ಬೆಂಗಳೂರು: ಕನ್ನಡ ಕಿರುತೆರೆ ಹಾಗೂ ರಂಗಭೂಮಿಯ ಹಿರಿಯ ನಟ, ಗಾಯಕ ವಿಜಯಕುಮಾರ್ ಜಿತೂರಿ ಅವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಹುಟ್ಟೂರಾದ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಜಯಕುಮಾರ್ ಅವರು ಪ್ರಸಿದ್ಧ ‘ಮಂಗಳಗೌರಿ ಮದುವೆ’ ಧಾರಾವಾಹಿಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ತಮ್ಮ ಸಹಜ ಅಭಿನಯ ಹಾಗೂ ವಿಶಿಷ್ಟ ಹಾಸ್ಯ ಶೈಲಿಯಿಂದ ಕನ್ನಡಿಗರ ನೆಚ್ಚಿನ ನಟರಾಗಿ ಗುರುತಿಸಿಕೊಂಡಿದ್ದರು.
ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆಯಲ್ಲಿ ತೊಡಗಿದ್ದ ಇವರು, ದಿವಂಗತ ಶಂಕರ್ ನಾಗ್ ಅವರ ‘ನಾಗಮಂಡಲ’ ನಾಟಕದಲ್ಲೂ ಅಭಿನಯಿಸಿದ್ದರು. ‘ಮಂಟೆಸ್ವಾಮಿ ಕಥಾ ಪ್ರಸಂಗ’ ನಾಟಕದಲ್ಲಿ ಇವರ ಜಾನಪದ ಗಾಯನ ಶೈಲಿಗೆ ಮನಸೊತಿದ್ದ ಶಂಕರ್ ನಾಗ್ ಅವರು, ಸ್ವತಃ ಇವರನ್ನು ತಮ್ಮ ರಂಗತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದರು.
ಇತ್ತೀಚಿನ ವರ್ಷಗಳಲ್ಲಿ ನಟನೆಯ ಅವಕಾಶಗಳು ಕಡಿಮೆಯಾದ ಕಾರಣ ಅವರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ಕಷ್ಟವಾಗಿ ಕೊನೆಗೆ ತಮ್ಮ ಸ್ವಂತ ಊರಾದ ಗದಗಕ್ಕೆ ಮರಳಿದ್ದರು. ಇವರ ಅಗಲಿಕೆಗೆ ಕನ್ನಡ ಕಿರುತೆರೆ ಹಾಗೂ ರಂಗಭೂಮಿಯ ಪ್ರಮುಖ ಕಲಾವಿದರು ತೀವ್ರ ಕಂಬನಿ ಮಿಡಿದಿದ್ದಾರೆ.

