ಪತ್ರೊಡೆಯನ್ನು ಸಾಮಾನ್ಯವಾಗಿ ಆಷಾಡ ಮಾಸದಲ್ಲಿ ಜಾಸ್ತಿಯಾಗಿ ತಯಾರಿಸುತ್ತಾರೆ. ಮರದ ಕೆಸು ಅಥವಾ ಹಿತ್ತಲಿನ ತೋಟ ಗದ್ದೆ ಬಯಲಿನಲ್ಲಿ ಬೆಳದ ಸೊಪ್ಪನ್ನು ಕಟಾವು ಮಾಡಿ ತಯಾರಿಸುತ್ತಾರೆ. ನಾವು ಇವತ್ತು ಪತ್ರೊಡೆ ಹೇಗೆ ತಯಾರಿಸೋದು ಎಂದು ತಿಳಿಯೋಣ.
ಬೇಕಾಗುವ ಸಾಮಗ್ರಿ: ಕೆಸುವಿನ ಎಲೆ 5-6 ಅಕ್ಕಿ 2 ಲೋಟ 1 ತೆಂಗಿನಕಾಯಿ ಖಾರದ ಪುಡಿ (ಖಾರಕ್ಕೆ ತಕ್ಕಷ್ಟು) ಕೊತ್ತಂಬರಿ ಪುಡಿ 2 ಚಮಚ ಅರಿಶಿಣ ಪುಡಿ 1/2 ಚಮಚ ಜೀರಿಗೆ 1/4 ಚಮಚ ಹುಣಸೆ ಹಣ್ಣು (1 ನಿಂಬೆ ಹಣ್ಣು ಗಾತ್ರದಷ್ಟು) 2 ಟೊಮೆಟೊ 2 ಈರುಳ್ಳಿ ಹಸಿ ಮೆಣಸಿನಕಾಯಿ 2-3 ರುಚಿಗೆ ತಕ್ಕ ಉಪ್ಪು ಬಾಳೆಲೆ 2-3.
ಮಾಡುವ ವಿಧಾನ: ಕೆಸುವಿನ ಸೊಪ್ಪಿನ ನಾರು ಬಿಡಿಸಿ ಕತ್ತರಿಸಿಕೊಳ್ಳಿ, ಅಕ್ಕಿಯನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ಸ್ವಲ್ಪ ಉಪ್ಪು ಹಾಕಿ ರುಬ್ಬಿಕೊಳ್ಳಬೇಕು. ಈಗ ಕೆಸುವಿನ ಎಲೆ ಜೊತೆ ಮಿಶ್ರ ಮಾಡಿ. ಬಾಳೆಲೆ ಒಲೆ ಬೆಂಕಿಯಲ್ಲಿ ಅಥವಾ ಗ್ಯಾಸ್ನಲ್ಲಿ ಬಾಡಿಸಿ. ಅದಕ್ಕೆ ಅಕ್ಕಿ ಹಿಟ್ಟು ಹಾಕಿ ಮಡಚಿ ಹಬೆಯಲ್ಲಿ ಬೇಯಿಸಿ. ಇದೇ ಸಮಯಕ್ಕೆ ತೆಂಗಿನ ಕಾಯಿ ತುರಿದು ಅದಕ್ಕೆ ಮಸಾಲೆ ಸಾಮಗ್ರಿ ಹಾಗೂ ಹುಣಸೆಹಣ್ಣು ಹಾಕಿ ರುಬ್ಬಿಕೊಳ್ಳಬೇಕು. ಟೊಮೆಟೊ, ಈರುಳ್ಳಿ, ಹಸಿ ಮೆಣಸಿನಕಾಯಿ ಕತ್ತರಿಸಿ ಹಾಕಿ ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಕುದಿಸಿ. ಈಗ ಬೆಂದ ಹಿಟ್ಟನ್ನು ಎಲೆಯಿಂದ ಬಿಡಿಸಿ ಚಿಕ್ಕದಾಗಿ ಕತ್ತರಿಸಿ, ಕುದಿಸಿದ ಮಿಶ್ರಣದಲ್ಲಿ ಹಾಕಿ ಮಿಶ್ರ ಮಾಡಿ 2 ಗಂಟೆ ಇಡಿ. ಹಿಟ್ಟು ಚೆನ್ನಾಗಿ ಮಸಾಲೆ ಹೀರಿಕೊಳ್ಳುತ್ತದೆ. ನಂತರ ಅದನ್ನು ಮತ್ತೊಮ್ಮೆ ಪುಡಿ-ಪುಡಿ ಮಾಡಿ ಮಿಶ್ರ ಮಾಡಿ ರುಚಿಯಾದ ಪತ್ರೊಡೆ ಸವಿಯಿರಿ.