News Karnataka Kannada
Monday, April 29 2024
ಅಂಕಣ

ಗೋಮಿನಿಗಿಳಿದಳಾ ಸುರಭಿಸುತೆ…

Photo Credit :

ಗೋಮಿನಿಗಿಳಿದಳಾ ಸುರಭಿಸುತೆ...

ಖಂಡ ಪರಶುವೆ ಬರಲಿ ಬಳಿಕಾ |
ಖಂಡಲನು ನುಡಿದಿರಲಿ ನಾ ಭೂ |
ಮಂಡಲಕೆ ಬರೆ ಚಂಡಿಗೊಳಬೇಡೆನುತ ಮೊಗದಿರುಹೆ |

ತಿರುಗಿಸಿದ ಮೊಗ ತಾಪಸಿಗೆ ಬೇಗೆಯನ್ನಿತ್ತರೂ ಜಗದ ಜೀವನ ಪಾವನವಾಗುವ ಸಂದರ್ಭ. ವಿನೀತನಾಗಿ ಬೇಡುತ್ತಿದ್ದ ವರತಪೋನಿಧಿ ಜಾಬಾಲಿಗೆ ಸುರಭಿಸುತೆ ನಂದಿನಿಯಿಂದ ದೊರೆತ ಭುವಿಯೊಳಾದ ವಿದ್ರೋಹದ ಕಥನ ಮಾಲಿಕೆ. ಶಕ್ರನಿಂದಾದ ವಕ್ರನಡೆ, ಧರಿತ್ರಿಯ ದೋಷವೇ ಸ್ಥಾಯಿಭಾಗವಾಗಿ ಪರಿಣಮಿಸಿದ ವೇಳೆ ಇಳೆಯ ಔನ್ನತ್ಯಭಾಗಕ್ಕೆ ಅಡಿಗಡಿಗೆ ಅಪಹಾಸ್ಯದೊಂದಿಗೆ ಲೇವಡಿಯಾಡಿದ ಧೇನು ಮಾತೆಗೆ ಸಂಪ್ರಾಪ್ತವಾದ ಶಿಕ್ಷೆಯೆಂಬ ಸುಭಿಕ್ಷೆ, ತಾಪಸಿಯ ಕೋಪ ಶಾಪವಾಗಿ ಕುಂಭಿನಿಗೆ ನೀರಾಗಿ ಹರಿಯುವ ನೀರೆಯ ಜೀವಸೆಲೆಯ ಪ್ರತೀಕ “ಜಾಬಾಲಿ ನಂದಿನಿ” ಶಾಪಾನುಗ್ರಹ ಭಾಗ.

ಯಕ್ಷಗಾನ ಛನ್ದೋಂಬುಧಿ ಎಂಬ ಶಾಸ್ತ್ರ ಗ್ರಂಥವನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಿಸಿ ಯಕ್ಷಮಾನಸದೊಳಗೆ ಸದಾ ಅಜರಾಮರರಾಗಿ ಉಳಿದಿರುವ ಅಭಿನವ ನಾಗವರ್ಮ, ಛನ್ದೋಬ್ರಹ್ಮ ಡಾ. ಎನ್ .ನಾರಾಯಣ ಶೆಟ್ಟಿ ಶಿಮಂತೂರು ಇವರ ಸದಾ ಸ್ಮರಣೀಯವಾದ ಯಕ್ಷಗಾನ ಪ್ರಸಂಗ “ಶ್ರೀ ಕಟೀಲು ಕ್ಷೇತ್ರ ಮಾಹಾತ್ಮ್ಯಂ” ಯಕ್ಷಗಾನ ಸಾರಸ್ವತ ಲೋಕದ ದಿನಮಣಿಯೆಂದರೆ ಉತ್ಪ್ರೇಕ್ಷೆಯೆನಿಸದು. ಈ ಪ್ರಸಂಗದ ಪ್ರತಿಯೊಂದು ಭಾಗವೂ ಭಾವದ ಸೆಲೆಯಾಗಿದ್ದು “ಜಾಬಾಲಿ‌ ನಂದಿನಿ” ಎಂಬ ಭಾಗವು ಯಕ್ಷಗಾನ ಲೋಕದ ಅನೇಕ ಪ್ರಯೋಗ- ಪ್ರದರ್ಶನಗಳಿಗೆ ಕಾಂತಿಯಿತ್ತ ಅಪೂರ್ವ ರಚನೆ.

” ಸುರಪಾಲ ಪೇಳ್ವೆನೆಲ್ಲಾ| ಭೂವಲಯದಿ | ಬರಗಾಲವೊದಗಿತಲ್ಲಾ | ಹರನು ಕೊಲ್ಲುವ ಕಾಲ | ಪೆರರು ಕಾವವರುಂಟೆ | ಪರಿಹರಿಸೆಂದು ಸೇ | ರಿರುವೆನಾಶ್ರಯಕಾಗಿ  ” ಎಂದು ಜಾಬಾಲಿ ಮುನಿ ಧರಣಿಗೊದಗಿದ ಕ್ಷಾಮದ ಹಾಹಾಕಾರವನ್ನು, ಗುಟುಕು ನೀರಿಗೂ, ತುತ್ತು ಅನ್ನಕ್ಕೂ ಹಪಹಪಿಸುವ ಸಂಕಷ್ಟವನ್ನು ಕಣ್ಣಿಗೆ ಕಟ್ಟುವ ಹಾಗೆ, ಮನ ಮುಟ್ಟುವ ಹಾಗೆ ದೇವೇಂದ್ರನ ಮುಂದೆ ಬಿತ್ತರಿಸಿದಾಗ ಅದನ್ನರ್ಥೈಸಿಕೊಂಡ ದೇವೇಂದ್ರ ” ಜನರ ದುಷ್ಕೃತ್ಯವಿದು ಮುನಿಪಾಲ | ನಿರ್ನಾಮವಾಗಿದೆ | ಘನವೆನಿಪ ಧರ್ಮಂಗಳನುಗಾಲ | ಧನ ತನುಜ ನಿಜ | ವನಿತೆಯರ ಮದ | ವೆಣಿಕೆಗೊದಗದು | ಮನದೊಳಾಹರಿ-I ಯನು ನೆನೆಯರನು- ದಿನವು ವೈದಿಕ | ತನ ಯಜನಯಾ- ಜನಗಳಿಲ್ಲವು ” ಎಂದು ಕರ್ಮ ಭೂಮಿಯಲ್ಲಾಗಿಹ ಅನಾಚಾರದ ಆಚರಣೆಯನ್ನು ವಿವರಿಸುವ ಜೊತೆಗೆ ” ಕರ್ಮಭೂಮಿಗೊದಗಿದ ಕ್ಷಾಮವನ್ನು ಕಳೆಯಲು ಕಾಮಿತವನ್ನೀಯುವ ಸುರಧೇನು ವರುಣ ಲೋಕಕ್ಕೆ ತೆರಳಿರುವುದರಿಂದ ಆ ಕಾಮಧೇನು ನಿಮಗೆ ದೊರೆಯಲಾರಳು. ಆದರೆ ಆಕೆಯ ಕುವರಿ ನಂದಿನಿಯು ಬರುವಳು. ನಿಮ್ಮ ಮಖಕ್ಕೆ ಆಕೆಯನ್ನು ಕರೆಸಿ ಧರೆಯ ಸಿರಿಯನ್ನು ಬೆಳಗು” ಎಂದು ದೇವೇಂದ್ರನು ಆಶಾದಾಯಕ‌ ನುಡಿಗಳನ್ನಾಡಿದರೂ ಜಾಬಾಲಿಗೆ ನಂದಿನಿಯಿಂದೊಗೆದ ನಿರಾಶೆಯ ವಾಗ್ಝರಿ ಆತನ ಆಶಾ ಸೌಧವನ್ನೇ ಕೆಡಹುವ ಪರಿ ಪ್ರಸಂಗದ ಮಾರ್ಮಿಕ ದೃಶ್ಯವಾಗಿದೆ.

ಧೇನು ಮಾತೆಗೆ ಮುನಿವರನು ಬಲವಂದು ವಂದಿಸಿ ತನ್ನಿರವನ್ನು ಆಕೆಯಲ್ಲಿ ವ್ಯಕ್ತ ಪಡಿಸಿದಾಗ ನಂದಿನಿ ” ಗರುವಿಯಾದ ದುರುಳ ಜನರ | ಪರರ ವಂಚಿಸುವರ ನೆಲೆಯು | ಧರೆಗೆ ನಾನು ಬರೆನು ಬರಿದೆ | ಮರುಳುತನವಿದು ” ಎಂದು ತಾನು ಧರೆಗೆ ಬರಲಾರೆಯೆಂದು ಗರ್ವದಿ ನುಡಿಯುವ ಜೊತೆಗೆ ಅಪಾತ್ರರಿಗೆ ದಾನಮಾಡಬಾರದು ಎಂಬ ನಿಟ್ಟಿನಲ್ಲಿ ಭೂಲೋಕದಲ್ಲಿ ಕಾಲ ಗತಿಯಲ್ಲೊದಗಿದ ವಿವಿಧ ಕೃತ್ಯಗಳ ನಿದರ್ಶನವನ್ನು ಮುಂದಿರಿಸಲು ಯತ್ನಿಸುತ್ತಾಳೆ.

ಧರಣೀಶನಾ ಕಾರ್ತವೀರ್ಯ| ಬರೆ |

ಪರಿವಾರಕುಣಲಿತ್ತ ಭೃಗುಜನೌದಾರ್ಯ ||

ಮರೆತಾತನನೆ ಕುತ್ತಿಕೊಂದ | ಅಂಥಾ |
ದುರುಳರಾ ಧರೆಗೆ ಬಾರೆನು ಸಾಮದಿಂದ ||

ಕವಿಯು ಆದಿಯಲ್ಲಾದ ಘಟನಾವಳಿಗಳ ಮೂಲಕ ವಸುಂಧರೆಯ ಸಾಧಕ- ಬಾಧಕವನ್ನು ಚಿತ್ರಿಸುತ್ತಾ ಹೋಗಿರುವುದು ಈ ಭಾಗದ ವಿಶೇಷವಾಗಿದೆ. ಕೃತವೀರ್ಯನ ಸುತನಾದ ಕಾರ್ತವೀರ್ಯನಿಂದ ಜಮದಗ್ನಿಗಾದ ಅನ್ಯಾಯವನ್ನು ಅಪರಾಧದ ನೆಲೆಯಲ್ಲಿ ನಂದಿನಿಯ ಮೂಲಕ ಹೇಳಿಸುವ ಕವಿ ” ಗುರುವಾ ಕಯಾದು ಪುತ್ರನಲಿ | ನಿಮ್ಮ | ಸುರಪಾಲ ಶಿಷ್ಯನಾಗಿರುತಲಂತ್ಯದಲಿ | ಗುರುದ್ರೋಹದಿಂ ಶೀಲ ಕಸಿದು | ಜೀವ | ವಿರುವಂತೆ ಕೊಂದ ಪಾಪಗಳೇನು ಕಿರಿದು “ ಎಂದು ಸುಮನಸರ ಕುಕೃತ್ಯವನ್ನೂ ತಿಳಿಸುವ ಬಗೆ ಕಥನದೊಳಗೆ ಮಾಡುವ ನೈತಿಕತೆಯ ಶೋಧವಾಗಿದೆ.

ಗೋಮಿನಿಗೆ ಇಳಿದು ಬಾಯೆಂದು ನಂದನವನದೊಳಗಿರುವ ಗೋಜಾತೆಯನ್ನು ಪರಿಪರಿಯಾಗಿ ಬೇಡಿದರೂ ಬರಲೊಲ್ಲದ ನಂದಿನಿ “ಬೇಡ ಬೇಡ ಬರಿದೆ ಛಲವ ಮಾಡಬೇಡಯತಿವರ |
ಹೇವರಿಸದೆ ಸುರೆಯ ಕುಡಿದು | ದೇವರನ್ನೆಹಳಿಯುತ | ಜೀವಿಸಿದರು ದುರುಳರಾದ | ರಾವಣಾದ್ಯರೆಲ್ಲರು ” ಎಂದು ಪೃಥ್ವಿಯ ಜನರ ವಿಕೃತ ಮನೋಸ್ಥಿತಿಯನ್ನು ಹೀಗಳೆದಾಗ ಸುಮ್ಮನಿರದ ಯತಿ ಜಾಬಾಲಿ “ಹಿಂದಕಿಂದ್ರ ಸುರೆಯಕುಡಿದು | ಇಂದು ಧರನನೆದುರಿಸಿ | ಬಂದ ಬವಣೆಮರೆತುಪರರ | ಕುಂದಮೆರೆಸಲೇತಕೆ ” ಎಂದು ನುಡಿವ ದೃಶ್ಯ ಪ್ರಸಂಗದೊಳಗಿರುವ ಕಥೆಗಳ ಒಳಹರಿವನ್ನು ಚಿತ್ರಿಸುತ್ತದೆ.

ಭೂಲೋಕದ ಪುರುಷ ಪ್ರಾಧಾನ್ಯತೆಗೆ ಪೂರಕವಾಗಿ ವಿಷಯವನ್ನರುಹುವ ನಂದಿನಿ ಕಳೆಯುತವಾದ ಇಳೆಗೆ ನಾನಿಳಿಯಲಾರೆ ಎಂದು ಹೇಳುವಲ್ಲಿ ಕಾರಣಗಳ‌ನ್ನೀಯುತ್ತಾಳೆ. “ಪಾಂಡವರ ಕೆಡಿಸುತ್ತ ಭೋಗವ | ನುಂಡು ಮಡಿದಾ ಕೌರವನಪರಿ | ಭಂಡ ಸ್ವಾರ್ಥಿಗಳಿರುವ ರಾ ಭೂ | ಮಂಡಲದಲಿ ” ಎಂದು ಲೋಕ ಧರ್ಮಕ್ಕೆ ವ್ಯತಿರಿಕ್ತವಾಗಿ‌ ಮೂಡಿದ ಹಲವು ಸನ್ನಿವೇಶಗಳನ್ನು ವಿಷದೀಕರಿಸುವ ಜೊತೆಗೆ “ಸತಿಯರ ವ್ರತಗಳ ಕೆಡಿಸುವ ದುರುಳರು | ಕ್ಷಿತಿಯೊಳುದಿಪರು ನಿರಂತರವು | ಮತಿಹೀನರು ಕೀಚಕ ಮುಖ್ಯರ ಸಂ-| ಗತಿಯರಿತಿಹೆ ಮೌನೀಶ್ವರನೇ ” ಎಂದು ಭೂವಲಯದೊಳಿರುವ ಪಾತಕಗಳನ್ನು ಮುನೀಶ್ವರನ ಮುಂದೆ ಬಿತ್ತರಿಸುತ್ತಾಳೆ. ಆಗ ಸುರಭಿಸುತೆಗೆ ಜಾಬಾಲಿಯು ” ತನ್ನ ಸಂಕಲ್ಪ ಸುಳ್ಳಾಗಕೂಡದು” ಎಂಬ ಉದ್ದೇಶದಿಂದ “ಗೌತಮನರಸಿಯ ಬಯಸಿ ಮಹೇಂದ್ರನು | ಘಾತಕದಲಿ ಸಂಚನುಮಾಡಿ | ಖ್ಯಾತನೆನಿಸಿ ಮೈಗಣ್ಣನೆನಿಪ ಪುರುಹೂತನು ತಿಳಿಯೋಚನೆ ಮಾಡಿ” ಎಂದು ಹೇಳಿದಾಗ ಖತಿಯ ಎಲ್ಲೆಯನ್ನು ಮೀರಿದ ನಂದಿನಿ ” ಮೂಢ ಜನರಿರುವ ಭೂಮಿಗೆ ಬರಲು ನಾನು ಮನಸನ್ನು ಮಾಡಲಾರೆ, ಇನ್ನು ಕಾಡದಿರಿ, ನಿಮ್ಮ ನುಡಿಯು ನನಗೆ ಮಾನ್ಯವಲ್ಲ” ಎಂದು ನುಡಿದೇ ಬಿಡುತ್ತಾಳೆ. ವಂದನೀಯಳೂ ಪೂಜನೀಯಳೂ ಆದ ಸುರಭಿಸುತೆ ತುಷ್ಟಮಾನಸಳಾಗಿ ಬರುವಳೆಂದು ಭಾವಿಸಿದ ಮುನಿವರನಿಗೆ ದೇವರಾಜನೆಂದ ನುಡಿಯನ್ನೂ ಶಿರಸಾ ವಹಿಸದೆ ಧರೆಗೆ ಧಾವಿಸಲು ಮನ ಮಾಡದೇ ಇರುವ ನಂದಿನಿಯ ದಾರ್ಷ್ಟ್ಯದ ನುಡಿಗಳನ್ನು ಕೇಳಿ ಕೋಪ ಉಕ್ಕೇರುತ್ತದೆ. ಕಂಗಳಲಿ ಕೆಂಡವನು ಕಾರುತ್ತಾ ನೃಮುಂಡಮಾಲನ ರೀತಿಯಲ್ಲಿ ನಂದಿನಿಗೆ ತನ್ನಿರವನ್ನು ಪರಿಚಯಿಸಿ ಆಕೆಯ ತಲೆಯೊಳಗೆ ಘನೀಭವಿಸಿದ್ದ ಅಹಂಕಾರವನ್ನು ಕರಗಿಸಲೆಳಸುವ ದೃಶ್ಯ ಪ್ರಸಂಗದ ಹೃದಯಭಾಗ.

ಅವನಿಯ ಹಳಿದೆಯ ರೇಗಿ | ನೀ |
ಭುವಿಯೊಳೊಗೆದು ನದಿಯಾಗಿ |

ಪ್ರವಹಿಸುತಿಹುದೆನ್ನುತಲಿ | ಮುನಿ |
ಯವಳನು ಶಪಿಸಿದ ಕೆರಳಿ ||

“ಎಲೆ ದುರುಳೆ, ಸ್ವರ್ಗದಲ್ಲಿ ಬಲು ಕೊಬ್ಬಿರುವ ನೀನು ಗರ್ವದಿಂದ ಬೀಗುತ್ತಿರುವೆಯಾ? ಜಲಜಾಕ್ಷನು ಸಹಿತೆಮಗೆ ಮಣಿದಿರಬೇಕಾದರೆ ನೀನೇನು ಮಹಾ! ವಾರಿಜನಾಭ ಪ್ರಮುಖರು ಮನಸಾರೆ ಧರೆಯನಿಚ್ಚಿಸಿರಬೇಕಾದರೆ ಅಂತಹ ಪವಿತ್ರತಮ ಭಾರತ ಭೂಮಿಯ ಘನತೆ ನಿನಗೆ ತಿಳಿಯಲಾರದೆ ಹೋಯಿತೇ? ರಘುವರ- ಯದುಪತಿಗಳ ನೆಲೆವೀಡಾದ, ನರನಾರಾಯಣರೇ ಮೊದಲಾದವರು ಆವಿರ್ಭಸಿದ ಧರೆಯನ್ನು ಹಳಿದೆಯಾ?” ಎಂದು ಕೋಪೋದ್ರಿಕ್ತನಾಗಿ ನುಡಿದ ಜಾಬಾಲಿ ಮುನಿ ” ಯಾವ ಧಾರುಣಿಯನ್ನು ಪರಿಪರಿಯಾಗಿ ನಿಂದಿಸಿದೆಯೋ ಆ ಧರೆಯಲ್ಲಿ ನೀನೂ ಕರಗಬೇಕು, ಕೊರಗಬೇಕು, ಹರಿಯಬೇಕು… ಇದೋ ಧರೆಯೊಳಗೆ ನದಿಯಾಗಿ ಪ್ರವಹಿಸು” ಎಂಬುದಾಗಿ ಶಾಪವಿಡುತ್ತಾನೆ.

ಅಹಂಕಾರಾಲಂಕಾರ ಭೂಷಿತೆಯಾಗಿದ್ದ ಧೇನುಮಾತೆ ಕೋಪದ ಪರಿಣಾಮವಾಗಿ ಹೊರಹೊಮ್ಮಿದ ಭೀಷಣವಾದ ಶಾಪವಾಕ್ಯವನ್ನು ಕೇಳಿ ಬೆದರಿ, ನಡುಗಿ, ಕಂಬನಿ ತುಂಬಿ ಯತಿಪತಿಯ ಪಾದಕ್ಕೆ ಮಣಿದು “ಮಂದಮತಿತ್ವದ ನೆಲೆಯಿಂದಾದ ಅಪರಾಧವನ್ನು ಮನ್ನಿಸು…. ಶಾಪದ ಬೇಗೆಯಿಂದ ಉದ್ಧರಿಸು” ಎಂದು ಗೋಳಿಡಲು ನಂದಿನಿಯನ್ನು ತಾಪಸಕುಲತಿಲಕ ಸಮಾಧಾನಿಸುತ್ತಾನೆ.

ತುಂಬಿದಸಿರಿಯಿಂದ ಕುಂಭಿನಿ ಮೆರೆವಂತೆ |
ತುಂಬಿದ ನದಿಯಾಗು ನೀನು ||
ಕಂಬುಕಂಠಿನಿ ಕಾವಳಂಬಿಕೆ ದಿಟವಲ್ಲಿ |
ನಂಬು ಮುಕ್ತಿಯ ನೀನು ಪಡೆವೆ |||

“ನನ್ನ ಆರ್ತ ನುಡಿಯನ್ನು ಕೇಳಿ ಕರಗಲಾರಿರ? ಕರುಣೆತೋರಲಾರಿರಾ? ಎಂದು ಪರಿಮಾರ್ಜನೆಗಾಗಿ ಪರಿಪರಿಯಾಗಿ ದುಃಖಿಸಿದ ನಂದಿನಿಯ ಪಾಲಿಗೆ ಜಾಬಾಲಿ ಮುನಿ ಕಾರುಣ್ಯದ ನೆಲೆಯಾಗುತ್ತಾನೆ.
“ಸುಗುಣೆ, ಸಾತ್ವಿಕಳಾದ ಮಗಳೆ ನಂದಿನಿ ಖೇದವೇಕೆ? ಧರೆಯಲ್ಲಿ ನೀನು ತುಂಬಿದ ಸಿರಿಯಾಗಿ ನದಿಯಾಗಿ ಹರಿಯಲೇ ಬೇಕು. ಋಷಿ ಶಾಪ ಎಂದಿಗೂ ತಪ್ಪದು. ಶಾಪವಿಮೋಚನಾ ಹಾದಿಗಾಗಿ ಶಂಭುವಿನರಸಿ ಅಂಬಿಕೆಯನ್ನು ಪ್ರಾರ್ಥಿಸು ” ಎಂದು ಹೇಳಿ ಧರೆಯಭಾರವನ್ನಿಳಿಸುವ ಮಹತ್ಕಾರ್ಯಕ್ಕೆ ಮುನ್ನುಡಿ ಬರೆಯುತ್ತಾನೆ.

ಮುನಿಪನಾಡಿದ ಮಾತುಗಳಿಂದ ತುಸು ಸಂತೈಸಲ್ಪಟ್ಟ ಸುರಭಿಸುತೆ ಕನಕಗಿರಿಗೆ ಬಂದು ಜಗದಾದಿ ಶಕ್ತಿಯನ್ನು ನುತಿಸುತ್ತಾಳೆ.

ಮಾತೆಸುರನುತೆ ಹರಿಪ್ರೀತೆ ವಿಖ್ಯಾತೆ ಜಗ– |
ದಾತೆ ನಗ ಜಾತೆ ತವಜಾತೆಯೆಂದಾ ತುರದೊ |
ಳೋತು ಪೊರೆ, ಯಾತಕೀ ಕಾತರದ ಯಾತನೆ ಪ್ರಣೀತಮನದೀ ತನುಜೆಯಂ॥
ಘಾತಿಸದಿರವ್ವ ಪಳವಾತಿನಾವ್ರಾತಗಳ್ | ನೇತಿಯೆನ್ನುವ ಗುಣಾತೀತೆ. ಜಲಜಾತ ಸಂ-|
ಜಾತಾದಿ ಮಾತೆ, ನಾ ಸೋತೆ ಸುಖದಾತೆ ಸುರವ್ರಾತನುತೆ ಪೊರೆಯೆಂದಳು||

ನಂದಿನಿಯ ಮೊರೆಯನ್ನಾಲಿಸಿ ಅವಧರಿಸಿದ ಜಗನ್ಮಾತೆಗೆ ಸುರಭಿಸುತೆಯು ಸಖೇದ ಸಂತಸ ಭರಿತಳಾಗಿ ಭಕ್ತಿಯಿಂದಲಿ ದೃಗುಜಲವನ್ನು ಸುರಿಸುತ್ತಾ” ಭಕುತರ ಭಕ್ತಿಗೊಲಿದು ಗತಿಯನ್ನು ನೀಡುವ ನೀನು ಯತಿಯ ಶಾಪವ ಪರಿಹರಿಸಿ ಸದ್ಗತಿಯನ್ನು ನೀಡು ” ಎಂದು ಬೇಡಿಕೊಂಡಾಗ ಪ್ರಸನ್ನಳಾದ ಪ್ರಣವ ಸ್ವರೂಪಿಣಿ ” ಮಗಳೇ ನಂದಿನಿ, ಈ ತೆರನಾದ ವಿಭ್ರಮೆಯು ನಿನಗೆ ತರವಲ್ಲ. ಸುರನದಿಯಂತಾಗಲು ನಿನಗಿದು ಪುಣ್ಯಕಾಲ. ಕನಕಗಿರಿಯ ಬುಡದಿಂದೊಗೆದ ವಾಹಿನಿಯಾಗು. ಜನಹಿತವನ್ನೇ ಧ್ಯೇಯವಾಗಿರಿಸಿಕೊಂಡು ಪಡುವಣದ ಕಡಲನ್ನು ಕೂಡು ” ಎಂದು ಹೇಳುವ ಜೊತೆಗೆ ಭವಿತವ್ಯದ ತನ್ನ ಲೀಲಾವಿನೋದದ ಬಗೆಯನ್ನರುಹುವ ಸೊಗ ಪ್ರಸಂಗದ ಜೀವಾಳವಾಗಿದೆ.

ನಿನ್ನ ಕಟಿಯಿಂದೊಗೆವೆನು | ಮಗಳಾಗಿ |
ಉನ್ನತದ ಫಲವೀವೆನು ||
ಪುಣ್ಯನದಿಯಪ್ಪೆತಾಯೇ | ನೀನೆಂದು
ಮನ್ನಿಸಿದಳಾದಿಮಾಯೆ ||

ಮಗಳೆಂದು ನಂದಿನಿಯನ್ನು ಸಂಬೋಧಿಸಿದ ಜಗನ್ಮಾತೆ ಮುಂದೆ ಆಕೆಯ ಕಟಿ ಭಾಗದಲ್ಲುದಿಸಿ ಆಕೆಯ ಮಗಳಾಗಿ‌ ಲೋಕಮುಖಕ್ಕೆ ಪರಿಚಿತಳಾಗುವ ಅಂಬಿಕೆಯ ಲೀಲಾವಿಲಾಸವನ್ನು ಅರ್ಥವಿಸಿಕೊಂಡ ಧೇನುಮಾತೆ ಜಗದಂಬೆಯ ಆಣತಿಯಂತೆ ಕರ್ತಾರನ ಕಮ್ಮಟವಾದ ಭೂಲೋಕದತ್ತ ನದಿಯಾಗಿ ಧುಮುಕಲು ಮುಂದಾಗುತ್ತಾಳೆ…..

ಆಗಸದ ಬೆಳುಗೊಡೆಯಡಿಗೆ ಸೊಗ -|
ಸಾಗಿರುವ ಕನಕಾದ್ರಿ ಶೃಂಗದಿ ||
ಹೂಗಳಂಜಲಿಯಿಂದ ಪರಶಿವೆಗಾಗಮೋಕ್ತದಲಿ ||
ಬಾಗಿ ಶಿರವನು ಲೋಗರಿಗೆ ನೆರ-|
ವಾಗಲೆನ್ನುತ ಸಾಗಿ ಬಂದಳು |
ಮಾಘ ಮಾಸದ ಪೌರ್ಣಮಿಯ ಶುಭ ದಿನದಿ ನದಿಯಾಗಿ ||

ಮಾಘ ಮಾಸದ ಪೌರ್ಣಮಿಯ ಶುಭ ದಿನದಿ ನಂದಿನಿಯು ಕನಕ ಗಿರಿಯಿಂದ ಭರದಿ ಧುಮುಕುತ, ಬೆಳ್ಳಿಯ ಕಾಂತಿಯಿಂದ ರಾಜಿಸುವ ನೊರೆಯೆನಿಪ ಸೀರೆಯನ್ನುಟ್ಟು ತರತರದ ಪುಷ್ಟಗಳಿಂದ ಶೋಭಿಸುವ ತನ್ನ ಇತ್ತಟಗಳನ್ನು ಕಂಡು ತಾನೇ ಹಿಗ್ಗುತ್ತಾ, ಕಾಠಿಣ್ಯದ ಶಿಲೆಗಳೆಡೆಯಲ್ಲಿ ಕಾರುಣ್ಯದ ನೆಲೆಯಾಗಿ ಹರಿದು, ಭೋರ್ಗರೆದು, ಉತ್ಪಾತ- ಸವಕಳಿಯನ್ನು ನಿರ್ಮಿಸದೆ, ನಿರ್ಜನ ವನದಿ ಹರಿಯುತ್ತಾ ಸಾಗುವಳು ನದಿಯಾಗಿ… ವಸುಂಧರೆಗೆ ಹಸಿರನ್ನೀಯುವ ಉಸಿರಾಗಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
200
Deevith S. K. Peradi

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು