ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ಹಾಗೂ ಆರೋಪಿ ದರ್ಶನ್ ಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಅವರ ಪ್ರಮುಖ ಅರ್ಜಿಯೊಂದು ವಿಚಾರಣೆಯ ಹಂತ ತಲುಪುವ ಮುನ್ನವೇ ವಜಾಗೊಂಡಿದೆ.
ತಮ್ಮ ವಿರುದ್ಧದ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ದರ್ಶನ್ ಸುಪ್ರೀಂ ಕೋರ್ಟ್‌ನಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಅರ್ಜಿ ಸಲ್ಲಿಸಿದ್ದರು. ವಿಶೇಷವೆಂದರೆ, ಈ ಅರ್ಜಿಯು ನ್ಯಾಯಮೂರ್ತಿಗಳ ಪೀಠದ ಮುಂದೆ ಬಂದು ವಿಚಾರಣೆಗೆ ಒಳಗಾಗುವ ಮುನ್ನವೇ ಪ್ರಾಥಮಿಕ ಪರಿಶೀಲನಾ ಹಂತದಲ್ಲೇ ತಿರಸ್ಕೃತಗೊಂಡಿದೆ.
ಒಂದು ವರ್ಷದ ಜೈಲು ಆದೇಶವನ್ನು ಮರು ಪರಿಶೀಲಿಸಬೇಕು ಎಂದು ಕೋರಿ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು. ಆದರೆ ಅರ್ಜಿಯ ತಾಂತ್ರಿಕತೆ ಮತ್ತು ಕಾನೂನು ಅಂಶಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಅವರು ಇಂದು (ಜು.3) ಈ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಭೀಕರ ಹತ್ಯೆ ಪ್ರಕರಣದ ಟ್ರಯಲ್ ನಡೆಯುತ್ತಿರುವ ಬೆನ್ನಲ್ಲೇ, ಸುಪ್ರೀಂ ಕೋರ್ಟ್‌ನಲ್ಲಿ ಸಿಗಬಹುದು ಎನ್ನಲಾಗಿದ್ದ ಕಾನೂನು ಪರಿಹಾರದ ಹಾದಿ ಸದ್ಯಕ್ಕೆ ದರ್ಶನ್ ಅವರಿಗೆ ಮುಚ್ಚಿದಂತಾಗಿದೆ. ರಿಜಿಸ್ಟ್ರಾರ್ ಮಟ್ಟದಲ್ಲೇ ಅರ್ಜಿ ವಜಾಗೊಂಡಿದೆ.

