ಬೆಂಗಳೂರು: ನಿಂತಿದ್ದ ಬಿಎಂಟಿಸಿ ಬಸ್ಗೆ ವೇಗವಾಗಿ ಬಂದ I20 ಕಾರು ಹಿಂಬದಿಯಿಂದ ಡಿಕ್ಕಿಯಾಗಿ ಬೆಂಕಿ ಹತ್ತಿಕೊಂಡು ಕಾರು ಹೊತ್ತಿ ಉರಿದ ಘಟನೆ ನಾಯಂಡಹಳ್ಳಿ ಬಳಿಯ ರಿಂಗ್ ರಸ್ತೆಯಲ್ಲಿ ನಡೆದಿದೆ.
ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸುತ್ತಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ಕಾರು ಸಂಪೂರ್ಣ ಸುಟ್ಟು ಹೋಗಿದ್ದು, ಬಸ್ನ ಹಿಂದಿನ ಭಾಗ ಸ್ವಲ್ಪ ಬೆಂಕಿಗಾಹುತಿಯಾಗಿದೆ. ವೇಗವಾಗಿ ಕಾರ್ ಬಂದು ಡಿಕ್ಕಿ ಹೊಡೆದ ಹಿನ್ನೆಲೆ ಕಾರು ಚಾಲಕನಿಗೆ ಮೂಗಿನ ಬಳಿ ಕೊಂಚ ಗಾಯಗಳಾಗಿವೆ.
ಯಶವಂತಪುರ ಟು ಬನಶಂಕರಿ ಮಾರ್ಗದಲ್ಲಿ ಸಂಚರಿಸುವ ಬನಶಂಕರಿ ಡಿಪೋನ 26ರ ಮಾರ್ಗದ 401NY ಬಸ್ ಸಂಖ್ಯೆ F4968ರ ಬಸ್ ಇದಾಗಿದ್ದು ರಿಂಗ್ ರಸ್ತೆಯಲ್ಲಿ ಘಟನೆ ನಡೆದಿದೆ. ಚಂದ್ರಲೇಔಟ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ಹಾಗೂ ಹತ್ತಿಸಲು ನಿಲ್ಲಿಸಿದ್ದ ವೇಳೆ ಕಾರು ವೇಗವಾಗಿ ಬಂದು ಬಸ್ಗೆ ಗುದ್ದಿದೆ.