ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಸಿನಿಮಾ ಬಿಡುಗಡೆಗೆ ಮುಂಚೆ ಭಾರಿ ನಿರೀಕ್ಷೆ ಹುಟ್ಟಿಸಿತ್ತು. 1996 ರಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದ್ದ ‘ಇಂಡಿಯನ್’ ಸಿನಿಮಾದ ಮುಂದುವರೆದ ಭಾಗವಾಗಿರುವ ‘ಇಂಡಿಯನ್ 2’ ಸಿನಿಮಾದ ಬಗ್ಗೆ ನಿರೀಕ್ಷೆಗಳು ದುಪ್ಪಟ್ಟಾಗಿದ್ದವು. ಕಮಲ್ ಹಾಸನ್, ಸಿದ್ಧಾರ್ಥ್, ರಕುಲ್ ಪ್ರೀತ್ ಇನ್ನಿತರ ಸ್ಟಾರ್ ನಟರು ಸಿನಿಮಾದಲ್ಲಿ ನಟಿಸಿದ್ದ ಕಾರಣ ಹಾಗೂ ಶಂಕರ್ ಅಂಥಹಾ ಬ್ಲಾಕ್ ಬಸ್ಟರ್ ನಿರ್ದೇಶಕರು ನಿರ್ದೇಶನ ಮಾಡಿದ್ದ ಕಾರಣ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆಗಳಿದ್ದವು ಆದರೆ ಸಿನಿಮಾ ಬಿಡುಗಡೆ ಬಳಿಕ ಫ್ಲಾಪ್ ಆಗಿದೆ.
ಜುಲೈ 12 ರಂದು ಬಿಡುಗಡೆ ಆಗಿದ್ದ ‘ಇಂಡಿಯನ್ 2’ ಸಿನಿಮಾ ಮೊದಲ ದಿನವೇ ಕಳಪೆ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಮೊದಲ ದಿನವೇ ಎಲ್ಲೆಡೆಯಿಂದ ನೆಗೆಟಿವ್ ವಿಮರ್ಶೆಗಳು ‘ಇಂಡಿಯನ್ 2’ ಸಿನಿಮಾಕ್ಕೆ ಬಂದಿದ್ದು ಸಿನಿಮಾ ಫ್ಲಾಪ್ ಎನ್ನಲಾಗುತ್ತಿದೆ. ಸಿನಿಮಾವನ್ನು ಹೇಗಾದರೂ ಮಾಡಿ ಬದುಕಿಸುವ ಪ್ರಯತ್ನದಲ್ಲಿ ನಿರ್ದೇಶಕ ಶಂಕರ್ ಇದ್ದು, ಅನಗತ್ಯ ಎನಿಸಿದ ಸಿನಿಮಾದ 20 ನಿಮಿಷ ಭಾಗವನ್ನು ಕತ್ತರಿಸಿ ತೆಗೆಯಲಾಗಿದೆ. ಹಾಗಿದ್ದರೂ ಸಹ ‘ಇಂಡಿಯನ್ 2’ ಸಿನಿಮಾ ನೋಡಲು ಜನ ಬರುತ್ತಿಲ್ಲ.
ಅದೇ ಕಾರಣಕ್ಕೆ ಇದೀಗ ಸಿನಿಮಾವನ್ನು ನೆಟ್ಫ್ಲಿಕ್ಸ್ಗೆ ಮಾರಿಬಿಡಲಾಗಿದೆ. ಅಸಲಿಗೆ ಸಿನಿಮಾ ಬಿಡುಗಡೆ ಮುಂಚೆಯೇ ನೆಟ್ಫ್ಲಿಕ್ಸ್ ಜೊತೆಗೆ ‘ಇಂಡಿಯನ್ 2’ ಸಿನಿಮಾ ತಂಡದ ಒಪ್ಪಂದ ಆಗಿತ್ತು ಎನ್ನಲಾಗುತ್ತಿದೆ. ಇದೀಗ ಜುಲೈ 12 ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆದ ಕೇವಲ ಮೂರೇ ದಿನಕ್ಕೆ ‘ಇಂಡಿಯನ್ 2’ ಸಿನಿಮಾ ಜುಲೈ 15 ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ.

