ಬೆಂಗಳೂರು : ಹಿರಿಯ ನಟಿ ಬಿ. ಸರೋಜಾ ದೇವಿ (87) ನಿಧನರಾಗಿದ್ದಾರೆ. ತಮಿಳು ಕನ್ನಡ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಲವು ದಶಕಗಳಿಂದ 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದರು.
ಹಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಸೋಮವಾರ ತಮ್ಮ ಮಲ್ಲೇಶ್ವರದ ನಿವಾಸದಲ್ಲಿ ಕೊನೆಯುಸಿರು ಎಳೆದಿದ್ದಾರೆ. ಕನ್ನಡದಲ್ಲಿ ಕಿತ್ತೂರು ಚೆನ್ನಮ್ಮ, ಬಬ್ರುವಾಹನ ಸೇರಿದಂತೆ ಹಲವು ಐತಿಹಾಸಿಕ, ಪೌರಾಣಿಕ ಸಿನಿಮಾಗಳಲ್ಲಿ ಡಾ. ರಾಜ್ ಕುಮಾರ್ ಅವರೊಂದಿಗೆ ನಟಿಸಿದ್ದ ಅವರು ಕರ್ನಾಟಕದಲ್ಲಿ ಮನೆಮಾತಾಗಿದ್ದರು.
ತಮಿಳು ಸಿನಿಮಾ ರಂಗದಲ್ಲಿ ಭಾರೀ ಪ್ರಸಿದ್ದಿ ಗಳಿಸಿದ್ದ ಅವರು ಕನ್ನಡತು ಪೈಂಗುಳಿ (ಕನ್ನಡದ ಗಿಳಿ) ಎಂದು ಹೆಸರುವಾಸಿಯಾಗಿದ್ದರು. 17 ನೇ ವಯಸಿನಲ್ಲಿಯೇ ಚಿತ್ರರಂಗ ಪ್ರವೇಶಿಸಿದ ಅವರು ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂದೂ ಸಹ ಹೆಸರು ಗಳಿಸಿದ್ದರು.
ಭಾರತ ಸರ್ಕಾರದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಅವರಿಗೆ ಕರ್ನಾಟಕದ ಬೆಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಹಾಗೂ ತಮಿಳು ನಾಡು ಕಲೈಮಾಮಣಿ ಪ್ರಶಸ್ತಿ ನೀಡಿ ಗೌರವಿಸಿತ್ತು.

