ಹೊಸಪೇಟೆ: ಬಳ್ಳಾರಿ ಭಾಗದ ಕನ್ನಡ ಭಾಷೆಯ ಸೊಗಡು ಹೊಂದಿರುವ ಕನ್ನಡದ  ’ಕುಬುಸʼ  ಸಿನಿಮಾ  ಜು.26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಚಿತ್ರ ನಿರ್ದೇಶಕ ರಘುರಾಮ ಚರಣ, ‘ಸಾಹಿತಿ ಕುಂ. ವೀರಭದ್ರಪ್ಪ ಕಾದಂಬರಿ ಆಧರಿತ ಈ ಸಿನಿಮಾವನ್ನು ಕುಟುಂಬದವರೆಲ್ಲರೂ ನೋಡಬಹುದು, ಸಮಾಜಕ್ಕೆ ಉತ್ತಮ ಸಂದೇಶ ಸಹ ಚಿತ್ರದಲ್ಲಿದೆ, ಇದು ನನ್ನ ನಿರ್ದೇಶನದ ಮೊದಲ ಸಿನಿಮಾʼ ಎಂದು ತಿಳಿಸಿದರು.

ಜು.22ರಂದು ಬೆಂಗಳೂರಿನಲ್ಲಿ ಚಿತ್ರದ ಟ್ರೇಲರ್‌ಅನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡುವರು. ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆ. ನಟರಾಜ್‌ ಎಸ್. ಭಟ್‌ ನಾಯಕ ನಟನಾಗಿ ಹಾಗೂ ರಂಗಭೂಮಿ ಕಲಾವಿದ ದುರ್ಗಾದಾಸ್ ಅವರ ಪುತ್ರಿ ಹನುಮಕ್ಕ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯರಾದ ರಮ್ಯಾ, ಜಯಲಕ್ಷ್ಮಿ ಸಹ ಪ್ರಮುಖ ಪಾತ್ರದಲ್ಲಿದ್ದಾರೆ ಎಂದರು.

ಚಿತ್ರದಲ್ಲಿ ನಾಯಕಿಯ ಗೆಳತಿಯ ಪಾತ್ರದಲ್ಲಿ ನಟಿಸಿರುವ ರಂಗಭೂಮಿ ಕಲಾವಿದರಾದ ಮಂಜಮ್ಮ ಜೋಗತಿ ಮಾತನಾಡಿ, ‘ಇದೊಂದು ಬಹಳ ನಿರೀಕ್ಷೆಯ ಚಿತ್ರ, ಕುಂ.ವೀರಭದ್ರಪ್ಪ ಅವರ ಗಟ್ಟಿನೆಲೆಯ ಕಾದಂಬರಿ ಚಿತ್ರಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟಿದೆ. ಜನರಿಗೆ ಇಷ್ಟವಾಗುವ ನಿರೀಕ್ಷೆಯಲ್ಲಿದ್ದೇವೆ’ ಎಂದರು.