ಮಂಗಳೂರು: ನಗರದ ಪ್ರತಿಷ್ಠಿತ ನರ್ಸಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಯುವಕನೊಬ್ಬ ತಾನು ಪೊಲೀಸ್ ಅಧಿಕಾರಿಯೆಂದು ಬಿಂಬಿಸಿ ವಂಚಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಉರ್ವಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೇರಳ ಮೂಲದ ವಿದ್ಯಾರ್ಥಿ ಬೆನೆಡಿಕ್ಟ್ ಸಾಬು (22) ಎಂಬಾತ ಬಂಧಿತ ವ್ಯಕ್ತಿ. ಆರೋಪಿ ಬಳಿ RAW, ಕೇರಳ ಸ್ಟೇಟ್ ಪೊಲೀಸ್ ಮತ್ತು ಆಗ್ರಿಕಲ್ಟರ್ ಡಿಪಾರ್ಟ್ಮೆಂಟ್ ಹೆಸರಿನ ನಕಲಿ ಐಡಿಗಳನ್ನು ಹೊಂದಿರುವುದು ಪತ್ತೆಯಾಗಿದೆ. ಇದಲ್ಲದೆ, ಪಿಎಸ್ಐ ಸಮವಸ್ತ್ರ ಪೊಲೀಸ್ ಲೋಗೋ, ಮೆಡಲ್, ಬೆಲ್ ಕ್ಯಾಪ್, ಒಂದು ಲ್ಯಾಪ್ಟಾಪ್, ಎರಡು ಮೊಬೈಲ್ ಸೆಟ್ ಗಳನ್ನು ವಶಪಡಿಸಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ಬೆನಡಿಕ್ಸ್ ಸಾಬು ಇಡುಕ್ಕಿ ಜಿಲ್ಲೆಯ ಅಂಬಚ್ಚಾಲ್, ಪಳ್ಳಿವಾಸಿಲ್ ನಿವಾಸಿಯೆಂದು ಪೊಲೀಸರು ಗುರುತಿಸಿದ್ದಾರೆ. ಕಾಲೇಜಿನಲ್ಲಿ ಜಾಗೃತಿ ಕಾರ್ಯಾಗಾರ ನಡೆಸುತ್ತಿದ್ದಾಗ ವಿದ್ಯಾರ್ಥಿಗಳು ನೀಡಿದ್ದ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತನಿಂದ ವಂಚನೆಗೆ ಒಳಗಾದವರಿದ್ದರೆ, ಉರ್ವಾ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸ್ ಕಮಿಷನ ಕುಲದೀಪ್ ಜೈನ್ ಮನವಿ ಮಾಡಿದ್ದಾರೆ.