ಮಂಗಳೂರು : ಸನ್ ಮ್ಯಾಟ್ರಿಕ್ಸ್ ಬ್ಯಾನರಿನಲ್ಲಿ ತಯಾರಾದ ಕೆ.ಸತ್ಯೇಂದ್ರ ಪೈ ನಿರ್ಮಾಣದ ಸ್ಕೂಲ್ ಲೀಡರ್ ಕನ್ನಡ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಏಪ್ರಿಲ್ ತಿಂಗಳಲ್ಲಿ ಕರಾವಳಿಯಾದ್ಯಂತ ಬೆಳ್ಳಿ ತೆರೆಯ ಮೇಲೆ ರಾರಾಜಿಸಲಿದೆ.

ಈ ಹಿಂದೆ ಬಿಡುಗಡೆಗೊಂಡು ಯಶಸ್ವಿಯಾದ ಪೆನ್ಸಿಲ್ ಬಾಕ್ಸ್ ಎಂಬ ಚಿತ್ರದ ನಿರ್ದೇಶಕರಾದ ರಝಾಕ್ ಪತ್ತೂರು ಇವರು ಸ್ಕೂಲ್ ಲೀಡರ್ ಚಿತ್ರವನ್ನು ಕತೆ, ಚಿತ್ರ ಕತೆ, ಸಂಭಾಷಣೆ ಜೊತೆಗೆ ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಪೆನ್ಸಿಲ್ ಬಾಕ್ಸ್ ಚಿತ್ರದ ಗೀತೆ ರಚನೆಗಾಗಿ ರಝಾಕ್ ಪುತ್ತೂರು ಇವರು 2019 ನೇ ಸಾಲಿನ ಅತ್ಯುತ್ತಮ ಗೀತೆ ರಚನಕಾರ ರಾಜ್ಯಪ್ರಶಸ್ತಿಗೆ ಅಯ್ಕೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಸ್ಕೂಲ್ ಲೀಡ‌ರ್ ಸಿನಿಮಾ ಹೈಸ್ಕೂಲ್ ಮಕ್ಕಳ ಮನೋ ವಿಕಾಸ, ಶೈಕ್ಷಣಿಕ ಬದುಕು ಮತ್ತು ಮಕ್ಕಳಲ್ಲಿ ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳುವ ಕಥಾಶಸ್ತುವನ್ನು ಹೊಂದಿದೆ. ಇದು ಶಾಲಾ ಚುನಾವಣೆಯನ್ನು ಆಧರಿಸಿದ ಕತೆಯಾದುದರಿಂದ ಇಡೀ ಸಿನಿಮಾವನ್ನು ಕಟಪಾಡಿಯ ಒಂದೇ ಶಾಲೆಯಲ್ಲಿ ಚಿತ್ರೀಕರಿಸಲಾಗಿದೆ. ಸುಮಾರು 25 ಶಾಲೆಯ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ.

ತುಳು ಚಿತ್ರ ರಂಗದ ದಿಗ್ಗಜರಾದ ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರು, ದೀಪಕ್ ರ ಪಾಣಾಜೆ ಮತ್ತು ಕನ್ನಡದ ಹಿರಿಯ ನಟ ರಮೇಶ್ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಓಟು ಓಟು ಎಂಬ ಹಾಡು ಈಗಾಗಲೇ ಬಿಡುಗಡೆಗೊಂಡಿದ್ದು ಈ ಹಾಡಿನ ತುಣುಕು ಇನ್ಸಾಗ್ರಾಮ್‌ನಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಕರನ್ನು ತಲುಪಿದೆ. ಚಿತ್ರದ ಛಾಯಾಗ್ರಾಹಕರಾಗಿ ಮೋಹನ್ ಪಡ್ರೆ, ಜಯಕಾರ್ತಿ ಯವರ ಸಂಗೀತ, ಸಚಿನ್‌ ರಾಮ್ ಸಂಕಲನ, ಆಶಿಶ್ ಅಂಚನ್ ನೃತ್ಯ ನಿರ್ದೇಶನ ಮತ್ತು ಅಕ್ಷತ್ ವಿಟ್ಲ ಸಹ ನಿರ್ದೇಶಕರಾಗಿದ್ದು ಸುದರ್ಶನ್ ಶಂಕರ್ ಹಾಗೂ ಎಂ ಎಂ ವಿಮಲ್ ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಹಾಸ್ಯದ ಜೊತೆಗೆ ಅತ್ಯುತ್ತಮ ಸಂದೇಶವನ್ನು ನೀಡುವ ಈ ಸಿನಿಮಾ ಎಲ್ಲಾ ವಯೋಮಾನದ ಸಿನಿಪ್ರಿಯರ ಮನ ತಲುಪಲಿದೆ ಎಂಬುದು ಚಿತ್ರ ತಂಡದ ಅನಿಸಿಕೆ.