ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ವಿರುದ್ಧ ಹಲವು ವರ್ಷಗಳಿಂದ ನಡೆಯುತ್ತ ಬಂದ ಲೈಂಗಿಕ ದೌರ್ಜನ್ಯ ಈಗ ಜಗಜ್ಜಾಹೀರಾಗಿದೆ. ಮಹಿಳೆಯರ ಮೇಲಿನ ಕಿರುಕುಳದ ಬಗ್ಗೆ ‘ಹೇಮಾ ಸಮಿತಿ’ ವರದಿ ಸಲ್ಲಿಸಿದೆ. ಇನ್ನು ಹೇಮಾ ಸಮಿತಿ ವರದಿ ಬಗ್ಗೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಟಾಲಿವುಡ್ನ ಖ್ಯಾತ ನಟಿ ಸಮಂತಾ ರುತ್ ಪ್ರಭು ಕೂಡ ಈ ವರದಿಯನ್ನು ಬೆಂಬಲಿಸಿದ್ದಾರೆ. ಅಲ್ಲದೇ, ಟಾಲಿವುಡ್ನಲ್ಲೂ ಇಂಥ ವರದಿ ಪ್ರಕಟ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಮಂತಾ ರುತ್ ಪ್ರಭು ಅವರು ಅನೇಕ ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಮಂತಾ ಅವರು ಇತ್ತೀಚೆಗೆ ಹೇಮಾ ಕಮಿಟಿ ವರದಿ ಬಗ್ಗೆ ಪೋಸ್ಟ್ ಮಾಡಿದ್ದರು. ‘ತೆಲುಗು ಚಿತ್ರರಂಗದ ಮಹಿಳೆಯರು ಹೇಮಾ ಸಮಿತಿಯ ವರದಿಯನ್ನು ಸ್ವಾಗತಿಸುತ್ತೇವೆ. ಇದಕ್ಕೆ ಕಾರಣವಾದ ಮಲಯಾಳಂ ಚಿತ್ರರಂಗದ ಮಹಿಳೆಯರಿಗೆ ಮೆಚ್ಚುಗೆ ಸೂಚಿಸುತ್ತೇವೆ. ತೆಲುಗಿನಲ್ಲಿಯೂ ವಾಯ್ಸ್ ಆಫ್ ವಿಮೆನ್ ತಂಡವನ್ನು 2019ರಲ್ಲಿ ಶುರುಮಾಡಲಾಗಿತ್ತು. ತೆಲಂಗಾಣ ಸರ್ಕಾರ ಕೂಡ ಹೇಮಾ ಸಮಿತಿ ರೀತಿಯ ವರದಿಯನ್ನು ಪ್ರಕಟಿಸಲಿ’ ಎಂದು ಈ ಪೋಸ್ಟ್ನಲ್ಲಿ ಬರೆಯಲಾಗಿದೆ.
ಸಮಂತಾ ಮಾತ್ರವಲ್ಲದೇ ನಟಿ ಲಕ್ಷ್ಮಿ ಮಂಜು, ನಿರ್ದೇಶಕಿ ನಂದಿನಿ ರೆಡ್ಡಿ ಸೇರಿದಂತೆ ಹಲವರು ಇದೇ ಪೋಸ್ಟ್ ಹಂಚಿಕೊಂಡಿದ್ದಾರೆ. ಸಮಂತಾ ಅವರು ಧ್ವನಿಗೂಡಿಸಿದ ಬಳಿಕ ಈ ಅಭಿಯಾನಕ್ಕೆ ಇನ್ನಷ್ಟು ಬಲ ಬಂದಿದೆ.

