ನವದೆಹಲಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಗೆ ಸುಪ್ರೀಂ ಕೋರ್ಟ್ ಇಂದು ಮಧ್ಯಾಂತರ ಜಾಮೀನು ನಿರಾಕರಿಸಿದ್ದು, ಇಂದಿನಿಂದ ಒಂದು ವರ್ಷದ ಒಳಗೆ ತ್ವರಿತ ವಿಚಾರಣೆ ನಡೆಸಿ ಪ್ರಕರಣ ಇತ್ಯರ್ಥ ಗೊಳಿಸಲು ಟ್ರಯಲ್ ಕೋರ್ಟ್ ಗೆ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿ ಜೆ.ಬಿ. ಪರ್ದೀವಾಲಾ ನೇತೃತ್ವದ ದ್ವಿಸದಸ್ಯಪೀಠ ಮಹತ್ವದ ಆದೇಶ ನೀಡಿದ್ದಾರೆ. ಇತರ ಕೈದಿಗಳಿಗೆ ನೀಡುವಂತೆ ದರ್ಶನ್ ಅವರಿಗೆ ಎಲ್ಲ ಮೂಲ ಸೌಲಭ್ಯಗಳನ್ನು ನೀಡಬೇಕು ಎಂದು ಆದೇಶ ನೀಡಲಾಗಿದೆ. ದರ್ಶನ್ ಇನ್ನು ಒಂದು ವರ್ಷ ಜಾಮೀನಿಗಾಗಿ ಅರ್ಜಿ ಹಾಕಬಾರದು. ಒಂದು ವೇಳೆ ಒಂದು ವರ್ಷದ ಒಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ ಜಾಮೀನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಕೆಲ ದಿನಗಳ ಹಿಂದಷ್ಟೇ ಕಾರಾಗೃಹದ ಅವ್ಯವಸ್ಥೆ ಮತ್ತು ಸಹ ಕೈದಿಗಳಿಂದ ಬೆದರಿಕೆ, ಕಿರುಕುಳ ಸೇರಿದಂತೆ ಇನ್ನೂ ಕೆಲವು ಸಮಸ್ಯೆಗಳನ್ನು ದರ್ಶನ್, ಸುಪ್ರೀಂಕೋರ್ಟ್ ಮುಂದೆ ಹೇಳಿಕೊಂಡಿದ್ದರು. ಈ ಸಂಬಂಧ ಕಾರಾಗೃಹ ಇಲಾಖೆಯಿಂದ ವರದಿಯನ್ನು ಸುಪ್ರೀಂಕೋರ್ಟ್ ಕೇಳಿತ್ತು. ಎಸ್​​ಪಿಪಿ ಈ ಬಗ್ಗೆ ಕೋರ್ಟ್‌ಗೆ ವಿಡಿಯೋ ಸಮೇತ ವಾದ ಮಂಡಿಸಿದ್ದು, ದರ್ಶನ್‌ ಮಾಡಿರುವ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದರು.