News Karnataka Kannada
Monday, April 29 2024
ವಿಶೇಷ

ಮುಂಗಾರು ಮಳೆಯ ಆ ದಿನಗಳು ಹೇಗಿದ್ದವು ಗೊತ್ತಾ?

Heavy rains in Kodagu district: Alert sounded somewhere
Photo Credit : By Author

ಮಳೆ ಎಲ್ಲೆಡೆಯೂ ಸುರಿಯುತ್ತದೆ ಆದರೆ ಅದು ಮಲೆನಾಡಿನಲ್ಲಿ ಸುರಿದಾಗ ಅದರ ವೈಭವ ವರ್ಣಿಸಲಾರದ್ದಾಗಿರುತ್ತದೆ. ಮಲೆನಾಡಿನಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಇಡೀ ನಿಸರ್ಗ ಪುಳಕಗೊಳ್ಳುತ್ತದೆ. ಅದರಾಚೆಗಿನ ಚೆಲುವು ಇಮ್ಮಡಿಯಾಗುತ್ತದೆ. ಈಗೀಗ ಮಳೆಗಾಲದ ಮಲೆನಾಡಿನ ಚೆಲುವು ನೋಡುವ ಹಂಬಲ ನಗರವಾಸಿಗಳಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಮಳೆಗಾಲದಲ್ಲೂ ಪ್ರವಾಸಿಗರ ದಂಡು ಕಾಣಿಸುವಂತಾಗಿದೆ.

ಹಿಂದೆ ಮಳೆಗಾಲದಲ್ಲಿ ಕೊಡಗಿತ್ತ ಜನ ಬರಲು ಭಯ ಪಡುತ್ತಿದ್ದರು. ಆದರೆ ಈಗ ಹಾಗಿಲ್ಲ. ಮಳೆಗಾಲದ ಸುಂದರ ಕ್ಷಣಗಳನ್ನು ಅನುಭವಿಸಲೆಂದೇ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅವತ್ತಿನ ಮಳೆಗಾಲಕ್ಕೂ ಮತ್ತು ಇವತ್ತಿನ ಮಳೆಗಾಲಕ್ಕೂ ವ್ಯತ್ಯಾಸಗಳಿವೆ. ಎಡೆಬಿಡದೆ ಸುರಿಯುವ ಮಳೆ.. ಆ ಮಳೆಗೆ ಅಂಜದೆ ತಲೆಗೆ ಕೊರಂಬು(ಗೊರ್ಗ) ಹಾಕಿಕೊಂಡು ದುಡಿಯುವ ರೈತಾಪಿ ವರ್ಗ.. ತುಂಬಿ ಹರಿಯುವ ತೋಡು, ತೊರೆ, ಹೊಳೆಗಳು.. ಬೆಟ್ಟಗುಡ್ಡ ಎಲ್ಲೆಂದರಲ್ಲಿ ಜಲ ಹುಟ್ಟಿ ಹರಿದು ಬರುವ ನೀರು..ಇದು ಮೂರ್ನಾಲ್ಕು ದಶಕಗಳ ಹಿಂದಿನ ಮಳೆಗಾಲದ ದೃಶ್ಯಗಳಾಗಿದ್ದವು.

ಆಗ ಜನರ ಬದುಕು ಇವತ್ತಿನಂತೆ ಆಧುನಿಕತೆಗೆ ತೆರದುಕೊಂಡಿರಲಿಲ್ಲ. ಹೆಚ್ಚಿನ ಜನರು ಕೃಷಿಯನ್ನೇ ನಂಬಿದ್ದರು. ಅದನ್ನೇ ಮಾಡಿ ಬದುಕು ಕಂಡು ಕೊಂಡಿದ್ದರು. ಭತ್ತದ ಗದ್ದೆ ಹೆಚ್ಚು ಇದ್ದವನೇ ಶ್ರೀಮಂತ ಎಂದು ಪರಿಗಣಿಸಲಾಗುತ್ತಿದ್ದರಿಂದ ಭತ್ತ ಇಲ್ಲಿನ ಪ್ರಧಾನ ಬೆಳೆಯಾಗಿತ್ತು. ಜತೆಗೆ ಕಣ್ಣಾಯಿಸಿದುದ್ದಕ್ಕೂ ಭತ್ತದ ಗದ್ದೆ ಬಯಲು ಕಂಡು ಬರುತ್ತಿದ್ದವು. ಕಷ್ಟವೋ? ಸುಖವೋ ತಮಗಿದ್ದ ಅಷ್ಟು ಗದ್ದೆಯಲ್ಲಿ ಭತ್ತ ಬೆಳೆಯುತ್ತಿದ್ದರು. ತಿಂಗಳಾನುಗಟ್ಟಲೆ ಸುರಿಯುವ ಮಳೆ, ಕೊರೆಯುವ ಚಳಿಯಲ್ಲಿ ಭತ್ತದ ಕೃಷಿ ಮಾಡುತ್ತಿದ್ದರು. ಆಗಿನ ಮಳೆ ಅಂದರೆ ಅದು ಸಾಮಾನ್ಯ ಮಳೆಯಾಗಿರುತ್ತಿರಲಿಲ್ಲ. ಕೊಡಗಿನ ಇಡೀ ಪ್ರದೇಶ ಚಳಿಯಿಂದ ಥರಗುಟ್ಟುತ್ತಿತ್ತು. ಆ ಚಳಿ ಮಳೆಗೆ ಸೆಡ್ಡು ಹೊಡೆದು ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಜನ ಕತ್ತಲಾಗುತ್ತಿದ್ದಂತೆಯೇ ಮನೆ ಸೇರಿಕೊಳ್ಳುತ್ತಿದ್ದರು. ಬಿಸಿ ನೀರಿನ ಸ್ನಾನ ಮಾಡಿ ಬಳಿಕ ಬೆಂಕಿ ಕೆಂಡವನ್ನು ಅಗಷ್ಠಿಕೆಯಲ್ಲಿಟ್ಟುಕೊಂಡು ಚಳಿ ಕಾಯಿಸುತ್ತಿದ್ದರು.

ಇನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಜನರು ಮಳೆಗಾಲದಲ್ಲಿ ಪಟ್ಟಣದ ಕಡೆಗೆ ಮುಖ ಮಾಡುವುದು ಕಡಿಮೆಯಾಗಿತ್ತು. ಹೀಗಾಗಿ ಮಳೆಗಾಲ ಆರಂಭಕ್ಕೆ ಮುನ್ನವೇ ಮಳೆಗಾಲಕ್ಕೆ ಬೇಕಾದ ಕೊಡೆ, ಗಂಬೂಟ್, ಪ್ಲಾಸ್ಟಿಕ್ ಹ್ಯಾಟ್, ಇನ್ನಿತರ ವಸ್ತುಗಳನ್ನು ಖರೀದಿಸುತ್ತಿದ್ದರು ಅಲ್ಲದೆ ಇತರೆ ಆಹಾರವನ್ನು ತಂದು ಮನೆಯಲ್ಲಿ ಶೇಖರಿಸಿಟ್ಟುಕೊಳ್ಳುತ್ತಿದ್ದರು. ತಿನ್ನಲು ಕುರುಕು ತಿಂಡಿಗಳು ಇರುತ್ತಲೇ ಇರಲಿಲ್ಲ. ಆಗೆಲ್ಲ ಬಾಯಿ ಆಡಿಸಲು ಹಲಸಿನ ಬೀಜವನ್ನು ಹುರಿದು ತಿನ್ನುತ್ತಿದ್ದರು. ಹೆಚ್ಚಿನ ಕುಟುಂಬಗಳು ಬಡತನದಲ್ಲಿಯೇ ಇದ್ದವು. ಹೊಟ್ಟೆಗೆ ಇದ್ದರೆ ಬಟ್ಟೆಗಿಲ್ಲದ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ಹಾಸಿಗೆಯಿದ್ದಷ್ಟು ಕಾಲು ಚಾಚು ಎಂಬ ಮಾತಿನಂತೆ ಇರೋದ್ರಲ್ಲೇ ಜೀವನ ಸಾಗಿಸುತ್ತಿದ್ದರು.

ಮಳೆಗಾಲದಲ್ಲಿ ತರಕಾರಿಗಾಗಿ ಪೇಟೆಗೆ ತೆರಳುತ್ತಿದ್ದದ್ದು ಅಪರೂಪ. ಮನೆಯ ಸುತ್ತಮುತ್ತ ಸಿಗುವ ಬಿದಿರು ಕಣಿಲೆ, ಕೆಸವಿನ ಸೊಪ್ಪು, ಅಣಬೆ, ಏಡಿ, ಮೀನು ಹೀಗೆ ಅದನ್ನೇ ಬಳಸಿಕೊಂಡು ಕಾಲ ಕಳೆಯುತ್ತಿದ್ದರು. ಇನ್ನು ಮಕ್ಕಳು ಶಾಲೆಗೆ ನಾಲ್ಕೈದು ಕಿ.ಮೀ. ದೂರ ನಡೆದುಕೊಂಡು ಹೋಗಬೇಕಿತ್ತು. ದಾರಿ ನಡುವೆ ಸಿಗುವ ನದಿಗಳಿಗೆ ಸೇತುವೆಗಳು ಇರುತ್ತಿರಲಿಲ್ಲ. ಗ್ರಾಮಸ್ಥರೇ ಮರದ ತುಂಡುಗಳನ್ನು ಹಾಕಿ ಮಾಡಿದ ಪಾಲದ ಮೇಲೆ ಎಚ್ಚರದ ಹೆಜ್ಜೆಯನ್ನಿಟ್ಟು ದಾಟಬೇಕಿತ್ತು. ಹೆತ್ತವರಿಗೆ ಬೆಳಿಗ್ಗೆ ಶಾಲೆಗೆ ಹೋದ ಮಕ್ಕಳು ಮನೆಗೆ ಬಂದು ತಲುಪುವ ತನಕ ನೆಮ್ಮದಿಯಿರುತ್ತಿರಲಿಲ್ಲ.

ಈಗ ಎಲ್ಲವೂ ಬದಲಾಗಿದೆ. ಮಳೆಗಾಲ ಎನ್ನವುದು ಮೊದಲಿನಂತಿಲ್ಲ. ಇವತ್ತು ಮಳೆಗಾಲವನ್ನು ಎದುರಿಸಲು ಜನರು ಕೂಡ ಸಜ್ಜಾಗಿದ್ದಾರೆ. ಭತ್ತದ ಗದ್ದೆಗಳು ಮಾಯವಾಗಿವೆ. ಜನರ ಬದಲಿಗೆ ಯಂತ್ರಗಳಲ್ಲಿ ಕೆಲಸ ಮಾಡುವುದು ಆರಂಭವಾಗಿದೆ. ಅದಕ್ಕಿಂತ ಹೆಚ್ಚಾಗಿ ಮೊದಲಿನಂತೆ ವಾರಗಟ್ಟಲೆ ಹನಿ ತುಂಡಾಗದಂತೆ ಮಳೆಯೂ ಸುರಿಯುತ್ತಿಲ್ಲ. ಸುರಿದರೆ ಪ್ರವಾಹ ಏರ್ಪಡುವಂತೆ ಸುರಿಯುತ್ತದೆ. ಅದರಲ್ಲೂ 2018ರಲ್ಲಿ ಸಂಭವಿಸಿದ ಭೂಕುಸಿತವಂತು ಮಳೆಗಾಲವೆಂದರೆ ಜನ ಭಯಪಡುವಂತೆ ಮಾಡಿದೆ. ಹೀಗಾಗಿ ಮಳೆಗಾಲವನ್ನು ಜನ ಸಂಭ್ರಮಿಸುವ ಬದಲಿಗೆ ಭಯದಲ್ಲಿ ದಿನ ಕಳೆಯುವಂತಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು