News Karnataka Kannada
Sunday, May 19 2024
ಆರೋಗ್ಯ

ಬದುಕಿಗೆ ಸೋಲು ಗೆಲುವಿನ ಪಾಠವಾಗಲಿ..

Photo Credit :

ಬದುಕಿಗೆ ಸೋಲು ಗೆಲುವಿನ ಪಾಠವಾಗಲಿ..

ನಮಗೆ ಬೇರೆಯವರನ್ನು ಸೋಲಿಸಿ ಗೊತ್ತಿರಬಹುದು. ಅಥವಾ ಬೇರೆಯವರ ಮುಂದೆ ಸೋತು ಅನುಭವ ಇರಬಹುದು. ಸೋಲು ಗೆಲುವು ಎನ್ನುವುದು ಈಗ ಕೇವಲ ಕ್ರೀಡೆಯಲ್ಲಷ್ಟೆ ಉಳಿದಿಲ್ಲ ಅದು ಬದುಕಿಗೂ ಅನ್ವಯಿಸುತ್ತಿದೆ. ಅನಾರೋಗ್ಯದಿಂದ ಸಾವನಂಚಿಗೆ ಹೋಗಿ ಬಂದವರ ದೊಡ್ಡ ಪಟ್ಟಿಯೇ ಇದೆ. ವೈದ್ಯರು ಸಾಧ್ಯವಿಲ್ಲವೆಂದು ಕೈಚಾಚಿದರೂ ಆತ್ಮವಿಶ್ವಾಸದಿಂದ ಸಾವನ್ನು ಗೆದ್ದು ಬದುಕುತ್ತೇನೆ ಎಂದು ತೋರಿಸಿಕೊಟ್ಟವರಿದ್ದಾರೆ.

ಇಲ್ಲಿ ಸಾವು ಖಚಿತವಾದರೂ ಅದನ್ನು ಒಂದಷ್ಟು ದಿನ ಮುಂದೂಡುವ ಶಕ್ತಿ ನಮ್ಮಲ್ಲಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ದೇಹದ ಸ್ಥಿತಿ ಕೆಟ್ಟು ಮನುಷ್ಯ ಸಾಯಬಹುದು. ಹಾಗೆಯೇ ಮನಸ್ಸಿನ ಸ್ವಾಸ್ಥ್ಯ ಕೆಡಿಸಿಕೊಂಡು ಸತ್ತವರೂ ಇದ್ದಾರೆ. ಹೀಗಿರುವಾಗ ದೇಹಕ್ಕೆ ಆಗಿರುವ ತೊಂದರೆಗೆ ಔಷಧಿ ತೆಗೆದುಕೊಂಡು ಹೇಗೆ ಗುಣಮುಖರಾಗಲು ಆಶಿಸುತ್ತೇವೆಯೋ ಹಾಗೆಯೇ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ನಮ್ಮಲ್ಲೇ ನಾವೇ ಏಕೆ ಬಯಸಬಾರದು.

ಹಿಂದಿನ ಕಾಲದಲ್ಲಿ ಹೊಟ್ಟೆಬಟ್ಟೆಗಿದ್ದರೆ ಸಾಕು. ಅಷ್ಟಕ್ಕೆ ಸಂಪಾದನೆ ಮಾಡಿಕೊಂಡು ನೆಮ್ಮದಿಯಾಗಿರುತ್ತಿದ್ದರು. ಬೇರೆಯವರನ್ನು ನೋಡಿ ಹಲಬುವ ಬದಲು ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಈಗ ಹಾಗಿಲ್ಲ ಕಾಲ ಬದಲಾಗಿದೆ. ಎಲ್ಲ ಕ್ಷೇತ್ರದಲ್ಲೂ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಸದಾ ಗೆಲುವಿನತ್ತಲೇ ಗುರಿಯಿಟ್ಟುಕೊಂಡು ಮುನ್ನಡೆಯುವುದು ಅನಿವಾರ್ಯವಾಗಿದೆ. ಗೆಲುವಿಗಾಗಿ ತಂತ್ರ, ಕುತಂತ್ರ, ಅನ್ಯಾಯ, ಭ್ರಷ್ಟಾಚಾರ ಹೀಗೆ ನಮ್ಮಿಂದ ಏನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲವನ್ನು ಮಾಡುತ್ತಾ ಸಾಗುತ್ತಿದ್ದೇವೆ. ಇದರಿಂದ ಹೇರಳ ಹಣವನ್ನು ಸಂಪಾದಿಸಿ ಕೂಡಿಡುತ್ತಿದ್ದರೂ ಅದರಿಂದ ದೈಹಿಕ ಮತ್ತು ಮಾನಸಿಕ ಎರಡು ಆರೋಗ್ಯವೂ ಇಲ್ಲದಾಗಿದೆ. ನಾವು ಏನೇ ಮಾಡಿದರೂ ನಮಗೊಬ್ಬ ಪ್ರತಿಸ್ಪಧರ್ಿ ಎಲ್ಲಿ ಹುಟ್ಟಿಬಿಡುತ್ತಾನೋ ಎಂಬ ಭಯ ನಮ್ಮನ್ನು ಸದಾ ಕಾಡುತ್ತಲೇ ಇರುತ್ತದೆ.

ಇಷ್ಟಕ್ಕೂ ನಾವು ಸಂಪಾದನೆಗಾಗಿ ಅನ್ಯ ಮಾರ್ಗವನ್ನಿಡಿದು ಸಂಪಾದಿಸಿದ್ದರೂ ಮಾನಸಿಕ ನೆಮ್ಮದಿ ಸಿಕ್ಕಿದೆಯಾ? ಆರೋಗ್ಯವಾಗಿದ್ದೇವೆಯೇ? ನೆಮ್ಮದಿಯ ನಿದ್ದೆ ಬಂದಿದೆಯಾ ಹೀಗೆ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಹೆಚ್ಚಿನವುಗಳಿಗೆ ಇಲ್ಲ ಎಂಬ ಉತ್ತರವೇ ಬರುತ್ತದೆ. ಮನುಷ್ಯ ಜೀವನದಲ್ಲಿ ಸೋಲು ಗೆಲುವು ಸಹಜ. ಗೆಲುವಿಗೆ ಹಿಗ್ಗದೆ ಸೋಲಿಗೆ ಕುಗ್ಗದೆ ಎರಡನ್ನೂ ಸಮನಾಗಿ ಸ್ವೀಕರಿಸುವ ಮನಸ್ಥಿತಿ ತಮ್ಮದಾಗಿರಬೇಕು. ಸದಾ ಗೆಲುವೇ ನಮ್ಮದಾಗಿರುತ್ತೆ ಎಂಬ ಭ್ರಮೆಯಿಂದ ಹೊರಬರಬೇಕು. ಏಕೆಂದರೆ ತಲೆಗೆ ಹಾಕಿದ ನೀರು ಕಾಲಿಗೆ ಬರುತ್ತೆ ವಿನಃ  ಕಾಲಿಗೆ ಹಾಕಿದ ನೀರು ತಲೆಗೆ ಬರುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ಜೀವನ ನಡೆಸುವುದು ಅಗತ್ಯವಿದೆ.

ಒಬ್ಬ ಗೆದ್ದಿದ್ದಾನೆ ಎಂದಾದರೆ ಮತ್ತೊಬ್ಬ ಸೋತಿದ್ದಾನೆ ಎಂದರ್ಥ. ಆಧ್ಯಾತ್ಮದಲ್ಲಿ ಚಿಂತಕರು ಹೇಳುತ್ತಾರೆ. ನಾವು ಬೇರೆಯವರನ್ನು ಗೆಲ್ಲುವುದರಲ್ಲಿ ಯಾವ ಶೂರತ್ವವೂ ಇಲ್ಲ. ನಾವು ನಮ್ಮನ್ನು ಗೆಲ್ಲುವುದರಲ್ಲಿ ನಿಜವಾದ ಶೂರತ್ವ ಅಡಗಿದೆ. ಇದು ಅಚ್ಚರಿಯಾಗಿ ಕಾಣಬಹುದು. ಇದೇ ವಿಚಾರವನ್ನು ಭಗವಾನ್ ಬುದ್ಧ ಒಂದು ಕಡೆ ಹೇಳುತ್ತಾರೆ.  ಒಬ್ಬ ರಣರಂಗದಲ್ಲಿ ಸಾವಿರಾರು ಯೋಧರನ್ನು ಸೋಲಿಸಿ ಗೆಲುವು ಪಡೆದಿರಬಹುದು. ಆದರೆ ಇದಕ್ಕಿಂತಲೂ ನಿತ್ಯದ ಬದುಕಿನ ಜಂಜಾಟದಲ್ಲಿ ತನ್ನನ್ನು ತಾನು ಗೆಲುವುದು ನಿಜವಾದ ಗೆಲುವು ಎಂದು.

ಬಹಳಷ್ಟು ಮಂದಿ ಬೇರೆಯವರ ವಿರುದ್ಧ ಹೋರಾಡಿ ಗೆದ್ದಿದ್ದರೂ ತಮ್ಮನ್ನು ಗೆಲ್ಲಲಾಗದೆ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಮುಂದಾಗುವುದನ್ನು ನಾವು ಆಗಾಗ್ಗೆ ಕಾಣುತ್ತಿರುತ್ತೇವೆ. ಹಾಗಾಗಿ ಮನುಷ್ಯನ ಬದುಕು ಮೇಲ್ನೋಟಕ್ಕೆ ಏನೂ ಅಲ್ಲ. ಆದರೆ ಇಲ್ಲಿ ಎಲ್ಲವೂ ಇದೆ ಎಂಬುವುದನ್ನು  ಮಾತ್ರ ಯಾರೂ ಮರೆಯಬಾರದು.
ಗೆಲುವುಗಳು ಒಂದು ಹಂತದಲ್ಲಿ ನಮ್ಮದೇ ಆಗಿರಬಹುದು. ಗೆಲುವಿನ ಅಮಲಿನಲ್ಲಿ ಸೋತವರನ್ನು ಅಣಕಿಸುವುದು ಮಾತ್ರ ಮಹಾ ಪಾಪದ ಕೆಲಸ. ಕೆಲವೊಮ್ಮೆ ಗೆದ್ದವನು ಗೆಲುವಿನ ಖುಷಿಯಲ್ಲಿ ಮೈಮರೆತು ತಟಸ್ಥನಾಗಿಬಿಡಬಹುದು. ಆದರೆ ಸೋತವನು ಚಲನಶೀಲನಾಗಿರುತ್ತಾನೆ. ಆತ ಗೆಲುವಿಗಾಗಿ ಶ್ರಮಪಡುತ್ತಿರುತ್ತಾನೆ. ಅವನಲ್ಲಿ ಒಂದೇ ಒಂದು ಗುರಿ ಅದು ಗೆಲುವು. ಆ ಗೆಲುವಿಗಾಗಿ ಅವನು ಅವಿರತ ಶ್ರಮಿಸುತ್ತಿರುತ್ತಾನೆ. ಹಾಗಾಗಿ ಮುಂದೆ ಗೆದ್ದರೂ ಆ ಗೆಲುವನ್ನು ಜತನದಿಂದ ಕಾಯ್ದುಕೊಳ್ಳುತ್ತಾನೆ. ಏಕೆಂದರೆ ಸೋಲು ಅವನಿಗೆ ಗೆಲುವಿನ ಪಾಠ ಕಲಿಸಿರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು