ಮಂಗಳೂರು: ರಾಕ್‌ ಸ್ಟಾರ್‌ ರೂಪೇಶ್‌ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ʼಜೈʼ ತುಳು ಸಿನಿಮಾದ ಶೂಟಿಂಗ್‌ ಗುರುವಾರದಿಂದ (ಅ.24) ಆರಂಭವಾಗಿದೆ. ʼಗಿರ್ಗಿಟ್‌ʼ ಮತ್ತು ʼಸರ್ಕಸ್‌ʼ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್‌ ಶೆಟ್ಟಿ ಅವರು ಮತ್ತೊಂದು ಸಾಹಸಕ್ಕೆ ಇಳಿದಿದ್ದಾರೆ.

ʼಜೈʼ ಸಿನಿಮಾವು ಆರ್‌ಎಸ್ ಸಿನಿಮಾಸ್, ಶೂಲಿನ್ ಫಿಲ್ಮ್ಸ್ ಮತ್ತು ಮುಗ್ರೋಡಿ ಪ್ರೊಡಕ್ಷನ್ಸ್ ಬ್ಯಾನರ್‌ ನಡಿಯಲ್ಲಿ ನಿರ್ಮಾಣವಾಗುತ್ತಿದೆ. ʼಗಿರ್ಗಿಟ್ʼ, ʼಸರ್ಕಸ್ʼ ಮತ್ತು ʼಗಮ್ಜಲ್‌ʼನಂತಹ ಜನಪ್ರಿಯ ತುಳು ಚಲನಚಿತ್ರಗಳನ್ನು ರಚಿಸಿದ ಅದೇ ತಂಡ ಇದೀಗ ಜೈ ಚಿತ್ರದಲ್ಲಿ ತೊಡಗಿದೆ.

ರೂಪೇಶ್ ಶೆಟ್ಟಿ ನಿರ್ದೇಶಕರಾಗಿದ್ದು, ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ. ಲಾಯ್ ವ್ಯಾಲೆಂಟೈನ್ ಸಲ್ಡಾನಾ ಸಂಗೀತವಿದ್ದು, ವಿನುತ್ ಕೆ ಕ್ಯಾಮರಾ ಕೈಚಳಕವಿದೆ. ಚಿತ್ರತಂಡವು ಈಗಾಗಲೇ ಟೈಟಲ್‌ ಟೀಸರ್‌ ಬಿಡುಗಡೆ ಮಾಡಿದ್ದು, ವಿಭಿನ್ನವಾಗಿ ಮೂಡಿಬಂದಿದೆ. ರಾಜಕೀಯ ಕತೆಯನ್ನು ಒಳಗೊಂಡಿರುವ ಚಿತ್ರದಲ್ಲಿ ಮೊದಲ ಬಾರಿಗೆ ಖ್ಯಾತ ನಟ ದೇವದಾಸ್‌ ಕಾಪಿಕಾಡ್‌ ಗಂಭೀರ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ರೂಪೇಶ್‌ ಶೆಟ್ಟಿ, ದೇವದಾಸ್‌ ಕಾಪಿಕಾಡ್‌, ಅರವಿಂದ ಬೋಳಾರ್‌ ಜತೆಗೆ ಹಲವು ಕಲಾವಿದರು ಅಭಿನಯಿಸಲಿದ್ದಾರೆ. ಚಿತ್ರದ ನಾಯಕಿಯ ಬಗ್ಗೆ ಇದುವರೆಗೆ ಅಧಿಕೃತ ಘೋಷಣೆ ಮಾಡಲಾಗಿಲ್ಲ. ಒಟ್ಟಿನಲ್ಲಿ ಭಿನ್ನ ಪರಿಕಲ್ಪನೆಯೊಂದಿಗೆ ತಯಾರಾಗುತ್ತಿರುವ ಜೈ ಸಿನಿಮಾ ತುಳು ಚಿತ್ರಪೇಮಿಗಳಲ್ಲಿ ಈಗಾಗಲೇ ನಿರೀಕ್ಷೆ ಹುಟ್ಟು ಹಾಕಿದೆ.