News Karnataka Kannada
Monday, April 29 2024
ಅಂಕಣ

ಪಾರ್ಥಸಾರಥಿಯಾದನಾ ಮುಕುಂದ

Photo Credit :

ಪಾರ್ಥಸಾರಥಿಯಾದನಾ ಮುಕುಂದ

ಬಂದ ತತ್‍ಕ್ಷಣದೊಳಲ್ಲಿಗೆ ಗೋವಿಂದನೊಲಿದು

ಬಂದ ತತ್ ಕ್ಷಣದೊಳಲ್ಲಿಗೆ ||ಪ||

ಕಶ್ಯಪ ಮುಖ್ಯ ಮುನೀಶ್ವರರುಗಳಾ

ಲಸ್ಯಮಿಲ್ಲದೆ ತಾವೌ ಮಾಡುವ ಧ್ಯಾನಕೆ

ದೃಶ್ಯನೆನಿಪ ಪರಬ್ರಹ್ಮನು ಪಾರ್ಥಗೆ

ವಶ್ಯನೆಂಬುದ ನಿರ್ಧರಿಸುವ ತೆರದಿ ||

ಬಂದ ತತ್ ಕ್ಷಣ ದೊಳಲ್ಲಿಗೆ ||

ಸುಧನ್ವನ ಜೊತೆಗೆ ಹೋರಾಡಿ ಪರಾಜಿತನಾದ ಅರ್ಜುನ, ” ದೇವಕೃಷ್ಣ ನೀನು ನಮ್ಮ ಭಾವನೆಂದು ನಂಬಿ ಜಗದಿ ಕೋವಿದಶ್ವವನ್ನು ಪಿಡಿದು ಜೀವಿಸಿದೆನಲೈ” ಎಂಬುದಾಗಿ ಪರಿಪರಿಯಾಗಿ ಸಖೇದ ಮಾನಸನಾಗಿ ಕೃಷ್ಣನನ್ನು ಭಕ್ತಿಯಿಂದ ಒಲಿಸಿಕೊಳ್ಳುವ ಪ್ರಯತ್ನವದು. ” ಕೋವಿದಶ್ವವನ್ನು ಪಿಡಿದು ಜೀವಿಸಿದೆವಲಯ್ಯ ಮುಂದಿನ್ನೀ ವಿರೋಧಿಯೊಡನೆ ಕಾದಲಾವ ಪರಿಯೊಳು” ಎಂದು ದುಃಖಿಸುತ್ತಿದ್ದ ಪಾರ್ಥನಿಗೆ ಶ್ರೀಕೃಷ್ಣ ದರ್ಶನವಾಗುವ ಕಾಲವದು. ನಂದನಂದನ ಗೋವಿಂದನನ್ನು ಪ್ರಾರ್ಥಿಸುತ್ತಾ ಹೊಗಳುವಂತೆ ಹೋರಾಡಿದ ಸುಧನ್ವನ ಯುದ್ಧ ಕೌಶಲವನ್ನು ಕೊಂಡಾಡುತ್ತಾ ನೆಲಮುಖನಾದ ಕುಂತೀಸೂನುವಿಗೆ ದೇವಕಿಯ ಬಾಲ ಸತ್ಫಲವನ್ನು ಪ್ರಸಾದಿಸುವ ಸಂದರ್ಭವದು.

ಮೂಲಿಕೆ ರಾಮಕೃಷ್ಣ ವಿರಚಿತ ಸುಧನ್ವಾರ್ಜುನ ಕಾಳಗದ ಕೃಷ್ಣಾಗಮನದ ದೃಶ್ಯ ಪಾರ್ಥನ ಪಾಲಿಗೆ ವರಪ್ರಸಾದವೀಯುವ ಭಾಗವಾಗಿದೆ ಎಂದರೆ ಉತ್ಪ್ರೇಕ್ಷೆಯೆನಿಸದು. ಪೃಥ್ವಿಯಲ್ಲಿ ಸಾಟಿಯಿಲ್ಲದ ಪರಾಕ್ರಮಿ ಎಂಬ ಪ್ರತಿಯೊಬ್ಬರ ಪ್ರಶಂಸೆಗೆ ಪಾತ್ರನಾದ  ಪಾರ್ಥನಿಗೊದಗಿದ ಪರಾಭವ ಸುಧನ್ವನ ಪಾಲಿಗೆ ಜಯದ ಮೆಟ್ಟಿಲಾಗಿತ್ತು. ಆ ಮೆಟ್ಟಿಲು ಮೋಕ್ಷದೆಡೆಗೆ ಕೊಂಡೊಯ್ಯುತ್ತದೆ ಎಂಬುದು ಸುಧನ್ವನಿಗೆ ವೇದ್ಯವಾಗಿತ್ತು.

ಕರೆ ಕರೆದು ಮೂದಲಿಸುತ್ತಿದ್ದ ಸುಧನ್ವನ ಮಾತನಾಲಿಸಿ ಬೇಸತ್ತುಹೋದ ಕಿರೀಟಿಗೆ ಕೃಷ್ಣ ದರ್ಶನದ ಅನಿವಾರ್ಯತೆ  ಅರ್ಥವಾಗುತ್ತಾ ಹೋಗುತ್ತದೆ. ಇಂದಿರಾರಮಣನನ್ನು ಸಂಕ್ರಂದನ ನಂದನ ವಿನೀತನಾಗಿ ಪ್ರಾರ್ಥಿಸಿಕೊಳ್ಳುತ್ತಾನೆ. ಸುಧನ್ವನೊಡನೆ ಹೋರಾಡಿ ಸೋತು ಹೋದ ಪಾರ್ಥನ ಆಕ್ರಂದನ ಅಚ್ಯುತನಿಗೆ ಕೇಳಿದಾಗ ದಯಾಮಯಿಯಾದ ಕೃಷ್ಣ ಒಲಿದು ಬರುತ್ತಾನೆ, ನಲಿದು ಬರುತ್ತಾನೆ.

ಬಳಿಕ‌ ಚರಣಕೆ‌ ಮಣಿದ ಪಾರ್ಥನ

ಸೆಳೆದು ಬಿಗಿದಪ್ಪುತಲೆ ತಾ ರಥ

ದೊಳಗೆ ಕುಳಿತಶ್ವಗಳ ವಾಘೆಯಕೊಂಡನಾ ಹರಿಯು

ಭೀಮಾನುಜನ ಭವ್ಯ ಪರಾಕ್ರಮ ಬರಡಾಗಿ ಹೋದ ಬಗೆಯನ್ನು ಕಂಡ ಭಕ್ತವತ್ಸಲ‌ಮುಕುಂದ ಅರ್ಜುನನನ್ನು ಅನುಗ್ರಹಿಸಲು ಮುಂದಾಗುತ್ತಾನೆ. ಪುರುಷೋತ್ತಮನ ಅನುಗ್ರಹ ಆದೇಶಗಳಂತೆ ನಡೆಯುತ್ತಿದ್ದ ಅಶ್ವಮೇಧದ ಕುದುರೆಯನ್ನು ಕಟ್ಟಿದ ವೀರ ವೈಷ್ಣವ ಸುಧನ್ವಗೆ ತನ್ನ ಇಷ್ಟದೇವರನ್ನು ಕಾಣುವ ಸಂಭ್ರಮ ಒಂದೆಡೆಯಾದರೆ ಆ ಇಷ್ಟ ದೇವರಿಗೆ ಕಷ್ಟ ಒದಗಿ ಬರುವ ದುಃಸ್ಥಿತಿ ನಿರ್ಮಾಣವಾಗುವ ಬಗೆ ಇನ್ನೊಂದೆಡೆಯಲ್ಲಿತ್ತು. ಹರಿಯ ಹರಕೆಯನ್ನು ಹೊತ್ತು ಹರಿಯ ಬೆಂಬತ್ತಿ ಬಂದ ಅರ್ಜುನನ ಸೋಲು ಅದು ಹರಿಯಸೋಲಾಗಿತ್ತು. ಎಷ್ಟಾದರೂ ನರ- ನಾರಾಯಣರಲ್ಲವೇ ಅವರು. ಅಗ್ರಜನ ಅಶ್ವಮೇಧವನ್ನು ಪೂರೈಸುವ ಹೊಣೆ ಕೃಷ್ಣನ ಮಡಿಲಿಗೆ ಹಾಕಿದ ಪಾರ್ಥ ಮುಗ್ಧನಾಗುತ್ತಾನೆ. ಕೃಷ್ಣನುಡಿಗೆ ಬದ್ಧನಾಗುತ್ತಾನೆ.

ಅರ್ಜುನನ ತೇರ ಸಾರಥಿ ಸತ್ತಿರುವುದನ್ನು ಗಮನಿಸಿದ ಮುಕುಂದ ತನ್ನ ಸಖನಿಗೆ ಬಾಳ ಸಾರಥಿಯಾಗಿದುದ್ದನ್ನು ರಣಮಖದಲ್ಲಿ ಎಲ್ಲರಿಗೂ ಮತ್ತೊಮ್ಮೆ ಅರ್ಥೈಸುತ್ತಾನೆ. ” ಮುರಾರಿ, ಮುಂದಿನ ದಾರಿ ತೋರಿಸು” ಎಂದು ಬೇಡಿದ ಗಾಂಢೀವಿಯನ್ನು ಗೋಪಬಾಲ ಸೆಳೆದು ಬಿಗಿದಪ್ಪುತ್ತಾನೆ. ” ವೀರವೈಷ್ಣವ ಸುಧನ್ವನಿಗೆ ತಾನು ಪರಾಜಯವನ್ನು ಕೈಗೂಡಿಸುತ್ತೇನೆ” ಎಂದು ನಿಶ್ಚಯಿಸುತ್ತಾನೆ. ಕೃಷ್ಣದಯೆಯಿಂದ ನವ ಚೈತನ್ಯಭರಿತರಾಗಿ ಎದ್ದು ನಿಲ್ಲುತ್ತಿದ್ದ ಸೈನ್ಯದ ಪರಿಯನ್ನು ನೋಡಿದ ಪಾರ್ಥನ ಕಂಗಳು ತೇವಗೊಂಡವು. ಜಗವನ್ನು ಮುನ್ನಡೆಸುವ ಶ್ರೀಕೃಷ್ಣನೇ ಹಯವನ್ನು ಹಿಡಿದಾಗ ಪಾರ್ಥನಲ್ಲಿ ಕಳೆಗುಂದಿದ ತೇಜಸ್ಸು ಮರುಕಳಿಸಿತು. ಬಾಯ್ಬಿಟ್ಟು ಅಳುತ್ತಿದ್ದ ಪಾರ್ಥನ ಬಾಯೊಳು ವಿಜಯದ ಜಯ ಘೋಷ ಮೊಳಗತೊಡಗಿತು. ಸುಧನ್ವನ ಮೋಕ್ಷ ಸಂಗ್ರಾಮಕ್ಕೆ, ಫಲ್ಗುಣನ ರಥಾರೋಹಣಕ್ಕೆ ಶ್ರೀಕೃಷ್ಣನೇ ಹೆದ್ದಾರಿಯಾದ. ಪಾರ್ಥಸಾರಥಿಯಾಗಿ ಮುಂದುವರೆದ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
200
Deevith S. K. Peradi

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು