ಉತ್ತರ ಕರ್ನಾಟಕ ಎಂದರೆ ಪಟ್ಟನೆ ನೆನಪಾಗುವುದು ಖಡಕ್ ರೊಟ್ಟಿ, ಎಣ್ಣೆಗಾಯಿ, ಮೊಸರು ಮತ್ತು ಖಾರ. ಅದರೊಟ್ಟಿಗೆ ಜುನಕದ ವಡೆ ಇದ್ದರಂತು ಊಟದ ಸವಿ ಇನ್ನು ಹೆಚ್ಚಾಗುತ್ತದೆ. ಈ ಜುನುಕದ ವಡೆಗೆ ಬೇಕಾಗುವ ಸಾಮಗ್ರಿಗಳು ಈ ಕೆಳಗಿನಂತಿವೆ…
1. ಕಡಲೆ ಹಿಟ್ಟು 1ಕೆಜಿ
2. ಮೆಣಸಿನಕಾಯಿ 4- 5
3. ಸಣ್ಣಗೆ ಹೆಚ್ಚಿದ ಈರುಳ್ಳಿ 2
4. ಎಣ್ಣೆ 1 ಬಟ್ಟಲು
5. ಒಣ ಕೋಬ್ಬರಿ ತುರಿ 2 ಚಮಚ
6. ಎಳ್ಳು 2 ಚಮಚ
7. ಕೊತ್ತಂಬರಿ ಸೊಪ್ಪು 1 ಬಟ್ಟಲು
8. ಬೆಳ್ಳುಳ್ಳಿ 8-10 ಎಸಳು
9.ಶುಂಠಿ 1 ಇಂಚು
10. ಸಾಸಿವೆ 1 ಚಮಚ
11. ಉಪ್ಪು ರುಚಿಗೆ ತಕ್ಕಷ್ಟು
12.ಅರಿಶಿಣ ಪುಡಿ 1/2 ಚಮಚ
ಜುನುಕದ ವಡೆ ಮಾಡುವ ವಿಧಾನ
ಮೊದಲಿಗೆ ಬೆಳ್ಳುಳ್ಳಿ, ಮೆಣಸಿನಕಾಯಿ, ಶುಂಠಿ ಹಾಗೂ ಕೊತ್ತಂಬರಿ ಸೊಪ್ಪನ್ನು ಮಿಕ್ಸಿಗೆ ಹಾಕಿ ತರಿತರಿಯಾಗಿ ಪೇಸ್ಟ್ ಮಾಡಿಕೊಳ್ಳಬೇಕು.
ನಂತರ ಒಂದು ಬಾಣಲೆಗೆ ಒಂದು ಸೌಟು ಎಣ್ಣೆ ಹಾಕಿ ಕಾಯಲು ಇಡಬೇಕು ಎಣ್ಣೆ ಕಾದ ನಂತರ ಅದಿಕ್ಕೆ ಸಾಸಿವೆ ಹಾಕಬೇಕು, ಸಾಸಿವೆ ಸಿಡಿದ ನಂತರ ರುಬ್ಬಿಟ್ಟು ಕೊಂಡ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೂ ಬಾಡಿಸಬೇಕು, ಆಮೇಲೆ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಬೇಕು. ಈರುಳ್ಳಿ ಗೋಲ್ಡನ್ ಬಣ್ಣಕ್ಕೆ ತಿರುಗಿದ ನಂತರ ಅದಿಕ್ಕೆ ಅರ್ಧ ಲೀಟರ್ ನೀರು ಹಾಕಿ ಅದು ಕುದಿಯಲು ಬಿಡಿ.
ನೀರು ಕುದಿ ಬಂದ ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಕಡಲೆಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಹಾಕಿ ಗಂಟು ಆಗದಂತೆ ತಿರುವುತ್ತಿರಬೇಕು. ಹಿಟ್ಟು ಗಟ್ಟಿ ಯಾಗಿ ಬೆಂದ ಮೇಲೆ ಎಣ್ಣೆ ಸವರಿದ ತಟ್ಟೆಗೆ ಹಾಕಿ, ಬರ್ಫಿ ಆಕಾರಕ್ಕೆ ಕೊರೆದು ಅದರ ಮೇಲೆ ಸ್ವಲ್ಪ ಒಣ ಕೊಬ್ಬರಿ ತುರಿ, ಎಳ್ಳು ಹಾಗೂ ಕೊತ್ತಂಬರಿ ಸೊಪ್ಪಿನ್ನು ಉದುರಿಸಿದರೆ ರುಚಿಕರವಾದ ಜುನಕದ ಒಡೆ ರೊಟ್ಟಿಯೊಂದಿಗೆ ಸವಿಯಲು ಸಿದ್ದ.