ನಂಜನಗೂಡು: ಕನ್ನಡ ಚಲನಚಿತ್ರದ ಹಾಸ್ಯ ನಟ ಚಿಕ್ಕಣ್ಣ ಮತ್ತು ತೆಲುಗು ನಟ ಸುನಿಲ್ ನಾಯಕ ನಟರಾಗಿ ನಟಿಸುತ್ತಿರುವ ಜೋಡೆತ್ತು ಸಿನಿಮಾ ಕ್ಲೈಮಾಕ್ಸ್ ಹಂತಕ್ಕೆ ತಲುಪಿ ಚಿತ್ರೀಕರಣ ಇಂದು ಮುಕ್ತಾಯವಾದ ಹಿನ್ನೆಲೆ, ಚಿತ್ರದ ಯಶಸ್ಸಿಗೆ ತೆಲುಗು ನಟ ಸುನೀಲ್ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಶ್ರೀ ನಂಜುಂಡೇಶ್ವರ, ಪಾರ್ವತಮ್ಮ, ಚಂಡಿಕೇಶ್ವರ, ಗಣಪತಿ, ನಾರಾಯಣಸ್ವಾಮಿ ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂಜುಂಡೇಶ್ವರನಿಗೆ ಮಲಗಿ ನಮಸ್ಕರಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ತೆಲುಗು ನಟ ಸುನೀಲ್ ಅವರು, ಈಗಾಗಲೇ ಮೈಸೂರು, ಮಂಡ್ಯ, ಕೊಡಗು ಬಾಗದ ಸುತ್ತಮುತ್ತ ಜೋಡೆತ್ತು ಕನ್ನಡ ಸಿನಿಮಾ ಯಶಸ್ವಿಯಾಗಿ ಚಿತ್ರೀಕರಣ ನಡೆದು ಮುಕ್ತಾಯವಾಗಿದೆ.
ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಉತ್ತಮವಾಗಿ ಮೂಡಿಬಂದಿದೆ ಪ್ರತಿಯೊಬ್ಬ ನಾಗರೀಕರು ಸಿನಿಮಾ ಥಿಯೇಟರ್ ನಲ್ಲಿ ಕುಳಿತು ನೋಡುವ ಅದ್ಭುತ ಕಥೆಯಿದೆ. ಈ ಸಿನಿಮಾದ ಯಶಸ್ವಿಗೆ ದೇವರ ದರ್ಶನ ಮಾಡಿದ್ದೇನೆ. ಇದೇ ಮೊದಲ ಬಾರಿಗೆ ನಂಜನಗೂಡು ನಂಜುಂಡೇಶ್ವರನ ದರ್ಶನ ಪಡೆದು ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ದೇವಾಲಯಕ್ಕೆ ಆಗಮಿಸುತ್ತಿದ್ದ ವೇಳೆ ಭಕ್ತರು ನಟ ಸುನಿಲ್ ಅವರಿಗೆ ವಿಶ್ ಮಾಡಿದರು. ತೆಲುಗು ನಟ ಸುನಿಲ್ ಅವರನ್ನು ನೋಡಿದ ಜನರು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಸಂದರ್ಭದಲ್ಲಿ ಜೋಡೆತ್ತು ಕನ್ನಡ ಸಿನಿಮಾದ ನಿರ್ಮಾಪಕ ಸೋಮಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಹಾಡ್ಯ ಶಂಕರ್ ಸೇರಿದಂತೆ ಇನ್ನು ಅನೇಕರು ಹಾಜರಿದ್ದರು.

