News Karnataka Kannada
Saturday, May 11 2024
ನುಡಿಚಿತ್ರ

ಕಾನನದ ಅಜ್ಞಾತ ಜಲಧಾರೆ ಹಾಲೇರಿ ಫಾಲ್ಸ್

Photo Credit :

ಕಾನನದ ಅಜ್ಞಾತ ಜಲಧಾರೆ ಹಾಲೇರಿ ಫಾಲ್ಸ್

ನಿಸರ್ಗ ಸೌಂದರ್ಯದ ನೆಲೆವೀಡಾದ ಕೊಡಗಿನಲ್ಲಿ ಮಳೆಗಾಲ ಬಂದಾಗ ಸುರಿಯುವ ಮಳೆಗೆ ಬೆಟ್ಟಗುಡ್ಡಗಳ ಮೇಲೆ, ಕಾಫಿ ತೋಟಗಳ ನಡುವೆ ಹುಟ್ಟಿ ಹರಿಯುವ ಹೊಳೆ, ತೊರೆಗಳು ಧುಮ್ಮಿಕ್ಕಿ ಹರಿಯುವಾಗ ಸುಂದರ, ರಮಣೀಯ ಜಲಧಾರೆಗಳನ್ನು ಸೃಷ್ಠಿ ಮಾಡಿಬಿಡುತ್ತವೆ.


ಹೀಗೆ ಸೃಷ್ಠಿಯಾಗುವ ಜಲಧಾರೆಗಳು ಯಾರದ್ದೋ ಕಾಫಿ ತೋಟದಲ್ಲಿ, ಕಾಡಿನಲ್ಲಿರುವುದರಿಂದ ಯಾರ ಗಮನಕ್ಕೂ ಬಾರದೆ ತನ್ನ ಪಾಡಿಗೆ ತಾನು ಎಂಬಂತೆ ಧುಮುಕುತ್ತಿರುತ್ತವೆ. ಮಳೆಗಾಲದ ಮಳೆಗೆ ಮೈಯೊಡ್ಡಿ, ರಕ್ತಹೀರುವ ಜಿಗಣೆಗೆ ಹೆದರದೆ, ಬೆಟ್ಟಗುಡ್ಡವನ್ನೇರಿ, ಕಲ್ಲು, ಮುಳ್ಳಿನ ರಸ್ತೆಯಲ್ಲಿ ಸಾಗುತ್ತೇನೆ ಎಂಬ ಛಲವಿದ್ದರೆ ಈ ಅಜ್ಞಾತ ಜಲಧಾರೆಗಳನ್ನು ಹತ್ತಿರದಿಂದ ನೋಡಿ ಖಷಿಪಡಬಹುದು.

ಹಾಗೆ ನೋಡಿದರೆ ಕೊಡಗಿನಲ್ಲಿ ಅಸಂಖ್ಯಾತ ಜಲಧಾರೆಗಳಿವೆ. ಆದರೆ ಅವುಗಳ ಪೈಕಿ ಕೆಲವೇ ಕೆಲವು ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಗಳಿರುವುದರಿಂದ ಅಲ್ಲಿಗೆ ಪ್ರವಾಸಿಗರು ತೆರಳುವ ಮೂಲಕ ಹೆಸರುವಾಸಿಯಾಗಿವೆ. ಇನ್ನುಳಿದಂತೆ ಹೆಚ್ಚಿನ ಜಲಧಾರೆಗಳು ಯಾರ ಗಮನಕ್ಕೂ ಬಾರದೆ ಪ್ರವಾಸಿಗರಿಂದ ದೂರವಾಗಿವೆ.

ಇಂತಹ ಜಲಧಾರೆಗಳ ನಡುವೆ ಮಡಿಕೇರಿಗೆ ಸುಮಾರು 10ಕಿ.ಮೀ ದೂರದಲ್ಲಿರುವ ಹಾಲೇರಿ ಫಾಲ್ಸ್ ಒಂದಾಗಿದೆ. ಇದನ್ನು ನೋಡಬೇಕಾದರೆ ಮಡಿಕೇರಿ-ಮೈಸೂರು ಹೆದ್ದಾರಿಯಲ್ಲಿ ಸುಮಾರು ಒಂಬತ್ತು ಕಿ.ಮೀ. ಸಾಗಿದರೆ ಕೆದಕಲ್ ಸಿಗುತ್ತದೆ. ಅಲ್ಲಿಂದ ಎಡಕ್ಕೆ ಹಾಲೇರಿಗೆ ತೆರಳುವ ರಸ್ತೆಯಲ್ಲಿ ಒಂದು ಕಿ.ಮೀ.ನಷ್ಟು ಹೋಗಿ ಅಲ್ಲಿಂದ ಮೋದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯತ್ತ ತಿರುಗಿದರೆ ಜಲಧಾರೆ ಎದುರಾಗುತ್ತದೆ. ಸುಮಾರು ಐವತ್ತು ಅಡಿ ಎತ್ತರದಿಂದ ಕಲ್ಲುಬಂಡೆಗಳ ಮೇಲಿನಿಂದ ಧುಮುಕುವ ಈ ಜಲಪಾತ ಪುಟ್ಟದಾದರೂ ಅದ್ಭುತವಾಗಿದೆ.

ಕಾಫಿ ತೋಟದ ನಡುವೆ ಹೆಬ್ಬಂಡೆ ಮೇಲಿನಿಂದ ಎರಡು ಹಂತದಲ್ಲಿ ಧುಮುಕುವ ಜಲಧಾರೆ. ಮೊದಲಿಗೆ ಐವತ್ತು ಅಡಿ ಎತ್ತರದಿಂದ ರಭಸದಿಂದ ಧುಮುಕುತ್ತದೆಯಾದರೂ ಬಳಿಕ ಹತ್ತು ಅಡಿ ಎತ್ತರದಿಂದ ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ಹರಿದು ಹೋಗುತ್ತದೆ.

ಸಾಮಾನ್ಯವಾಗಿ ಸಮೀಪದ ತೋಟಕ್ಕೆ ಕೆಲಸಕ್ಕೆ ಬರುವ ಕಾರ್ಮಿಕರು ಹೊರತುಪಡಿಸಿದರೆ ಹೆಚ್ಚಿನವರು ಯಾರೂ ಇದರತ್ತ ಸುಳಿಯುವುದಿಲ್ಲ. ಹೀಗಾಗಿ ಮಳೆಗಾಲದಲ್ಲಿ ಮಳೆ ಸುರಿದಾಗ ತನ್ನ ಚೆಲುವನ್ನು ಪ್ರದರ್ಶಿಸಿ ಬೇಸಿಗೆ ಬರುತ್ತಿದ್ದಂತೆ ಹೆಬ್ಬಂಡೆಯಲ್ಲೇ ಲೀನವಾಗಿ ಬಿಡುತ್ತದೆ.

ಕಾನನದ ಬೆಡಗಿಯಂತೆ ಕಂಗೊಳಿಸುವ ಹಾಲೇರಿ ಫಾಲ್ಸ್ ಅನ್ನು ವೀಕ್ಷಿಸಬೇಕಾದರೆ ಮಳೆಗಾಲದ ದಿನಗಳು ಉತ್ತಮ. ಮಳೆ ಕಡಿಮೆಯಾದಾಗ ಇದರ ಚೆಲುವು ಕೂಡ ಇಳಿದು ಬಿಡುತ್ತದೆ. ಸಂಬಂಧಿಸಿದ ಗ್ರಾಮಪಂಚಾಯಿತಿ ಇದರತ್ತ ಗಮನಹರಿಸಿ ಅಭಿವೃದ್ಧಿ ಪಡಿಸಿದ್ದೇ ಆದರೆ ಈ ಜಲಧಾರೆ ಪ್ರವಾಸಿಗರ ಸೆಳೆಯುವುದರಲ್ಲಿ ಸಂಶಯವಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು