ನವದೆಹಲಿ: ಎಳೆಯ ಮಕ್ಕಳ ಮೇಲೆ ಕಾಮುಕರು ಕಣ್ಣು ಹಾಕುವ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿದೆ. ಅದೇ ರೀತಿ 4 ವರ್ಷದ ಬಾಲಕಿಯ ಮೇಲೆ ಶುಕ್ರವಾರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ. ದೌಸಾ ಜಿಲ್ಲೆಯ ಲಾಲ್ಸೋಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭೂಪೇಂದ್ರ ಸಿಂಗ್ ಎಂಬ ಆರೋಪಿ ಸಬ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ಮಧ್ಯಾಹ್ನ 4 ವರ್ಷದ ಬಾಲಕಿಯನ್ನು ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.
ಈ ಬಗ್ಗೆ ಎಎಸ್ಪಿ ರಾಮಚಂದ್ರ ಸಿಂಗ್ ನೆಹ್ರಾ ಮಾಹಿತಿ ನೀಡಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸ್ಥಳೀಯ ನಿವಾಸಿಗಳು ಭಾರೀ ಸಂಖ್ಯೆಯಲ್ಲಿ ರಾಹುವಾಸ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅತ್ಯಾಚಾರ ನಡೆಸಿದ ಸಬ್ ಇನ್ಸ್ಪೆಕ್ಟರ್ ಅವರನ್ನು ಪೊಲೀಸರು ವಶಕ್ಕೆ ಪಡೆಯುವ ಮೊದಲು ಆ ಜನರು ಆರೋಪಿಯನ್ನು ಥಳಿಸಿದ್ದಾರೆ.