ಕೋಮಲ್‌ ನಾಯಕರಾಗಿ ನಟಿಸಿರುವ ಕೋಣ ಚಿತ್ರ ಇಂದು ತೆರೆಕಾಣುತ್ತಿದೆ. ಈಗಾಗಲೇ ಪ್ರೀಮಿಯರ್‌ ಶೋನಲ್ಲಿ ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುವ ಮೂಲಕ ತಂಡ ಖುಷಿಯಾಗಿದೆ.

ನಾನು ಸಿನಿಮಾದಿಂದ ಸಿನಿಮಾಕ್ಕೆ ಹೊಸ ಕಥೆಯನ್ನು ಪ್ರಯತ್ನಿಸುತ್ತೇನೆ. ಕೋಣ ಸಿನಿಮಾದ ಕಥೆಯೂ ಹೊಸದಾಗಿದೆ. ಕೋಣ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರ. ಇಡೀ ಸಿನಿಮಾ ಹಳ್ಳಿಯೊಂದರಲ್ಲಿ ನಡೆಯುತ್ತದೆ.

ಮೂಢನಂಬಿಕೆ, ಊರ ಜನರ ಭಯ ಸೇರಿದಂತೆ ಹಲವು ಅಂಶಗಳು ಚಿತ್ರದಲ್ಲಿವೆ. ಮುಖ್ಯವಾಗಿ ಚಿತ್ರದಲ್ಲಿ ಒಂದಷ್ಟು ಟ್ವಿಸ್ಟ್‌ ಇದೆ. ಚಿತ್ರದಲ್ಲಿ ಕಾಮಿಡಿ ಜೊತೆಗೆ ಒಂದು ಗಟ್ಟಿ ಕಥೆ ಇದೆ ಎಂದು ಕೋಮಲ್‌ ಹೇಳಿದರು.

ಕುಪ್ಪಂಡಾಸ್‌ ಪ್ರೊಡಕ್ಷನ್‌ ಬ್ಯಾನರ್‌ಅಡಿಯಲ್ಲಿ ತನಿಶಾ ಕುಪ್ಪಂಡ, ಕಾರ್ತಿಕ್‌ ಕಿರಣ್‌ ಸಂಕಪಾಲ್‌, ರವಿಕಿರಣ್‌ .ಎನ್‌ ನಿರ್ಮಾಣಮಾಡಿರುವ ಕೋಣ ಸಿನಿಮಾ ನಿರ್ಮಾಣ ಆಗಿದೆ. ಹರಿಕೃಷ್ಣ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಕೀರ್ತಿರಾಜ್‌, ರಿತ್ವಿ ಜಗದೀಶ್‌, ರಾಘು ರಾಮನಕೊಪ್ಪ, ವಿಜಯ್‌ ಚೆಂಡೂರ್‌, ಎಂ.ಕೆ. ಮಠ, ರಂಜಿತ್‌ ಗೌಡ, ತುಕಾಲಿ ಸಂತೋಷ್‌, ಹುಲಿ ಕಾರ್ತಿಕ್‌, ನಿರಂಜನ್‌, ಅನಂತ್‌, ಶಿಶಿರ್‌ ಶಾಸ್ತ್ರಿ, ಗೋಲ್ಡ್ ಸುರೇಶ್‌, ಸುಷ್ಮಿತ, ಜಗಪ್ಪ, ಮಂಜು ಪಾವಗಡ, ಕುರಿ ಸುನಿಲ್‌, ನಮ್ರತಾ ಗೌಡ, ವಿನಯ್‌ ಗೌಡ, ಮೋಹನ್‌ ಕೃಷ್ಣರಾಜ್‌ ಹೀಗೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಹರಿಕೃಷ್ಣ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ನೈಜ ಘಟನೆಯನ್ನು ಆಧರಿಸಿ ಈ ಚಿತ್ರ ತಯಾರಾಗಿದೆ.

ಶಶಾಂಕ್‌ ಶೇಷಗಿರಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವೀನಸ್‌ ನಾಗರಾಜ ಮೂರ್ತಿ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದು, ಉಮೇಶ್‌ ಆರ್ಬಿ ಅವರ ಸಂಕಲನ ಚಿತ್ರಕ್ಕಿದೆ, ಸಾಹಸ ನಿರ್ದೇಶಕರಾಗಿ ವಿನೋದ್‌ ಕುಮಾರ್‌, ಮುರುಗ ಮಾಸ್ಟರ್‌ ಅವರ ನೃತ್ಯ ನಿರ್ದೇಶನ ಹಾಗೂ ಶಶಿಕುಮಾರ್‌ ಅವರ ಸಂಭಾಷಣೆ ಕೋಣ ಚಿತ್ರಕ್ಕಿದೆ.