ಇತ್ತೀಚಿನ ದಿನಗಳಲ್ಲಿ ಜನರು ಟ್ರೆಂಡ್ಗಳಿಗೆ ಅನುಗುಣವಾಗಿ ತಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡು ಮುಂದುವರೆಯುತ್ತಿದ್ದಾರೆ. ಇದಕ್ಕೆ ನಿದರ್ಶನವೆಂದರೆ ಮದುವೆ ಕಾರ್ಯಕ್ರಮಗಳಲ್ಲಿ ಹೆಣ್ಣು ಮಕ್ಕಳು ಸಾರಿ ಉಡುವುದಕ್ಕಿಂತ ಹೆಚ್ಚು ಲೆಹೆಂಗಾ ಚೋಲಿ ಧಿರಿಸನ್ನೇ ಧರಿಸುವವುದು. ಏಕೆಂದರೆ ಇಂದು ಲೆಹೆಂಗಾ ಫ್ಯಾಶನ್ ಟ್ರೆಂಡ್ ಆಗಿದೆ. ಮದುವೆ ಮನೆಯಲ್ಲಿ ಮದುಮಗಳು ಮದುವೆ ಶಾಸ್ತ್ರದ ವೇಳೆ ಸಾರಿ ಉಟ್ಟರೆ ಬೇರೆಲ್ಲಾ ಮದುವೆ ಕಾರ್ಯಕ್ರಮಗಳು ಅಂದರೆ ಮದುವೆ ರಿಸೆಪ್ಷನ್ಗಳಿಗೆ, ನಿಶ್ಚಿತಾರ್ಥ ಕಾರ್ಯಕ್ರಮಗಳಲ್ಲಿ ಲೆಹೆಂಗಾವನ್ನೇ ಧರಿಸುತ್ತಾರೆ. ಚೂಡಿ, ಕುರ್ತ, ಸಾರಿ ಇಂತಹ ಉಡುಪುಗಳಿಗೆ ಹೋಲಿಸಿದರೆ ಲೆಹೆಂಗಾ ಚೋಲಿ ಗ್ರಾಂಡ್ ಲುಕ್ಕ್ ಕೊಡುತ್ತದೆ.
ಅರಶಿನ ಶಾಸ್ತ್ರದಲ್ಲಿ ಲೆಹೆಂಗಾ ಚೋಲಿಗಳನ್ನೇ ಯುವತಿಯರು ಹೆಚ್ಚು ಧರಿಸುತ್ತಾರೆ. ಇವು ಹೆಣ್ಣಿನ ಸೌಂದರ್ಯವನ್ನು ದ್ವಿಗುಣಗೊಳಿಸುತ್ತದೆ. ಸಿಂಪಲ್ ಮತ್ತು ಕಸೂತಿ ಮಾಡಿರುವ ಲೆಹೆಂಗಾಗಳಿಗೆ ಇಂದು ಯುವತಿಯರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಏಕೆಂದರೆ ಇಂತಹ ಕಸೂತಿ ಲೆಹೆಂಗಾಗಳು ತುಂಬಾ ಹಗುರವಾಗಿರುತ್ತದೆ, ಕಂಫಟೇಬಲ್ ಫೀಲ್ ಕೊಡುತ್ತದೆ ಮತ್ತು ಅತ್ತಿಂದಿತ್ತ ಓಡಾಡಲು ಸಮಸ್ಯೆಯಾಗದಂತೆ ಸಹಕರಿಸುತ್ತದೆ. ಮಾತ್ರವಲ್ಲದೆ ಇದು ಎಲ್ಲಾ ಋತುವಿಗೂ ಹೊಂದಿಕೆಯಾಗುತ್ತದೆ ಮತ್ತು ಮದುವೆ, ಪೂಜೆ ಇಂತಹ ವಿಶೇಷ ಕಾರ್ಯಕ್ರಮಗಳಿಗೆ ಸೂಕ್ತವಾಗಿರುತ್ತದೆ.
ಇಂದು ಟ್ರೆಂಡ್ ಆಗಿರುವ ಲೆಹೆಂಗಾ ಫ್ಯಾ಼ಷನ್ ಧಿರಿಸುಗಳಿಗೆ ಚಿತ್ರರಂಗದಲ್ಲಿ ತೊಡಗಿಕೊಂಡ ಯುವತಿಯರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಸಿನಿಮಾ ಪ್ರಮೋಶನ್, ಅವಾರ್ಡ್ ಫಂಕ್ಷನ್ಗಳಲ್ಲಿ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಹೊಸ ಹೊಸ ಶೈಲಿಯ ಲೆಹೆಂಗಾವನ್ನೆ ಧರಿಸುವುದನ್ನು ನಾವು ನೋಡಬಹುದು. ಒಂದು ಆಯಾಮದಲ್ಲಿ ನೋಡುವುದಾದರೆ ಈ ಲೆಹೆಂಗಾ ಚೋಲಿ ಚಿತ್ರರಂಗದವರಿಂದಲೇ ಟ್ರೆಂಡಿಂಗ್ ಆಗಿದೆ ಎನ್ನಬಹುದು.
ಲೆಹೆಂಗಾ ಚೋಲಿಯನ್ನು ಇಂದು ಯುವತಿಯರು ಸಾಂಪ್ರದಾಯಿಕ ಉಡುಗೆಯ ಟಚ್ ಕೊಟ್ಟು ವಿಭಿನ್ನ ಶೈಲಿಯಲ್ಲಿ ಉಡುತ್ತಾರೆ. ಹಾಗಾಗಿ ಲೆಹೆಂಗ ಚೋಲಿ ಫ್ಯಾಷನ್ಗೂ ಸೈ ಸಾಂಪ್ರದಾಯಿಕ ಉಡುಗೆಗೂ ಸೈ ಎಣಿಸಿಕೊಂಡಿದೆ.