ಬೆಂಗಳೂರು: ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಜನಪ್ರಿಯರಾಗಿರುವ ಅನಿರುದ್ಧ್ ಜತ್ಕರ್ ನಾಯಕನಾಗಿ ನಟಿಸಿರುವ, ರೂಪ ಡಿ.ಎನ್ ನಿರ್ಮಾಣದ ಹಾಗೂ ಆನಂದರಾಜ್ ಎಂ ನಿರ್ದೇಶಿಸಿರುವ “Chef ಚಿದಂಬರ” ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ನಟ ರಮೇಶ್ ಅರವಿಂದ್ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
ಅಲ್ಲದೇ ಅವರು ಟ್ರೇಲರ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಜೂನ್ 14ಕ್ಕೆ ‘ಶೆಫ್ ಚಿರಂಬರ’ ಸಿನಿಮಾ ಬಿಡುಗಡೆ ಆಗಲಿದೆ. 5 ವರ್ಷಗಳ ಬಳಿಕ ಅನಿರುದ್ದ್ ಅವರು ನಟಿಸಿರುವ ಸಿನಿಮಾ ಎಂಬ ಕಾರಣಕ್ಕೆ ಅವರ ಅಭಿಮಾನಿಗಳಿಗೆ ಈ ಸಿನಿಮಾ ವಿಶೇಷವಾಗಿದೆ.
ಟ್ರೇಲರ್ ಬಿಡುಗಡೆ ವೇಳೆ ರಮೇಶ್ ಅರವಿಂದ್ ಅವರು ವಿಷ್ಣುವರ್ಧನ್ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. ಬಳಿಕ ಅನಿರುದ್ಧ್ ಬಗ್ಗೆ ಮಾತನಾಡಿದರು. ‘ನನ್ನ ನಿರ್ದೇಶನದ ‘ರಾಮ ಶ್ಯಾಮ ಭಾಮ’ ಸೇರಿದಂತೆ 2 ಸಿನಿಮಾಗಳಲ್ಲಿ ಅನಿರುದ್ಧ್ ಅಭಿನಯಿಸಿದ್ದಾರೆ. ಅವರು ಪ್ರತಿಭಾವಂತ ಕಲಾವಿದ. ಈ ಸಿನಿಮಾ ಟ್ರೇಲರ್ ಕೂಡ ಚೆನ್ನಾಗಿದೆ. ಡಾರ್ಕ್ ಕಾಮಿಡಿ ಶೈಲಿಯ ಈ ಸಿನಿಮಾದ ಟ್ರೇಲರ್ ಕುತೂಹಲ ಮೂಡಿಸಿದೆ. ಸಿನಿಮಾ ನೋಡುವ ಕಾತುರವನ್ನು ಹೆಚ್ಚು ಮಾಡಿದೆ. ಚಿತ್ರತಂಡದವರ ಶ್ರಮ ಕಾಣುತ್ತಿದೆ. ಸಿನಿಮಾ ಯಶಸ್ವಿಯಾಗಲಿ’ ಎಂದು ರಮೇಶ್ ಅರವಿಂದ್ ಹಾರೈಸಿದರು.

