ತೆಲುಗಿನ ನಟ ಸಂದೀಪ್ ಕಿಶನ್ ಅವರು ‘ವಿವಾಹ ಭೋಜನಂಬು’ ಹೆಸರಿನ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿದ್ದಾರೆ. ಸಿಕಂದರಾಬಾದ್​ನಲ್ಲಿ ಈ ರೆಸ್ಟೋರೆಂಟ್ ಇದೆ. ಇತ್ತೀಚೆಗೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಈ ರೆಸ್ಟೋರೆಂಟ್​ ಮೇಲೆ ದಾಳಿ ನಡೆಸಿದ್ದರು.

ದಾಳಿ ನಡೆದ ಸಂದರ್ಭದಲ್ಲಿ ಡೇಟ್ ಬಾರ್​ ಆದ ಅಕ್ಕಿ ಬ್ಯಾಗ್ ಈ ರೆಸ್ಟೋರೆಂಟ್​ನಲ್ಲಿ ಸಿಕ್ಕಿತ್ತು ಎನ್ನಲಾಗಿದೆ. ಇನ್ನು, 500 ಗ್ರಾಮ್ ತೆಂಗಿನ ತುರಿಗೆ ಬಣ್ಣ ಹಾಕಲಾಗಿತ್ತು. ಈ ವಿಚಾರವನ್ನು ಅಧಿಕಾರಿಗಳು ಓಪನ್ ಆಗಿಯೇ ಹೇಳಿಕೊಂಡಿದ್ದರು.

ಸಂದೀಪ್ ನಡೆಸುತ್ತಿರುವ ರೆಸ್ಟೋರೆಂಟ್​ ಏಳು ಔಟ್​ಲೆಟ್​ಗಳನ್ನು ಹೊಂದಿದೆ. ತಮಗೆ ಮೋಸ ಮಾಡೋ ಅಗತ್ಯವಿಲ್ಲ ಎಂದಿದ್ದಾರೆ ಅವರು. ‘ವಿವಾಹ ಭೋಜನಂಬು ರೆಸ್ಟೋರೆಂಟ್​​ನ ಏಳೂ ಶಾಖೆ​ಗಳಿಂದ ನಾವು ನಿತ್ಯ 50 ಫುಡ್ ಪ್ಯಾಕೆಟ್​ಗಳನ್ನು ದಾನ ಮಾಡುತ್ತೇವೆ. ಅಂದರೆ ದಿನಕ್ಕೆ 350 ಫುಡ್ ಪ್ಯಾಕೆಟ್​ಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಒಂದು ಪ್ಯಾಕೆಟ್​ನ ಬೆಲೆ 50 ರೂಪಾಯಿ. ಅಂದರೆ ಪ್ರತಿ ತಿಂಗಳು ನಾಲ್ಕು ಲಕ್ಷ ರೂಪಾಯಿಗೂ ಹೆಚ್ಚು ಆಹಾರವನ್ನು ಉಚಿತವಾಗಿ ನೀಡುತ್ತಿದ್ದೇವೆ. ಹೀಗಿರುವಾಗ ಕೆಲವೇ ಸಾವಿರ ರೂಪಾಯಿ ಬೆಲೆ ಬಾಳುವ ಅಕ್ಕಿಯನ್ನು ಶೇಖರಿಸಿಟ್ಟು ನಮಗೆ ಆಗೋದು ಏನಿದೆ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಈ ದಾಳಿ ನಡೆದ ಬಳಿಕ ಸಾಮಾನ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಬಿಲ್ಲಿಂಗ್ ಬಂದಿದೆ. ನಾವು ನೀಡುವ ಗುಣಮಟ್ಟದ ಆಹಾರದ ಮೇಲೆ ಜನರಿಗೆ ನಂಬಿಕೆ ಇದೆ’ ಎಂದಿದ್ದಾರೆ ಸಂದೀಪ್.