News Karnataka Kannada
Friday, May 17 2024
ಅಂಕಣ

ತುಳಸಿ ಹಬ್ಬ – ಮಹಾವಿಷ್ಣು ಜಾಗೃತಗೊಳ್ಳುವ ದಿನವೇ ಉತ್ಥಾನ ದ್ವಾದಶಿ

Tulsi Festival – Utthana Dwadashi is the day when Lord Vishnu awakens
Photo Credit : Freepik

ಉತ್ಥಾನ ಎಂಬುದರ ಅರ್ಥ ‘ಎದ್ದೇಳುವುದು’ ಎಂದು ಸಾಂದರ್ಭಿಕವಾಗಿ ಹೇಳಬಹುದಾದರೂ ಇದಕ್ಕೆ ಗ್ರಾಂಥಿಕವಾಗಿ ಬಳೆ, ಉನ್ನತಿ, ಪ್ರಸನ್ನತೆ, ಯಜ್ಞಮಂಟಪ, ಪೌರುಷ ಮುಂತಾದ ಅರ್ಥಗಳಿವೆ. ಒಟ್ಟಾರೆಯಾಗಿ ಉತ್ಥಾನ’ ಎಂದರೆ ‘ಜಾಗೃತಾವಸ್ಥೆ’ ಎಂದು ಅರ್ಥೈಯಿಸಬಹುದು. ಅಂದರೆ ನಿದ್ದೆಯಿಂದ ಏಳುವುದು ಎಂದರ್ಥ. ಅಂದರೆ ಶ್ರೀಮನ್ನಾರಾಯಣನು ನಿದ್ರಾಮುದ್ರೆಯನ್ನು ತೊರೆದು ಜಾಗೃತಾವಸ್ಥೆಯ ಮುದ್ರೆಯನ್ನು ಭಕ್ತರಿಗೆ ತೋರುವ ದಿನವೇ ದ್ವಾದಶೀ, ಶುಕ್ಲಪಕ್ಷದ 12ನೇ ದಿನ, ನಿದ್ರೆಯಲ್ಲಿ ಲೀನನಾಗಿರುವ ಎಷ್ಟು ಎಚ್ಚರಗೊಳ್ಳುವ ದಿನವೇ ಉತ್ಥಾನದ್ವಾದಶಿ, ಅಂದರೆ ಕಾರ್ತಿಕ ಶುಕ್ಲ ದ್ವಾದಶಿ ಹಾಲ್ಗಡಲಿನಲ್ಲಿ ತನ್ನ ಸುಖಶಯನದ ಮೇಲೆ ಪವಡಿಸಿ ಸುಖನಿದ್ರೆ ಅನುಭವಿಸುತ್ತಿದ್ದ ಶ್ರೀಹರಿಯು ಎದ್ದೇಳುವ ಉತ್ಥಾನ ಇದನ್ನು ”ಕ್ಷೀರಾಭಿ ವ್ರತ’ ಎಂದೂ ಕರೆಯುತ್ತಾರೆ.

ಶ್ರೀಮನ್ನಾರಾಯಣನ ಸತಿ ಲಕ್ಷ್ಮೀ ನಿದ್ರೆಯಿಂದ ಎದ್ದೇಳುವ ದಿನ ದೀಪಾವಳಿಯಾದರೆ, ಲಕ್ಷ್ಮಿಯ ಪತಿರಾಯ ಉತ್ಥಾನ ದ್ವಾದಶಿಯಂದು ಎದ್ದೇಳುತ್ತಾನೆ. ನಮ್ಮ ಪುರಾಣಗಳ ಪ್ರಕಾರ ಮಹಾವಿಷ್ಣು ಆಷಾಢ ಶುದ್ಧ ಶಯನ ಏಕಾದಶಿಯಂದು ಮಲಗಿ ಕಾರ್ತಿಕ ಶುದ್ಧ ದ್ವಾದಶಿಯಂದು ಮೇಲೇಳುತ್ತಾನೆ. ಜಗದ ರಕ್ಷಕ ಮಹಾವಿಷ್ಣು ಜಾಗೃತಗೊಳ್ಳುವ ಸುದಿನದ ಉತ್ಸವವೇ ಉತ್ಥಾನ ದ್ವಾದಶಿ, ಸೃಷ್ಠಿಕರ್ತ ಶ್ರೀಮನ್ನಾರಾಯಣನು ತನ್ನ ಹೆಂಡತಿ ಲಕ್ಷ್ಮಿಯೊಂದಿಗೆ ಜಾಗೃತಾವಸ್ಥೆಯಲ್ಲಿದ್ದರೆ ಇಡೀ ಸೃಷ್ಠಿಯೇ ಆನಂದ ಲಹರಿಯಲ್ಲಿ ಮುಳುಗೇಳುತ್ತದೆ, ಎಲ್ಲ ಕಡೆ ಮಂಗಲಮಯ ವಾತಾವರಣ ಕಂಡುಬರುತ್ತದೆ, ಕಾರಣ ಈ ದಿನವನ್ನು ‘ಪ್ರಬೋಧೋತ್ಸವ’ ಎಂದೂ ಕರೆಯುತ್ತಾರೆ. ಈ ಉತ್ಸವದ ಮೂಲಕ ಮಹಾವಿಷ್ಣುವನ್ನು ಎಬ್ಬಿಸಿ ಸಂಭ್ರಮಿಸುವ ಹಾಗೂ ಅವನೊಂದಿಗೆ ತುಳಸಿ ಮದುವೆ ಮಾಡಿ ಖುಷಿಪಡುವ ದಿನವೇ ಉತ್ಥಾನ ದ್ವಾದಶಿ, ಇದನ್ನು ‘ತುಳಸಿ ಮದುವೆ’ ಎಂತಲೂ ಕರೆಯುತ್ತಾರೆ.

ತುಳಸಿ ಮದುವೆಗೆ ರೇವತಿ ನಕ್ಷತ್ರದಿಂದ ಕೂಡಿದ ದ್ವಾದಶಿ ತಿಥಿ ಶ್ರೇಷ್ಠ ಎನ್ನಲಾಗಿದೆ. ರಾತ್ರಿಯ ಮೊದಲ ಜಾವದಲ್ಲಿ ಪ್ರಭೋಧೋತ್ಸವ ತುಲಸೀ ವಿವಾಹವನ್ನು ನಡೆಸಬೇಕು ಎನ್ನಲಾಗಿದೆ. ತುಳಸಿ ಮದುವೆಯ ದಿನ ತುಳಸಿ ಕಟ್ಟೆಯನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಬೇಕು. ಕಟ್ಟೆಯನ್ನು ವಿವಿಧ ಬಣ್ಣಗಳಿಂದ ಶೃಂಗಾರಗೊಳಿಸಬೇಕು. ಅಂದವಾದ ಮಂಟಪ ತಯಾರಿಸಬೇಕು. ಚಂದವಾದ ರಂಗೋಲಿ ಬಿಡಿಸಬೇಕು. ಸಿಂಧೂರ ತಯಾರಿರಬೇಕು. ನೆಲ್ಲಿಯ ಟೊಂಗೆ, ಹುಣಿಸೆ ಟೊಂಗೆ, ಕಬ್ಬಿನ ಹಂದರ ಮಾವಿನ ತಳಿರು.ಮುಂತಾದ ವಿವಿಧ ಫಲಪುಷ್ಪಗಳಿಂದ ಅಲಂಕರಿಸಬೇಕು. ಈ ತಯಾರಿ ಎಲ್ಲವೂ ಶುದ್ಧ ಮನಸ್ಸಿನಿಂದ ನಡೆಯಬೇಕು. ಯಾಕೆಂದರೆ ಮಾಡುತ್ತಿರುವುದು ಶ್ರೀಮನ್ನಾರಾಯಣನ ಮದುವೆ ಅಲ್ಲವೇ? ‘ಶ್ರೀ ಕಾರ್ತಿಕ ದಾಮೋದರ ಪ್ರೀತ್ಯರ್ಥ ಪ್ರಭೋಧೋತ್ಸವಂ ತುಳಸಿ ವಿವಾಹ ವಿಧಿ ಚ ಕರಿಷ್ಟೆ’ ಎಂದು ಸಂಕಲ್ಪಿಸಬೇಕು. ಬೃಂದಾವನ ತುಳಸಿಯ ಸನ್ನಿಧಿಯಲ್ಲಿ ಶ್ರೀಕೃಷ್ಣ ಪ್ರತಿಮೆಯನ್ನು ಇಡಬೇಕು. ಪುರುಷ ಸೂಕ್ತದಿಂದ ಷೋಡಶೋಪಚಾರ ಪೂಜೆ ಮಾಡಿ ಸಮರ್ಪಿಸಬೇಕು.

ತುಳಸಿದೇವಿಗೆ ಅರಿಶಿನ, ಕುಂಕುಮ, ಕಂಠಸೂತ್ರ ಮುಂತಾದ ಮಂಗಲಾಲಂಕಾರ ಮಾಡಬೇಕು. ವಿಷ್ಣುಸೂಕ್ತವನ್ನು ಹೇಳುತ್ತ ಘಂಟಾವಾದನ ಮಾಡಿ ಮಹಾವಿಷ್ಣುವನ್ನು ಎಬ್ಬಿಸಬೇಕು. ಸುತ್ತಮುತ್ತ ದೀಪ ಬೆಳಗಿಸಬೇಕು. ಈ ದೀಪೋತ್ಸವದೊಂದಿಗೆ ಭಗವಂತನನ್ನು ಪ್ರಾರ್ಥಿಸಬೇಕು. ಭಗವಂತನನ್ನು ಎಬ್ಬಿಸುವಾಗ ಹೀಗೆ ನಿವೇದಿಸಿಕೊಳ್ಳಬೇಕು ‘ಹೇ! ನಾರಾಯಣ, ಹೇ! ಮಹಾವಿಷ್ಣು, ಹೆನ್ರಿ ಭಗವಂತ ಇದು ನಿನ್ನ ಜಾಗೃತಾವಸ್ಥೆಯ ಸಮಯ. ನೀನು ಜಾಗೃತನಾದರೆ ಇಡಿ ಸೃಷ್ಠಿಯೇ ಜಾಗೃತಗೊಳ್ಳುತ್ತದೆ. ಮಳೆಗಾಲದ ಕಾರ್ಮೋಡಗಳು ಕರಗಿ ಆಕಾಶ ಹಾಗೂ ದಶದಿಕ್ಕುಗಳು ನಿರ್ಮಲವಾಗಿವೆ. ಶರತ್ಕಾಲದ ಈ ಸುಗಂಧಭರಿತ ಹೂಗಳನ್ನು ನಿನಗೆ ಅರ್ಪಿಸುತ್ತಿದ್ದೇನೆ ಸ್ವೀಕರಿಸು’ ಈಗ ಶ್ರೀಮನ್ನಾರಾಯಣ ಎದ್ದಿದ್ದಾನೆ, ಅವನೊಂದಿಗೆ ತುಳಸಿಯ ವಿವಾಹಕ್ಕೆ ಸಕಲ ಸಿದ್ಧತೆಗಳಾಗಿವೆ.

ತುಳಸಿಯ ಸನ್ನಿಧಿಯಲ್ಲಿ ಶ್ರೀಕೃಷ್ಣ ಪ್ರತಿಮೆಯನ್ನಿಟ್ಟು ಅವುಗಳ ಮಧ್ಯ ಒಂದು ಪಟ ಹಿಡಿದು ಮಂಗಲಾಷ್ಟಕ ಹೇಳಿ ಅಕ್ಷತಾರೋಪಣ ಮಾಡಲಾಗುತ್ತದೆ. ಮಹಿಳೆಯರು ಮದುವೆಯ ಶೋಭಾನ ಪದಗಳನ್ನು ಹೇಳುತ್ತಾರೆ. ಮಕ್ಕಳು ಪಟಾಕಿ ಹಾರಿಸಿ ಸಂಭ್ರಮಿಸುತ್ತಾರೆ. ಅವಲಕ್ಕಿ ನಾನಾವಿಧ ಭಕ್ಷ್ಯ, ಭೋಜ್ಯ, ನೈವೇಧ್ಯ, ದಾನ ದಕ್ಷಿಣೆ ಪ್ರಸಾದ ವಿತರಣೆಗಳೆಲ್ಲವೂ ನಡೆಯುತ್ತವೆ. ಮಹಾವಿಷ್ಣುವಿಗೆ ಮಾಡಿಕೊಟ್ಟ ಈ ತುಳಸಿ ವಿವಾಹದಿಂದ ಯಜಮಾನನಿಗೆ ಮೋಕ್ಷ ಲಭಿಸುತ್ತದೆ ಎಂದು ಧರ್ಮಗ್ರಂಥಗಳು ಹೇಳುತ್ತವೆ. ಇದನ್ನೇ ಪುರಂದರದಾಸರು ಹೀಗೆ ಹೇಳುತ್ತಾರೆ.
”ಕಲ್ಯಾಣಂ ತುಲಸೀಕಲ್ಯಾಣಂ। ಉತ್ಪಾನ ದ್ವಾದಶಿ ದಿವಸ ಉತ್ತಮ ತುಳಸಿಗೆ ವಿವಾಹವ ಚಿತ್ತನಿರ್ಮಲರಾಗಿ ಮಾಡಿದವರಿಗೆ ಉತ್ತಮ ಗತಿ ಈವ ಪುರಂದರ ವಿಠಲ’.

ಪುರಾಣಗಳ ಪ್ರಕಾರ ಶ್ರೀ ತುಳಸಿಯು ಹುಟ್ಟಿದ್ದು ಸಮುದ್ರ ಮಥನದಲ್ಲಿ! ದೇವ ದಾನವರು ಸೇರಿ ಕ್ಷೀರಸಾಗರವನ್ನು ಕಡೆಯುವಾಗ ದನ್ವಂತರಿಯ ಅವತಾರವಾಯಿತು. ಅವನ ಕೈಯಲ್ಲಿ ಅಮೃತದ ಕಳಶವಿತ್ತು. ಆ ಅಮೃತ ಕಲಶದಲ್ಲಿ ಧನ್ವಂತರಿಯ ಆನಂದಾಶ್ರುಗಳು ಉದುರಿ ಬಿದ್ದವು. ಅದರಿಂದ ಆ ಅಮೃತ ಕಲಶದಲ್ಲೇ ತುಳಸಿಯ ಉತ್ಪತ್ತಿಯಾಯಿತೆಂದು ಹರಿವಂಶಾದಿ ಪುರಾಣಗಳಲ್ಲಿ ಹೇಳಲಾಗಿದೆ. ಸ್ಕಂದ ಪುರಾಣದ ಪ್ರಕಾರ ಅಮೃತ ಕಲಶವ ತುಳುಕಿ ಬಿದ್ದ ಹನಿಗಳಿಂದ ನೆಲದ ಮೇಲೆ ತುಳಸಿ ಉತ್ಪನ್ನವಾಯಿತೆಂದು ಹೇಳಲಾಗಿದೆ.

ದೇವಿ ಭಾಗವತ ಮತ್ತು ಬ್ರಹ್ಮವೈವತನ ಪುರಾಣಗಳಲ್ಲಿ ಮೂಡಿ ಬಂದ ಕಥಾನಕಗಳ ಬೇರೆ ಇವೆ. ತುಳಸಿಯು ರಾಧೆಯ ಶಾಪದಿಂದ ಮಾನವರಾಗಿ ಹುಟ್ಟಿ ಒಂದು ಶಂಖಚೂಡನೆಂಬ ದೈತ್ಯನ ಕೈ ಹಿಡಿದಳು, ತುಳಸಿಯ ಪಾತಿವ್ರತ್ಯದ ವಕದ ತೊಟ್ಟ ಶಂಖಚೂಡನು ದೇವಲೋಕಕ್ಕೆ ಲಗ್ಗೆ ಇಟ್ಟ, ದೇವತೆಗಳೆಲ್ಲರೂ ದಿಕ್ಕಾಪಾಲು. ದೇವತೆಗಳೆಲ್ಲರೂ ಶ್ರೀಹರಿಯ ಮೊರೆ ಹೊಕ್ಕರು. ದೇವಗಣಕ್ಕೆ ಅಭಯ ನೀಡಿದ ಶ್ರೀ ಹರಿಯು ತುಳಸಿಯ ಪಾತಿವ್ರತ್ಯವನ್ನೇ ಕೆಡಿಸಲು ಮುಂದಾದ, ಗಂಡ ಶಂಖಚೂಡನ ವೇಷದಲ್ಲೇ ಬಂದ ಶ್ರೀ ಹರಿ ತುಳಸಿಯ ಶೀಲಭಂಗ ಮಾಡಿ ತನ್ನ ಸ್ವರೂಪ ತಿಳಿಸಿದ. ಕೋಪಗೊಂಡ ತುಳಸಿಯು ಕಲ್ಲಾಗುವಂತೆ ಶ್ರೀಹರಿಗೆ ಶಾಪ ನೀಡಿದಳು. ಆಗ ಅವಳ ಶಾಪದಿಂದ ಪ್ರಸನ್ನನಾದ ಶ್ರೀ ವಿಷ್ಣು ಹೇಳುತ್ತಾನೆ-‘ ದೇವತೆಗಳ ಉದ್ಧಾರಕ್ಕಾಗಿ ಹೀಗೆ ಮಾಡಬೇಕಾಯಿತು. ನಿನ್ನ ಶಾಪದಂತೆ ಗಂಡಕ್ಕಿ ನದಿಯಲ್ಲಿ ಸಾಲಿಗ್ರಾಮದ ಕಲ್ಲಾಗಿ ಬೀಳುತ್ತೇನೆ. ಅದರ ಮೇಲೆ ಶಂಖಚೂಡನ ಸ್ಮರಣವಾದ ಶಂಖದಿಂದ ಅಭಿಷೇಕ ಮಾಡಿದವರಿಗೆ ಸದ್ಧತಿಯನ್ನು ನೀಡುತ್ತೇನೆ” ಇದರಿಂದಾಗಿಯೆ ಗಂಡಕ್ಕಿ ನದಿಯ ಸಾಲಿಗ್ರಾಮ ಧಾರ್ಮಿಕವಾ ಹೆಚ್ಚು ಜನಪ್ರಿಯವಾಗಿದೆ.

ಪದ್ಮಪುರಾಣ ಮತ್ತು ಶಿವಪುರಾಣಗಳಲ್ಲಿ ಇನ್ನೊಂದು ತೆರನಾದ ವ್ಯಾಖ್ಯಾನವಿದೆ. ಜಲಂಧರನೆಂಬ ದೈತ್ಯನ ಮಡದಿಯಾದ ಸುಂದರಿ ವೃಂದೆ ಮಹಾ ಪತಿವ್ರತೆಯಾಗಿದ್ದಳು. ಅವಳ ಪಾತಿವ್ರತ್ಯದ ಬಲದಿಂದ ದೈತ್ಯ ಜರಾಸಂಧ ಲೋಕಕಂಟಕನಾದಾಗ ಶ್ರೀ ಹರಿ ಮಾರುವೇಷದಲ್ಲಿ ಬಂದು ವೃಂದೆಯ ಪಾತಿವ್ರತ್ಯದ ಭಂಗ ಮಾಡಿ ಜಲಂಧರನನ್ನು ವಧಿಸುತ್ತಾನೆ. ಇದನ್ನು ತಿಳಿದ ವೃಂದೆಯು ವಿಷ್ಣುವಿಗೆ ಶಾಪಕೊಟ್ಟು ತನ್ನನ್ನು ತಾ ಸುಟ್ಟುಕೊಂಡು ಸಾಯುತ್ತಾಳೆ. ವೃಂದೆಯು ಸುಟ್ಟು ಬೂದಿಯಾದ ಸ್ಥಳದಲ್ಲಿ ತುಳಸಿ, ನೆಲ್ಲಿ ಮಾಲತಿ ಎ೦ಬ ಮೂರು ಗಿಡಗಳು ಬೆಳೆಯುತ್ತವೆ. ನೆಲ್ಲಿ, ತುಳಸಿ ಶ್ರೀಹರಿಯ ಪ್ರೀತಿ ಪಾತ್ರವಾಗಿದ್ದು, ತುಳಸಿಯನ್ನು ವಿಷ್ಣು ಪ್ರೇಮದಿಂದ ಸ್ವೀಕರಿಸಿದ. ವೃಂದೆಯ ವನ ವೃಂದಾವನವಾಯಿತು’ ಎಂದು ಹೇಳಲಾಗಿದೆ. ಕೆಲವು ಪುರಾಣಗಳ ಪ್ರಕಾರ ಬೃಂದಾವನದಲ್ಲಿ ಶ್ರೀಕೃಷ್ಣನ ವಿಶೇಷ ಪ್ರೀತಿ ಪಾತ್ರಳಾದ ಗೋಪಿಯೇ ಶ್ರೀ ತುಳಸಿ ಎಂದೂ ವಿವರಿಸಲಾಗಿದೆ.

ಶ್ರೀ ತುಳಸಿಯು ಕೇವಲ ಸಸ್ಯವಲ್ಲ. ಶ್ರೀ ಹರಿಯು ಎಲ್ಲಾ ಸುವಾಸನೆಯ ಹೂಗಳಲ್ಲಿ ತುಳಸೀ ದಳಗಳನ್ನು ಮಾತ್ರ ವಿಶೇಷ ಪ್ರೀತಿಯಿಂದ ಕೈಯಲ್ಲಿ ಹಿಡಿದು ಆಘ್ರಾಣಿಸಿ ವಿಶೇಷ ಅನುಗ್ರಹಗೈದು ತನಗೊಂದು ಆಭರಣ ರೂಪವಾಗಿ ಧರಿಸಿದ್ದಾನೆ ಎಂದು ಭಾಗವತದಲ್ಲಿ ಹೇಳಲಾಗಿದೆ. ‘ಬಂಗಾರದ, ರತ್ನಗಳ ಹೂಗಳಾಗಲಿ ಮುತ್ತಿನ ಪುಷ್ಪಗಳಾಗಲಿ ತುಳಸಿಯ 16ನೆಯ ಅಂಶಕ್ಕೂ ತೂಗಲಾರವು’ ಎನ್ನುತ್ತದೆ ಪದ್ಮಪುರಾಣ.

ಸತ್ಯಭಾಮೆಯು ಶ್ರೀಕೃಷ್ಣನ ತುಲಾಭಾರ ಮಾಡಿದಾಗ ತುಳಸಿದಳವನ್ನು ತಕ್ಕಡಿಯಲ್ಲಿ ಇಟ್ಟಕೂಡಲೇ ತೂಕ ಬಂದಿತೆಂದು ತುಳಸಿಯ ವರ್ಣನೆಯನ್ನು ಮಾಡಲಾಗಿದೆ. ‘ಹಿಂದೆ ಎಲ್ಲ ವರರೂ ನಾರಿಯರೂ ಕೂಡಿ ವಿಚಾರ ಮಾಡಿದರೂ ತುಳಸಿಗೆ ಸಮರಾದವರು ಯಾರೂ ಸಿಗದ್ದರಿಂದ ತುಲನೆ ಮಾಡಲು ಬಾರದ ‘ತುಳಸಿ’ ಎಂದು ಕರೆದರು’ ಎನ್ನುತ್ತದೆ ಬ್ರಹ್ಮವೈವರ್ತ ಪುರಾಣ, ವೈಕುಂಠ ಲೋಕದಲ್ಲಿ ಸಾಕ್ಷಾತ್ ಲಕ್ಷ್ಮೀದೇವಿಯು ಕೂಡ ತುಳಸಿಯಿಂದಲೇ ಶ್ರೀ ಹರಿಯ ಪೂಜೆ ಮಾಡುತ್ತಾಳೆ ಎಂದು ಭಾಗವತದಲ್ಲಿ ಹೇಳಲಾಗಿದೆ. ‘ತುಳಸಿಯಿಲ್ಲದ ತೀರ್ಥ ಬರಿ ನೀರು’ ಎಂದು ತ್ಯಾಗರಾಜರು ಹಾಡಿದ್ದಾರೆ.
ಉತ್ಥಾನ ದ್ವಾದಶಿಯು ಭಗವಾನ್ ಮಹಾವಿಷ್ಣುವು ತನ್ನ ಯೋಗ ನಿದ್ದೆಯಿಂದ ಎದ್ದು, ತುಳಸಿಯನ್ನು ವಿವಾಹವಾಗುವ ದಿನ. ಹೀಗಾಗಿ ಧಾರ್ಮಿಕವಾಗಿ ಉತ್ಥಾನ ದ್ವಾದಶಿಗೆ ತುಂಬ ಮಹತ್ವವಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು