ ಸ್ಥಳ ಕಾಣಸಿಗುತ್ತದೆ. ಅಲ್ಲಿಂದ ಎಡಕ್ಕೆ ಕಾಫಿ ತೋಟದ ಮಧ್ಯೆ ನಡೆಯುತ್ತಾ ಹೋದರೆ ಜಲಪಾತದ ಭೋರ್ಗರೆತ ಕಿವಿಗೆ ಬಡಿಯುತ್ತದೆ. ಆ ನಂತರ ಕೆಳಕ್ಕೆ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದರೆ ಅಬ್ಬಿ ಜಲಪಾತದ ಸನಿಹಕ್ಕೆ ಹೋಗಬಹುದು.

ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲಿಯೂ ಮಳೆಗಾಲದಲ್ಲಿ ಇದರ ರೌದ್ರಾವತಾರವನ್ನು ಹತ್ತಿರದಿಂದ ನೋಡಿದರೆ ಆ ಸುಂದರ ಕ್ಷಣಗಳನ್ನು ಖಂಡಿತಾ ಮರೆಯಲಾರರು. ಜಲಪಾತದ ಸೊಬಗನ್ನು ಹತ್ತಿರದಿಂದ ಸವಿಯಲೆಂದೇ ಇತ್ತೀಚೆಗೆ ಅಡ್ಡಲಾಗಿ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ನಿಂತು ಜಲಪಾತದ ಸೌಂದರ್ಯವನ್ನು ಮನದಣಿಯೆ ಸವಿಯಬಹುದು.

ಈ ಜಲಪಾತ ನೆರವಂಡ ನಾಣಯ್ಯ ಎಂಬುವರ ಕಾಫಿ, ಏಲಕ್ಕಿ ತೋಟಗಳ ನಡುವೆ ನಿರ್ಮಿತಗೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿಗೆ ಭೇಟಿ ನೀಡಿದ ಬ್ರಿಟೀಷರು ಇದರ ಸೌಂದರ್ಯವನ್ನು ನೋಡಿ ಆನಂದಪಟ್ಟು ಕೊಡಗಿನ ಪ್ರಥಮ ಧರ್ಮಗುರುಗಳ ಮಗಳು ಜೆಸ್ಸಿಯ ಹೆಸರನ್ನು ಈ ಫಾಲ್ಸ್‍ಗೆ ಇಟ್ಟು ಜೆಸ್ಸಿ ಫಾಲ್ಸ್ ಎಂದು ಕರೆದಿದ್ದರು. ಆದರೆ ಸ್ಥಳೀಯರು ಹಿಂದೆ ಇದನ್ನು ಮಡಿಕೇರಿ ತೊರೆ, ಮುತ್ತಾರ್‍ಮುಟ್ಟು ತೊರೆ ಎಂದು ಕರೆಯುತ್ತಿದ್ದರು ಎನ್ನಲಾಗಿದೆ. ಕೊಡವ ಭಾಷೆಯಲ್ಲಿ ‘ಅಬ್ಬಿ’ ಎಂದರೆ ತೊರೆ ಎಂದರ್ಥ ಕೊಡವ ಭಾಷೆಯ ಅಬ್ಬಿ ಇಂದು ಅಬ್ಬಿ ಫಾಲ್ಸ್ ಆಗಿದೆ. ಮಳೆಗಾಲದಲ್ಲಿ ಕುಂಬದ್ರೋಣ ಮಳೆ ಸುರಿದು ನದಿ ಉಕ್ಕಿಹರಿದಾಗ ಜಲಪಾತ ರೌದ್ರಾವತಾರ ತಾಳುತ್ತದೆ.

ಅನಾಹುತಕಾರಿ ಜಲಪಾತ: ಅಬ್ಬಿ ಜಲಪಾತ ನೋಡಲು ಎಷ್ಟೊಂದು ಸುಂದರವಾಗಿದೆಯೋ ಅಷ್ಟೇ ಅನಾಹುತಕಾರಿಯೂ ಆಗಿದೆ ಎಂಬುವುದು ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಬೇಸಿಗೆಯ ದಿನಗಳಲ್ಲಿ ಜಲಪಾತದಲ್ಲಿ ನೀರಿನ ಭೋರ್ಗರೆತ ಕಡಿಮೆಯಾದಾಗ ಹೆಚ್ಚಿನ ಪ್ರವಾಸಿಗರು ಜಲಧಾರೆಯಾಗಿ ಧುಮುಕಿ ಬಳಿಕ ನದಿಯಾಗಿ ಹರಿದು ಹೋಗುವ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಜಲಪಾತದಿಂದ ಸ್ವಲ್ಪ ದೂರದಲ್ಲಿ ತೂಗುಸೇತುವೆಯ ಕೆಳಭಾಗದಲ್ಲಿ ಸ್ನಾನ ಮಾಡಿದರೆ ಅಥವಾ ಹರಿಯುವ ನೀರಿನಲ್ಲಿ ಆಟವಾಡಿದರೆ ತೊಂದರೆಯಿಲ್ಲ. ಆದರೆ ಕೆಲವರು ಜಲಪಾತದ ಬಳಿ ಹಾಕಲಾಗಿರುವ ಎಚ್ಚರಿಕೆಯ ನಾಮಫಲಕವನ್ನೂ ಗಮನಿಸದೆ ನೇರವಾಗಿ ಜಲಪಾತದ ತಳಭಾಗಕ್ಕೆ ತೆರಳಿ ಧುಮುಕುವ ಜಲಧಾರೆಗೆ ತಲೆಕೊಟ್ಟು ಸ್ನಾನಮಾಡುವ ಸಾಹಸ ಮಾಡುತ್ತಾರೆ. ಇದು ಎಷ್ಟೊಂದು ಅಪಾಯಕಾರಿ ಎಂಬುವುದಕ್ಕೆ ಇದುವರೆಗೆ ಇಲ್ಲಿನ ಸುಳಿಗೆ ಸಿಲುಕಿ ಸಾವನ್ನಪ್ಪಿರುವ ಸುಮಾರು 52 ಮಂದಿ ಸಾಕ್ಷಿಯಾಗುತ್ತಾರೆ.

ಇನ್ನು ಕೊಡಗಿಗೆ ಬರುವ ದೂರದ ಪ್ರವಾಸಿಗರಿಗೆ ಇಲ್ಲಿ ಹರಿಯವ ನೀರೆಲ್ಲಾ ಕಾವೇರಿ ನೀರು ಎಂಬ ನಂಬಿಕೆ. ಹಾಗಾಗಿ ಅಬ್ಬಿಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರು ಕೂಡ ಜಲಪಾತದಲ್ಲಿ ಸ್ನಾನ ಮಾಡುವುದು ಪವಿತ್ರ ಎಂದುಕೊಳ್ಳುತ್ತಾರೆ. ಅಷ್ಟೇ ಅಲ್ಲ ಈ ನೀರನ್ನು ಕೆಲವರು ಪವಿತ್ರ ತೀರ್ಥ ಎಂದು ತಮ್ಮೊಂದಿಗೆ ಕೊಂಡೊಯ್ಯವ ಪ್ರಯತ್ನವನ್ನು ಮಾಡುತ್ತಾರೆ. ದಯವಿಟ್ಟು ಇಲ್ಲಿ ಪ್ರವಾಸಿಗರು ಗಮನಿಸಬೇಕಾಗಿರುವುದೇನೆಂದರೆ ಮಡಿಕೇರಿ ನಗರದ ಸಮಸ್ತ ಕೊಳಚೆ ನೀರು ಹರಿದು ಬಂದು ಇದೇ ಜಲಪಾತದಲ್ಲಿ ಧುಮುಕುತ್ತದೆ. ಈ ಕೊಳಚೆ ನೀರಿಗೆ ಹಲವು ನದಿ ತೊರೆಗಳು ಸೇರುವುದರಿಂದ ಜಲಪಾತವನ್ನು ತಲುಪುವ ವೇಳೆಗೆ ನೀರು ಶುದ್ಧವಾಗಬಹುದು ಆದರೂ ಎಚ್ಚರವಾಗಿರುವುದು ಒಳಿತು. ಇನ್ನಾದರೂ ಪ್ರವಾಸಿಗರು ಅಬ್ಬಿಜಲಪಾತದ ಸೌಂದರ್ಯವನ್ನು ದೂರದಿಂದಲೇ ನೋಡಿ ಹಿಂತಿರುಗಿದರೆ ಅಷ್ಟೇ ಸಾಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು