ಮುಂಬೈ: ಮೆಟ್ರೋ ರೈಲಿನಲ್ಲಿ ಬಾಲಿವುಡ್ ನಟ ವರುಣ್‌ ಧವನ್‌ ಕೋಚ್‌ನೊಳಗೆ ಇರುವ ಹ್ಯಾಂಡಲ್‌ಗಳಿಂದ ಸ್ಟಂಟ್‌ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಬೆನ್ನಲ್ಲೇ ಮುಂಬೈ ಮೆಟ್ರೋ ರೈಲಿನಲ್ಲಿ ಸಾರ್ವಜನಿಕ ಅಶಾಂತಿ ಉಂಟು ಮಾಡಿದ ಆರೋಪದಡಿ ನಟ ವರುಣ್ ಧವನ್‌ಗೆ 500 ರೂ. ದಂಡ ವಿಧಿಸಲಾಗಿದೆ.

ಶನಿವಾರದಂದು ಮುಂಬೈ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವರುಣ್ ಧವನ್, ಪ್ರಯಾಣಿಕರ ಸುರಕ್ಷತೆಗಾಗಿ ಇರುವ ಹ್ಯಾಂಡಲ್‌ಗಳನ್ನು ಹಿಡಿದು ಪುಲ್-ಅಪ್ಸ್ ಮಾಡಲು ಯತ್ನಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿತ್ತು. ಅಭಿಮಾನಿಗಳನ್ನು ಮೆಚ್ಚಿಸಲು ಹೋದ ನಟ, ಮೆಟ್ರೋ ನಿಯಮಗಳನ್ನು ಗಾಳಿಗೆ ತೂರಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

https://twitter.com/BURN4DESIRE1/status/2015824636978803150?

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಾ ಮುಂಬೈ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ ಸ್ಪಷ್ಟನೆ ನೀಡಿದ್ದು, ಮೆಟ್ರೋ ಕೋಚ್‌ನಲ್ಲಿರುವ ಗ್ರ್ಯಾಬ್ ಹ್ಯಾಂಡಲ್‌ಗಳು ನಿಂತಿರುವ ಪ್ರಯಾಣಿಕರಿಗೆ ಸಹಾಯ ಮಾಡಲು ಮಾತ್ರ ವಿನ್ಯಾಸಗೊಳಿಸಲ್ಪಟ್ಟಿದ್ದು, ಸ್ಟಂಟ್‌ಗಳಿಗೆ ಅಥವಾ ನೇತಾಡಲು ಬಳಸುವುದು ಅಪಾಯಕಾರಿಯಾಗಿದೆ ಎಂದು ತಿಳಿಸಿದೆ.

ಇಂತಹ ವರ್ತನೆಯಿಂದ ಸಂಬಂಧಪಟ್ಟ ವ್ಯಕ್ತಿಗೆ ಮಾತ್ರವಲ್ಲದೆ, ಜನದಟ್ಟಣೆ ಸಂದರ್ಭಗಳಲ್ಲಿ ಇತರ ಪ್ರಯಾಣಿಕರಿಗೂ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಮೆಟ್ರೋ ಆಡಳಿತ ಎಚ್ಚರಿಸಿದೆ.