News Karnataka Kannada
Sunday, May 19 2024
ನುಡಿಚಿತ್ರ

‘ಇಂದ್ರಪ್ರಸ್ಥ’ ಅಂಗಣದಲ್ಲಿ ಮಕ್ಕಳ ಕಲರವ

Photo Credit :

'ಇಂದ್ರಪ್ರಸ್ಥ' ಅಂಗಣದಲ್ಲಿ ಮಕ್ಕಳ ಕಲರವ

ಉಜಿರೆ: ಕೇವಲ ಹಿರಿತಲೆಗಳಿಗೆ ಮಾತ್ರ ಸೀಮಿತವಾಗಿದ್ದ ಸಾಹಿತ್ಯ ಸಮ್ಮೇಳನಗಳು ಈ ಬಾರಿ ಹೊಸತೊಂದು ಪರಿಕಲ್ಪನೆಯ ಮೂಲಕ ಇನ್ನಷ್ಟು ಆಕರ್ಷಣೀಯವಾಗಿಸುವ ಪ್ರಯತ್ನ ಉಜಿರೆಯಲ್ಲಿ ನಡೆಯಿತು.ಮಕ್ಕಳಿಗಾಗಿ ಸಮ್ಮೇಳನ ನಡೆಸುವ ಮೂಲಕ ಸಮ್ಮೇಳನ ಪರಂಪರೆಯಲ್ಲಿ ಹೊಸತೊಂದು ದಾಖಲೆ ಬರೆಯಲಾಯಿತು.

ಅದರ ವಿವರ ಹೀಗಿದೆ…ಸಭಾಂಗಣದ ತುಂಬೆಲ್ಲಾ ಕಿಕ್ಕಿರಿದ ಪುಟಾಣಿಗಳು, ಅತ್ತಿಂದಿತ್ತ ಓಡಾಡುತ್ತಿರುವ ವಿವಿಧ ಸಾಹಿತಿಗಳ, ಶರಣರ ವೇಷ ತೊಟ್ಟ ವಿದ್ಯಾರ್ಥಿಗಳು. ಸಾಹಿತ್ಯ ಸಂಭ್ರಮದಲ್ಲಿ ಹೊಸದೊಂದು ಲೋಕವೇ ಮೈದಳೆದಂತೆ ಸಿಂಗಾರಗೊಂಡ ಎಸ್.ಡಿ.ಎಂಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಕಂಡುಬಂದ ದೃಶ್ಯವಿದು.

ದಕ್ಷಿಣ ಕನ್ನಡ ಜಿಲ್ಲೆಯ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಗೊಂಡ ಎರಡನೆಯ ದಿನ ವಿನೂತನವಾಗಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ಮಕ್ಕಳು ಅತ್ಯಾಸಕ್ತರಾಗಿ ಭಾಗವಹಿಸಿದರು. ತಾಲೂಕಿನ ಸುಮಾರು 60 ಶಾಲೆಗಳಿಂದ ಆಗಮಿಸಿದ್ದ ಪುಟಾಣಿಗಳು ಹೊಸ ರೀತಿಯ ಸಾಹಿತ್ಯ ಪರಿಚಯಕ್ಕೆ ತಮ್ಮನ್ನು ತಾವು ಒಪ್ಪಿಸಿಕೊಂಡ ಪರಿ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸಿತು.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ದಂಪತಿಗಳ ಚಿಂತನೆಯೊಂದಿಗೆ ಯಾವುದೇ ಸ್ಪರ್ಧೆಗಳಿಲ್ಲದಂತೆ ವಿದ್ಯಾರ್ಥಿಗಳಿಗೆ ಸಾಹಿತ್ಯದ ವೇದಿಕೆ ಒದಗಿಸುವ ವಿನೂತನ ಕಾರ್ಯಕ್ರಮ ವಿಭಿನ್ನವಾಗಿ ಮೂಡಿಬಂತು.
ಉಡುಪಿ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ರಾಮಚಂದ್ರ ಭಟ್ ಪುರಾಣ ಕಥೆಗಳು ಆದರ್ಶವಾದ ಬಗೆಯನ್ನು ಮಕ್ಕಳಿಗೆ ವಿವರವಾಗಿ ತಿಳಿಸಿದರು.

ಸುಮಧುರ ಸ್ವರದ ಅನನ್ಯಾ: ತನ್ನ ಏಳನೇ ವಯಸ್ಸಿನಲ್ಲೇ ‘ಎದೆತುಂಬಿ ಹಾಡುವೆನು’ ಕಾರ್ಯಕ್ರಮದ ಮೂಲಕ ಚಿರಪರಿಚಿತಳಾದ ಉಜಿರೆಯ ಅನನ್ಯಾ, ಮಕ್ಕಳ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದರು. ಎಚ್.ಎಸ್.ವೆಂಕಟೇಶ್ ಮೂರ್ತಿಯವರ ‘ಅಮ್ಮಾ ನಾನು  ದೇವರಾಣೆ’, ಪಂಜೆ ಮಂಗೇಶರಾಯರ ‘ನಾಗರ ಹಾವೇ’, ಜಿ.ಪಿ.ರಾಜರತ್ನಂ ಅವರ ‘ಬಣ್ಣದ ತಗಡಿನ ತುತ್ತೂರಿ’ ಮಕ್ಕಳಿಗೆ ಮುದನೀಡಿದವು.

ಅದರೊಂದಿಗೆ ಉಜಿರೆ ಸಿ.ಬಿ.ಎಸ್.ಇ ಶಾಲೆಯ ಶ್ರೀವಿದ್ಯಾ, ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯ ಕ್ಷಿತಿ ಮತ್ತು ಶಮಿತ, ಸಂಜನಾ, ಕನ್ನಡ ಹಾಡುಗಳ ಮೂಲಕ ಕಾರ್ಯಕ್ರಮದ ಕಳೆ ಹೆಚ್ಚಿಸಿದರು.

ಪ್ರಚಲಿತ ವಿದ್ಯಮಾನಗಳತ್ತ ನವ ಸಾಹಿತಿಗಳ ಚಿತ್ತ: ಈ ಬಾರಿಯ ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ತಾಲೂಕಿನ ಆಯ್ದ ಸಾಹಿತ್ಯಾಸಕ್ತ ವಿದ್ಯಾರ್ಥಿಗಳ ಸ್ವರಚಿತ ಕಥೆ, ಕವನ ವಾಚನ ಕಾರ್ಯಕ್ರಮ ನಡೆಯಿತು. ತಮ್ಮ ಪ್ರಸ್ತುತಿಯಲ್ಲಿ ನವ ಸಾಹಿತಿಗಳೆಲ್ಲಾ ಪ್ರಚಲಿತ ವಿಷಯಗಳ ಕುರಿತಂತೆ ತಮ್ಮ ಕಥೆ, ಕವನಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದರು. ಶಿವಪ್ರಸಾದ್, ವೈಷ್ಣವಿ, ಅನನ್ಯ, ವರದಿನಿ ಅಡೂರು, ಸಹನಾ ಆರ್.ಬಿ, ನಿಶ್ವಲ್, ಸಂಧ್ಯಾ, ಶ್ಯಾಂಪ್ರಸಾದ್, ಜಯಲಕ್ಷ್ಮಿ, ಸುಪ್ರೀತಾ, ಸುಶ್ಮಿತಾ.ಕೆ.ಬೆಳ್ಳಾರೆ, ಹರ್ಷಿತ, ಪ್ರಾಪ್ತಿ ಜಿ, ಷಿಶ್ಮಿತ ಕೆ.ಕೆ, ರಿನ್ಸಿ. ಪ್ರಚಲಿತತೆಯ ಕವನ, ಕಥನಗಳನ್ನು ಪ್ರಸ್ತುತಪಡಿಸಿದರು.

ಮನಸೂರೆಗೊಂಡ ಅಭಿನಯ ಗೀತೆ: ಹಿಂದೆ ಪಠ್ಯಗಳಲ್ಲಿ ಲಭ್ಯವಿದ್ದ ಅದೆಷ್ಟೋ ಹಾಡುಗಳು ಈಗ ಕಣ್ಮರೆಯಾಗಿವೆ. ಅವುಗಳನ್ನು ಮತ್ತೆ ನೆನಪಿಸುವ ಉದ್ದೇಶದಿಂದ ವಿದ್ಯಾರ್ಥಿಗಳು ಅಭಿನಯ ಗೀತೆಗಳನ್ನು ಪ್ರಸ್ತುತಪಡಿಸಿದರು. ಮಂಗಗಳ ಉಪವಾಸ, ಕೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗಬಹುದು, ಅಡುಗೆ ಮನೆಯಲೊಂದು ದಿನ ಹಾಡುಗಳು ಸಭಾಂಗಣದಲ್ಲಿದ್ದ ಹಿರಿಯ ಜೀವಗಳಿಗೆ ಮತ್ತೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಸಹಾಯಕವಾದವು. ಅಭಿನಯದಲ್ಲಿ ವಿದ್ಯಾರ್ಥಿಗಳು ತಲ್ಲೀನರಾಗಿದ್ದು ಕಾರ್ಯಕ್ರಮದ ಇನ್ನೊಂದು ಹೈಲೈಟ್ಸ್.  

ಕೇಳಲೇಬೇಕಾದ ಅಜ್ಜಿ ಕಥೆ: ಮಕ್ಕಳ ಸಾಹಿತ್ಯದಲ್ಲಿ ಆಸಕ್ತಿ ಹೊಂದಿ, ಸತತ 23 ವರ್ಷಗಳಿಂದ ಮಕ್ಕಳಲ್ಲಿ ಕಥೆ ರಚನೆ ಮತ್ತು ಸಾಹಿತ್ಯ ಅಭಿರುಚಿಯ ಬಗ್ಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿರುವ ಸಾವಿತ್ರಿರಾವ್, ಅಜ್ಜಿಕಥೆಯ ಮೂಲಕ ಕಾರ್ಯಕ್ರಮಕ್ಕೆ ಕಳೆತಂದರು. ಹಿಂದೆ ಅಜ್ಜಿಯರು ಕಥೆ ಹೇಳುತ್ತಿದ್ದ ಬಗೆ ಮತ್ತು ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಪೋಷಕರು ಪಾಲಿಸಲೇಬೇಕಾದ ಕೆಲವು ಸೂಚನೆಗಳನ್ನು ಕಥೆಯ ಮೂಲಕವೇ ವಿವರಿಸಿದ್ದು ವಿಶೇಷವಾಗಿತ್ತು.

ಕಟ್ಟುತ್ತಾಕಟ್ಟುತ್ತಾ ಕವನ: ಪ್ರಾಥಮಿಕ ತರಗತಿಗಳಲ್ಲಿ ಓದುತ್ತಿರುವ ಮಕ್ಕಳು ಯಾವ ರೀತಿ ಕವನ ರಚನೆಯನ್ನು ಆರಂಭಿಸಬಹುದು ಎಂಬುದರ ಕುರಿತಾಗಿ ಸಾಹಿತಿ, ಶಿಕ್ಷಕ ರಾಜೇಶ್ ತೋಳ್ಪಾಡಿ ಮಾಹಿತಿ ನೀಡಿದರು. ಹಿಂದೆ ಪುತಿನ ಅವರು ಮಕ್ಕಳಿಗೆ ಕವನ ಬರಹದ ಬಗ್ಗೆ ವಿವರಿಸುವಾಗ ಹೇಳುತ್ತಿದ್ದ 4 ಹಂತದ ತಯಾರಿ ಕುರಿತಂತೆ ಸವಿಸ್ತಾರವಾಗಿ ವಿವರಿಸಿದರು.

ಉಳಿದಂತೆ ವಿದ್ಯಾರ್ಥಿಗಳಿಗೆ ಸಾಹಿತ್ಯದ ಕುರಿತಂತೆ ಪರಿಚಯ ನೀಡುವ ರಸಪ್ರಶ್ನೆ, ಮಿಮಿಕ್ರಿ, ಕಥಾಭಿನಯ, ಗಮಕವಾಚನ ಕಾರ್ಯಕ್ರಮ ಸಂಪನ್ನಗೊಂಡವು. ಸಾಹಿತ್ಯದ ನುಡಿತೇರ ಹಬ್ಬದಲ್ಲಿ ಮಕ್ಕಳಿಗಾಗಿಯೇ ವಿಶೇಷ ಹಬ್ಬದ ಕಾರ್ಯಕ್ರಮ ಆಯೋಜಿಸಿದ್ದು ವಿಶೇಷವಾಗಿತ್ತು. ಪುಸ್ತಕ ಮಳಿಗೆಗಳು, ಕವಿಗೋಷ್ಠಿಗಳ ನಡುವೆ ವಿದ್ಯಾರ್ಥಿಗಳ ಸಾಹಿತ್ಯಾಸಕ್ತಿ ಹೆಚ್ಚಿಸುವ ಸಾಹಿತ್ಯ ಸಂಭ್ರಮ ವಿಭಿನ್ನವಾಗಿ ಮೂಡಿಬಂದದ್ದು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಇನ್ನೊಂದು ವಿಶೇಷವಾಗಿತ್ತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು