ಮೈಸೂರು: ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ ಅರ್ಪಿಸುತ್ತಿರುವ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನದ ಚಿತ್ರ ವೀರಚಂದ್ರಹಾಸ ಈಗಾಗಲೇ ರಾಜ್ಯದಾದ್ಯಂತ ತೆರೆ ಕಂಡಿದೆ. ಇದು ಯಶಸ್ವಿಯಾಗಿ ಜನಮನಸೆಳೆಯಲಿ ಎಂದು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿಕೊಂಡಿದ್ದಾರೆ.

ಇದರ ಪ್ರಚಾರ ಕಾರ್ಯವನ್ನು ಸ್ವತಃ ರವಿ ಬಸ್ರೂರ್ ಅವರೇ ವಹಿಸಿಕೊಂಡು ತಮ್ಮ ತಂಡದ ಜತೆಗೆ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಈ ನಡುವೆ ಮೈಸೂರಿನ ಚಾಮುಂಡಿಬೆಟ್ಟಕ್ಕೂ ಆಗಮಿಸಿರುವ ಅವರು ಯಕ್ಷಗಾನದ ಕಿರೀಟ ತೊಟ್ಟು ದೇವಿಯ ದರ್ಶನ ಪಡೆದು ಗಮನಸೆಳೆದಿದ್ದಾರೆ. ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಲ್ಲದೆ, ಇಲ್ಲಿ ಹಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ.

ಇನ್ನು ದಕ್ಷಿಣ ಕನ್ನಡ ಭಾಗದ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಕಲೆಯ ಹಿನ್ನೆಲೆ ಹಿರಿಮೆಯನ್ನು ನಾಡಿನ ಜನತೆಗೆ ಹೇಳುವ ಪ್ರಯತ್ನವನ್ನು ವೀರ ಚಂದ್ರಹಾಸ ಚಿತ್ರದ ಮೂಲಕ ಮಾಡಿದ್ದಾರೆ. ಇದೊಂದು ಯಕ್ಷಗಾನ ಪ್ರಸಂಗ ಆಧಾರಿತ ಚಿತ್ರವಾಗಿ ರಾಜ್ಯದಲ್ಲಿ ತೆರೆಕಂಡು ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಚಿತ್ರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿರುವ ರವಿ ಬಸ್ರೂರು ಅವರು ವೀರ ಚಂದ್ರಹಾಸ ನನ್ನ ಬಹುವರ್ಷಗಳ ಕನಸು, ಯಕ್ಷಗಾನವನ್ನು ವಿಶ್ವಮಾನ್ಯ ಮಾಡಬೇಕೆಂದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ, ಈ ಚಿತ್ರದ ಎಲ್ಲಾ ಪಾತ್ರಗಳನ್ನು ನಿಜವಾದ ವೃತ್ತಿಪರ ಯಕ್ಷಗಾನ ಕಲಾವಿದರೆ ನಿರ್ವಹಿಸಿರುವುದು ವಿಶೇಷ. ಹೀಗಾಗಿ ಇಡೀ ಚಿತ್ರ ತುಂಬಾ ನೈಜ್ಯವಾಗಿ ಮೂಡಿಬಂದಿದ್ದು, ವಿಶೇಷ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಭಿನಯಿಸುವ ಮೂಲಕ ನಮಗೆ ಆಶೀರ್ವದಿಸಿದ್ದಾರೆ ಎನ್ನುವ ಮೂಲಕ ಹ್ಯಾಟ್ರಿಕ್ ಶಿವರಾಜ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಚಾಮುಂಡಿಬೆಟ್ಟಜ್ಜೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ತಂಡದೊಂದಿಗೆ ಮೈಸೂರು ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಅವಧೂತ ಅರ್ಜುನ್ ಗುರೂಜಿ ಅವರ ಆಶೀರ್ವಾದ ಪಡೆದಿದ್ದಲ್ಲದೆ ಅವರ ಜತೆಯಲ್ಲಿಯೇ ನಗರದಲ್ಲಿರುವ ಡಿಆರ್ ಸಿ ಮಾಲ್ ಗೆ ತೆರಳಿ ಪ್ರೇಕ್ಷಕರ ಜೊತೆ ಚಿತ್ರವನ್ನು ವೀಕ್ಷಿಸಿ ಗಮನಸೆಳೆದಿದ್ದಾರೆ. ಈ ವೇಳೆ ಇವರ ಜತೆಯಲ್ಲಿ ಚಿತ್ರತಂಡ ಹಾಗೂ ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ, ಸಮಾಜ ಸೇವಕರಾದ ಜೋಗಿ ಮಂಜು, ರಿಷಿ ವಿಶ್ವಕರ್ಮ, ವಿಕ್ರಂ ಅಯ್ಯಂಗಾರ್, ಮಹಾನ್ ಶ್ರೇಯಸ್ ಮೊದಲಾದವರಿದ್ದು ಚಿತ್ರಕ್ಕೆ ಶುಭ ಹಾರೈಸಿದ್ದಾರೆ.