ಬಾಲಿವುಡ್‌ನ ಹಿರಿಯ ನಟಿ ಹಾಗೂ ಮಿಮಿಕ್ರಿ ಕಲಾವಿದೆ ಆಶಾ ಸಿಂಗ್ ಜೈಸ್ವಾಲ್ (84) ಅವರು ನಿನ್ನೆ (ಆ.23) ರಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಈ ವಿಚಾರವನ್ನು ಅವರ ಪುತ್ರ ಅಕಾಶ್ ಭಾರದ್ವಾಜ್ ಅವರು ದೃಢಪಡಿಸಿದ್ದಾರೆ.
ಆಶಾ ಸಿಂಗ್ ಅವರ ಅಂತ್ಯಕ್ರಿಯೆಯು ಆಗಸ್ಟ್ 23ರಂದು ಮುಂಬೈನ ವಿಲೇ ಪಾರ್ಲೆ ವೆಸ್ಟ್‌ನಲ್ಲಿರುವ ಪವನ್ ಹ್ಯಾನ್ಸ್ ಸ್ಮಶಾನದಲ್ಲಿ ನೆರವೇರಿದೆ. ಆದರೆ, ನಟಿಯ ಸಾವಿಗೆ ನಿಖರವಾದ ಕಾರಣವೇನು ಎಂಬುದು ಈವರೆಗೆ ತಿಳಿದುಬಂದಿಲ್ಲ.
ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ತಾಯಿಯ ಫೋಟೊವನ್ನು ಹಂಚಿಕೊಂಡಿರುವ ಅಕಾಶ್ ಭಾರದ್ವಾಜ್ ಅವರು, ತಮ್ಮ ತಾಯಿಯನ್ನು ಐರನ್ ಲೇಡಿ ಎಂದು ಕರೆದಿರುವ ಅವರು ತಾಯಿಯ ಕೊಡುಗೆಯನ್ನು ಎಲ್ಲರೂ ಪರಿಗಣಿಸಬೇಕು ಎಂದು ಬರೆದುಕೊಂಡಿದ್ದಾರೆ.
‘ನನ್ನ ತಾಯಿ ಐರನ್ ಲೇಡಿ. (ಉಕ್ಕಿನ ಮಹಿಳೆ) ಅವಳು ಇಹಲೋಕ ತ್ಯಜಿಸಿದ್ದಾಳೆ. ಅವಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ. ಅವರ ಕೆಲಸವನ್ನು ಎಲ್ಲರೂ ನೆನಪಿಡಿ. ಇದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಅವರು ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ನೀವು ಇಂದಿಗೂ ನೋಡಬಹುದು. ನನ್ನ ಅಮ್ಮನ ಒಳ್ಳೆಯ ಕಾರ್ಯಗಳಿಂದಾಗಿ ಮೋಕ್ಷ ದೊರೆಯುತ್ತದೆ. ಈ ಮೂಲಕ ಅವರ ಸಾವಿನ ಸುದ್ದಿಯನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿರುವೆ’ ಎಂದು ಬರೆದುಕೊಂಡಿದ್ದಾರೆ.
ಆಶಾ ಸಿಂಗ್ ಅವರು ಮಹಾಭಾರತ ಧಾರಾವಾಹಿಯ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಬಿ.ಆರ್. ಚೋಪ್ರಾ ಅವರು ನಿರ್ದೇಶಿಸಿದ್ದ ಈ ಧಾರಾವಾಹಿಯಲ್ಲಿ ಆಶಾ ಸಿಂಗ್ ಅವರು ಕೃಪಿ ಪಾತ್ರವನ್ನು ನಿರ್ವಹಿಸಿದ್ದರು. ಕೃಪಿ, ಕೃಪಾಚಾರ್ಯರ ಸಹೋದರಿ, ದ್ರೋಣಾಚಾರ್ಯರ ಪತ್ನಿ ಹಾಗೂ ಅಶ್ವತ್ಥಾಮನ ತಾಯಿ. ‘ಬಾಜಿಗರ್’, ‘ಬಾಬಿ ಜಾಸೂಸ್’, ‘ದೀವಾಂಗಿ’, ‘ಆಗ್’, ‘ಕಾಯ್ದಾ ಕಾನೂನ್’, ‘ಅನ್ಸು ಬಾನೆ ಅಂಗಾರೆ’ ಮತ್ತು ’ಘರ್ ಬಜಾರ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

