ಆಂಧ್ರ ಪ್ರದೇಶ: ತೆಲಂಗಾಣ ರಾಜ್ಯದ ಸಿಎಂ ಇದೀಗ ಟಾಲಿವುಡ್​ಗೆ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು ಸಿಎಂ ರೇವಂತ್ ರೆಡ್ಡಿ ಸಹ ಚಿತ್ರರಂಗಕ್ಕೆ ಬೆಂಬಲ ನೀಡುವ ವ್ಯಕ್ತಿ ಎನ್ನಲಾಗಿತ್ತು. ಆದರೆ ಇದೀಗ ರೇವಂತ್ ರೆಡ್ಡಿಯವರು, ಚಿತ್ರರಂಗದವರಿಗೆ ಸರ್ಕಾರದಿಂದ ಸಹಾಯವಾಗಬೇಕೆಂದರೆ ಅವರು ಕೆಲವು ಷರತ್ತುಗಳನ್ನು ಪಾಲಿಸಬೇಕು ಎಂದಿದ್ದಾರೆ.

ದೊಡ್ಡ ಬಜೆಟ್ ಸಿನಿಮಾಗಳ ಟಿಕೆಟ್ ದರ ಹೆಚ್ಚಿಸುವಂತೆ ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಸರ್ಕಾರಕ್ಕೆ ಚಿತ್ರರಂಗದವರು ಮನವಿಗಳನ್ನು ಮಾಡುತ್ತಲೇ ಬಂದಿದ್ದಾರೆ. ಸಿನಿಮಾದ ಬಜೆಟ್ ಆಧರಿಸಿ ಸರ್ಕಾರಗಳು ಸಹ ಅನುಮತಿಗಳನ್ನು ನೀಡುತ್ತಾ ಬಂದಿದೆ. ಇದೀಗ ‘ಕಲ್ಕಿ 2898 ಎಡಿ’ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಎರಡೂ ರಾಜ್ಯಗಳಲ್ಲಿಯೂ ಅನುಮತಿ ದೊರೆತಿತ್ತು. ಆದರೆ ಇದೀಗ ಸಿಎಂ ರೇವಂತ್ ರೆಡ್ಡಿ, ಟಾಲಿವುಡ್​ನವರು ಟಿಕೆಟ್ ದರ ಹೆಚ್ಚಳ ಮನವಿ ಬಗ್ಗೆ ಮಾತನಾಡಿದ್ದಾರೆ.

ನಿಮ್ಮ ವ್ಯವಹಾರ ಹೆಚ್ಚಿಸಿಕೊಳ್ಳಲು ಟಿಕೆಟ್ ದರ ಹೆಚ್ಚಳಕ್ಕೆ ಮನವಿ ಮಾಡುವುದು ಸರಿಯೇ ಒಪ್ಪೋಣ ಆದರೆ ನಿಮಗೆ ಸಾಮಾಜಿಕ ಕಳಕಳಿಯೂ ಸಹ ಇರಬೇಕಾಗುತ್ತದೆ. ಸಿನಿಮಾ ನಟ-ನಟಿಯರು ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಮಾದಕ ವಸ್ತು ಬಳಕೆ ವಿರುದ್ಧ, ಸೈಬರ್ ಕ್ರೈಂ ವಿರುದ್ಧ ಇನ್ನಿತರೆ ಸಾಮಾಜಿಕ ಪಿಡುಗುಗಳ ವಿರುದ್ಧ ವಿಡಿಯೋಗಳನ್ನು ಮಾಡಿ ಹಂಚಿಕೊಳ್ಳಬೇಕಾಗುತ್ತದೆ. ಅಲ್ಲದೆ ಸಿನಿಮಾ ಪ್ರಸಾರಕ್ಕೂ ಮುನ್ನ ಇದನ್ನು ತೋರಿಸಬೇಕಾಗುತ್ತದೆ. ಆಗಷ್ಟೆ ಸರ್ಕಾರವು ಚಿತ್ರರಂಗಕ್ಕೆ ಅಗತ್ಯವಾದ ನೆರವು ನೀಡಲಿದೆ ಎಂದು ರೇವಂತ್ ರೆಡ್ಡಿ ಹೇಳಿದರು.