News Karnataka Kannada
Saturday, April 27 2024
ವಿಶೇಷ

ಪ್ರಜೆಗಳೇ ಪ್ರಭುಗಳಾಗುವ ಅವಕಾಶ ಸದುಪಯೋಗಪಡಿಸಿಕೊಳ್ಳೋಣ

ಲೋಕ ಸಭಾ ಚುನಾವಣೆ ಘೋಷಣೆಯಾದ ಬಳಿಕ ದೇಶದಲ್ಲಿ ರಾಜಕೀಯವಾಗಿ ಸಂಚಲನ ಸೃಷ್ಟಿಯಾಗಿದೆ. ಹೀಗಾಗಿ  ರಾಷ್ಟ್ರ, ರಾಜ್ಯ ನಾಯಕರಿಂದ ಆರಂಭವಾಗಿ ಕಾರ್ಯಕರ್ತರವರೆಗೆ, ಅಧಿಕಾರಿಗಳಿಂದ ಹಿಡಿದು ಜವಾನರವರೆಗೆ ಎಲ್ಲರೂ ತಮ್ಮ ಕೆಲಸ ಕಾರ್ಯಗಳ ಒತ್ತಡದಲ್ಲಿದ್ದಾರೆ. ಹೀಗಾಗಿ ಯಾರಿಗೂ  ವಿಶ್ರಾಂತಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಯನ್ನು ನಾವೆಲ್ಲರೂ ಹಬ್ಬದಂತೆ ಸ್ವಾಗತಿಸುತ್ತಾ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
Photo Credit : Pixabay

ಲೋಕ ಸಭಾ ಚುನಾವಣೆ ಘೋಷಣೆಯಾದ ಬಳಿಕ ದೇಶದಲ್ಲಿ ರಾಜಕೀಯವಾಗಿ ಸಂಚಲನ ಸೃಷ್ಟಿಯಾಗಿದೆ. ಹೀಗಾಗಿ  ರಾಷ್ಟ್ರ, ರಾಜ್ಯ ನಾಯಕರಿಂದ ಆರಂಭವಾಗಿ ಕಾರ್ಯಕರ್ತರವರೆಗೆ, ಅಧಿಕಾರಿಗಳಿಂದ ಹಿಡಿದು ಜವಾನರವರೆಗೆ ಎಲ್ಲರೂ ತಮ್ಮ ಕೆಲಸ ಕಾರ್ಯಗಳ ಒತ್ತಡದಲ್ಲಿದ್ದಾರೆ. ಹೀಗಾಗಿ ಯಾರಿಗೂ  ವಿಶ್ರಾಂತಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಯನ್ನು ನಾವೆಲ್ಲರೂ ಹಬ್ಬದಂತೆ ಸ್ವಾಗತಿಸುತ್ತಾ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಚುನಾವಣೆ ಎನ್ನುವುದು ನಮಗೆ ಇಷ್ಟವಾದ ಮತ್ತು ಅರ್ಹವಾದ ನಾಯಕನನ್ನು ಆಯ್ಕೆ ಮಾಡಲು ಸಂವಿಧಾನ  ಬದ್ಧವಾಗಿ ನೀಡಿದ  ಹಕ್ಕಾಗಿದೆ. ಅದನ್ನು ಚಲಾಯಿಸದೆ ನಿರ್ಲಕ್ಷ್ಯ ಮಾಡುವುದು ನಮಗೆ ನಾವು ಮಾಡಿಕೊಳ್ಳುವ ವಂಚನೆಯಾಗುತ್ತದೆ. ರಾಜಕೀಯ ವ್ಯವಸ್ಥೆ ಬಗ್ಗೆ ಮಾರುದ್ದ ಮಾತನಾಡುವ ಬಹಳಷ್ಟು ಮಂದಿ ಚುನಾವಣೆಯಿಂದ ದೂರ ಉಳಿದು ರಜಾವನ್ನು ಮಜಾದಿಂದ ಸವಿಯಲು ಮುಂದಾಗುತ್ತಾರೆ. ಇದು ನಿಜವಾಗಿಯೂ ಒಬ್ಬ ಪ್ರಜೆಯಾಗಿ ದೇಶಕ್ಕೆ ಮಾಡುವ ಅನ್ಯಾಯ ಎಂದರೂ ತಪ್ಪಾಗಲಾರದು.

ಪ್ರತಿಯೊಬ್ಬರ ಒಂದೊಂದು ಮತವೂ ಅಮೂಲ್ಯ ಎಂಬುದು ಚುನಾವಣೆ ಬಳಿಕ ಫಲಿತಾಂಶ ಬಂದಾಗ ಅರಿವಿಗೆ  ಬರುತ್ತದೆ. ಒಂದೇ ಒಂದು ಮತದಿಂದ ಅಭ್ಯರ್ಥಿಗಳು ಸೋತ ನಿದರ್ಶನಗಳು ಬೇಕಾದಷ್ಟಿದೆ. ಹೀಗಾಗಿ ಅಯ್ಯೋ ನನ್ನ ಒಂದು ಮತದಿಂದ ಏನಾಗುತ್ತೆ ಎಂದು ಉದಾಸಿನ ತೋರುವುದನ್ನು ಬಿಟ್ಟು ದೇಶದ ಪ್ರಜೆಯಾಗಿ ಆತ್ಮವಿಶ್ವಾಸದಿಂದ ಮತ ಚಲಾಯಿಸಬೇಕಾಗುತ್ತದೆ. ರಾಜಕೀಯ ವ್ಯವಸ್ಥೆಯಲ್ಲಿ ಜನರಿಗೆ ಇಷ್ಟವಾಗದ ಮತ್ತು ಜನರ ಆಕ್ರೋಶಕ್ಕೆ ಕಾರಣವಾಗುವಂತಹ ಹಲವು ವ್ಯವಸ್ಥೆಗಳು ಸೇರಿ ಹೋಗಿವೆ.

ಹಣ ಬಲ, ತೋಳ್ ಬಲ, ಇನ್ನಿತರ ಆಮಿಷಗಳ ಮೂಲಕ ಗೆಲುವು ಪಡೆಯುವುದು, ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಹೀಗೆ ಹತ್ತಾರು ಅಕ್ರಮಗಳು ರಾಜಕೀಯ ವ್ಯವಸ್ಥೆಯಲ್ಲಿ ಸೇರಿ ಹೋಗಿದೆ. ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತೇವೆಂದು ಹೇಳುವ ಧೈರ್ಯ ಯಾರಿಗೂ ಇಲ್ಲದಾಗಿದೆ. ಆದರೆ ಇರುವ ರಾಜಕೀಯ ವ್ಯವಸ್ಥೆಯಲ್ಲಿ ಒಂದಷ್ಟು ಪ್ರಾಮಾಣಿಕ ನಾಯಕರು ದೇಶಕ್ಕಾಗಿ, ಸಮಾಜಕ್ಕಾಗಿ, ಬಡವರಿಗಾಗಿ ಸೇವೆ ಮಾಡುತ್ತೇನೆ ಎನ್ನುವವರು ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ.

ಒಬ್ಬ ಭ್ರಷ್ಟ ಚುನಾವಣೆಗೆ ಸ್ಪರ್ಧಿಸುತ್ತಿದ್ದಾನೆ ಎನ್ನುವುದಾದರೆ ಅವನ ವಿರುದ್ಧ ಸ್ಪರ್ಧಿಸುವ ವ್ಯಕ್ತಿಗಳ ಪೈಕಿ  ಸ್ವಲ್ಪವಾದರೂ ಪ್ರಾಮಾಣಿಕತೆ ಉಳಿಸಿಕೊಂಡ ವ್ಯಕ್ತಿಯನ್ನು ಆಯ್ಕೆ ಮಾಡಲು ನಮಗೆ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಅದರ ಸದ್ಭಳಕೆಯನ್ನು ಪ್ರಬುದ್ಧ ಮತದಾರರು ಬಳಸಿಕೊಳ್ಳದೆ ಹೋದರೆ ಭ್ರಷ್ಟರ ಪ್ರಮಾಣ ಇನ್ನಷ್ಟು ಹೆಚ್ಚುತ್ತಾ ಹೋಗುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು  ಪ್ರಭುಗಳಾಗುವ ಅವಕಾಶ ಸಿಗುವುದು ಐದು ವರ್ಷಕ್ಕೊಮ್ಮೆ ಮಾತ್ರ. ಈ ಸಂದರ್ಭ ಅದನ್ನು ಬಳಸಿಕೊಳ್ಳದೆ ಹೋದರೆ ಪರಿಣಾಮವನ್ನು ಮತ್ತೆ ನಾವೇ ಎದುರಿಸಬೇಕಾಗುತ್ತದೆ.

ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ 18 ವರ್ಷವಾಗುತ್ತಿದ್ದಂತೆಯೇ ಮತದಾನ ಮಾಡುವ ಹಕ್ಕನ್ನು  ಪಡೆಯುತ್ತಾರೆ. ಹಿಂದಿನ ತಲೆಮಾರುಗಳಿಗೆ ಹೋಲಿಸಿದರೆ ಈಗ ಎಲ್ಲರೂ ವಿದ್ಯಾವಂತರಾಗಿದ್ದಾರೆ. ಆಧುನಿಕ ತಂತ್ರಜ್ಞಾನ ನಾಗಾಲೋಟದಲ್ಲಿ ಸಾಗುತ್ತಿರುವಾಗ ಸಮಾಜದ ಎಲ್ಲ ಬಗೆಯ ಆಗುಹೋಗುಗಳು ಬೇರೆ, ಬೇರೆ, ಮಾಧ್ಯಮಗಳ ಮೂಲಕ ಪ್ರತಿಯೊಬ್ಬನನ್ನೂ ತಲುಪುತ್ತಿದೆ.  ಜತೆಗೆ ದೇಶದ ರಾಜಕೀಯ ವ್ಯವಸ್ಥೆಗಳ ಬಗ್ಗೆ ಅರಿಯುವ, ವಿಶ್ಲೇಷಿಸುವ, ಖಂಡಿಸುವ ಜ್ಞಾನವೂ ಬೆಳೆದಿದೆ. ಹೀಗಾಗಿ ಯಾರನ್ನೂ ಯಾಮಾರಿಸಲು ಸಾಧ್ಯವಾಗದಂತಹ ಜಾಗೃತ ಸಮಾಜ ಸೃಷ್ಟಿಯಾಗುತ್ತಾ ಹೋಗುತ್ತಿದೆ.

ಇಂತಹ ಸಂದರ್ಭದಲ್ಲಿ ಈ ದೇಶದ ಪ್ರಜೆಯಾದ ಪ್ರತಿಯೊಬ್ಬರೂ ಮತಚಲಾಯಿಸುವ ಮೂಲಕ ಅತಿದೊಡ್ಡ  ಪ್ರಜಾಪ್ರಭುತ್ವದ ದೇಶ ಎಂಬ ಹೆಗ್ಗಳಿಕೆ ಪಡೆದಿರುವ ಭಾರತವನ್ನು ಗಟ್ಟಿಗೊಳಿಸುವ ಅಗತ್ಯವಿದೆ. ಆದರೆ ಮತ ಚಲಾಯಿಸಲು ಅರ್ಹತೆ ಪಡೆದವರೇ ಮತಕೇಂದ್ರದತ್ತ ಮುಖ ಮಾಡದೆ ರಾಜಕೀಯ ವ್ಯವಸ್ಥೆ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ವರ್ಷದಿಂದ ವರ್ಷಕ್ಕೆ ಯುವ ಮತದಾರರು ಹಕ್ಕು ಚಲಾಯಿಸಲು ಮುಂದಾಗುತ್ತಿದ್ದಾರೆ. ಅವರೆಲ್ಲರೂ ಮತಕೇಂದ್ರದತ್ತ ಬರುವಂತೆ ಮಾಡುವ ಕೆಲಸವೂ ಆಗಬೇಕಾಗಿದೆ.

ಚುನಾವಣೆ ಆಯೋಗ ಕೂಡ ಹಲವು ಬಗೆಯಲ್ಲಿ ಮತದಾನ ಹೆಚ್ಚಳ ಮಾಡಲು ಕಾರ್ಯಕ್ರಮಗಳನ್ನು  ಹಮ್ಮಿಕೊಂಡಿದೆ. ರಾಯಭಾರಿಗಳನ್ನು ನೇಮಕ ಮಾಡಿ ಅವರ ಮೂಲಕ ಮತದಾನದ ಜಾಗೃತಿ ಮೂಡಿಸುತ್ತಿದೆ. ಚುನಾವಣಾ ಆಯೋಗದ ಈ ಕಾರ್ಯಗಳು ಮತದಾರರಲ್ಲಿ ಹುಮ್ಮಸ್ಸು ಮೂಡಿಸಿದಲ್ಲದೆ, ಕರ್ತವ್ಯ ಪ್ರಜ್ಞೆಯನ್ನು ಜಾಗೃತಿಗೊಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಕೇಂದ್ರದತ್ತ ಆಗಮಿಸುವಂತಾದರೆ ಅದಕ್ಕಿಂತ ಸಂತಸ ಬೇರೊಂದಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು