ಬಾಲಿವುಡ್‌ ನಟಿ ಆಲಿಯಾ ಭಟ್ ಹಾಗೂ ಶಾರ್ವರಿ ನಟನೆಯ ಬಹುನಿರೀಕ್ಷಿತ ಆಕ್ಷನ್ ಸಿನಿಮಾ ‘ಆಲ್ಫಾ’ ದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಮಹಿಳಾ ಪಾತ್ರವನ್ನು ಪ್ರಧಾನವಾಗಿಟ್ಟುಕೊಂಡು ನಿರ್ಮಾಣವಾಗಿರುವ ‘ಆಲ್ಫಾ’ ಭಾರಿ ಕುತೂಹಲ ಮೂಡಿಸಿದೆ.

ಶಿವ್ ರವೈಲ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಆಲ್ಫಾ ಸಿನಿಮಾವನ್ನು ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಜೂನ್ 10ಕ್ಕೆ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಒಂದು ವಾರದ ಬಳಿಕ ಸಿನಿಮಾದ ಟ್ರೇಲರ್ ಬಿಡುಗಡೆಗೊಂಡಿದೆ. ಸಿನಿಮಾದ ಟ್ರೇಲರ್ ಆಕ್ಷನ್ ದೃಶ್ಯಗಳಿಂದ ಕೂಡಿದ್ದು, ಚಿತ್ರ ಕಥೆಯಲ್ಲಿ ರೋಮಾಂಚಕ ತಿರುವುಗಳನ್ನು ಹೊಂದಿದ್ದು ಕುತೂಹಲ ಮೂಡಿಸಿದೆ.

ಟ್ರೇಲರ್‌ನಲ್ಲಿ ಆಲಿಯಾ ಭಟ್ ರಗಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಾಜಿನ ಗುರಾಣಿಯಲ್ಲಿರುವ ಇರುವ ಮಗುವನ್ನು ಸೀತಾ ಎಂದು ನಾಮಕರಣ ಮಾಡುವ ಮೂಲಕ ಟ್ರೇಲರ್‌ ಪ್ರಾರಂಭವಾಗುತ್ತದೆ. ನಂತರ ಅವಳು ಬೆಳೆದು ದೊಡ್ಡವಳಾದ ಮೇಲೆ ವಿರೋಧಿಗಳ‌ನ್ನು ಹೇಗೆ ಸಂಹಾರ ಮಾಡುತ್ತಾಳೆ ಎಂಬುದನ್ನು ತೋರಿಸಲಾಗಿದೆ.

ಕಳೆದ ವರ್ಷ 2025ರ ಡಿಸೆಂಬರ್ 25 ರಂದು ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಬಿಡುಗಡೆಯು ಏಪ್ರಿಲ್‌ಗೆ ಮುಂದೂಡಲಾಗಿತ್ತು. ಇದೀಗ ಅಂತಿಮವಾಗಿ ಜುಲೈ 3 ರಂದು ಸಿನಿಮಾ ಬಿಡುಗಡೆಯಾಗಲಿದೆ. ಪ್ರಮುಖ ಪಾತ್ರದಲ್ಲಿ ಆಲಿಯಾ ಭಟ್, ಶರ್ವರಿ, ಬಾಬಿ ಡಿಯೋಲ್, ಹೃತಿಕ್ ರೋಷನ್ ಮತ್ತು ಅನಿಲ್ ಕಪೂರ್ ಕಾಣಿಸಿಕೊಂಡಿದ್ದಾರೆ.