ಬೆಂಗಳೂರು: ರೇವ್ ಪಾರ್ಟಿ ಪ್ರಕರಣದಲ್ಲಿ ಮಾದಕ ವಸ್ತು ಸೇವಿಸಿದ ಹಿನ್ನೆಲೆಯಲ್ಲಿ ತೆಲುಗು ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಇಂದು ವಿಚಾರಣೆಗೆ ಹಾಜರಾಗಿದ್ದ ನಟಿಯನ್ನು ಬಂಧಿಸಲಾಗಿದೆ. ಚಾಮರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ನಟಿ ಹೇಮಾ ಹಾಜರಾಗಿದ್ದು, ಈ ವೇಳೆ ಅವರನ್ನು ಸಿಸಿಬಿ ತನಿಖಾಧಿಕಾರಿಗಳು ಬಂಧಿಸಿ ಹೇಳಿಕೆ ಪಡೆಯುತ್ತಿದ್ದಾರೆ.
ಎರಡು ಬಾರಿ ನೋಟಿಸ್ ನೀಡಿದ್ದರೂ ಸಹ ವಿಚಾರಣೆಗೆ ನಟಿ ಬಂದಿರಲಿಲ್ಲ. ಇನ್ನು ವಿಚಾರಣೆ ವೇಳೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ನಟಿಯನ್ನು ಬಂಧಿಸಲಾಗಿದೆ. ಸದ್ಯ ನಟಿಗೆ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಾಗುತ್ತಿದೆ.
ಮೇ 19ರಂದು ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್ ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಮಂದಿ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ವೈದ್ಯಕೀಯ ತಪಾಸಣೆಯಲ್ಲಿ ನಟಿ ಹೇಮಾ ಸೇರಿ 86 ಮಂದಿ ಮಾದಕ ವಸ್ತು ಸೇವಿನೆ ಮಾಡಿರುವುದು ದೃಢಪಟ್ಟಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ನಟಿ ಹಾಜರಾಗಿದ್ದರು. ಈ ವೇಳೆ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಡ್ರಗ್ಸ್ ಮತ್ತು ರೇವ್ ಪಾರ್ಟಿ ಆಯೋಜನೆಯಲ್ಲಿ ನಟಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗೆಯೇ ತಾವು ಬೇರೆ ಕಡೆ ಇರುವುದಾಗಿ ವಿಡಿಯೊ ಮಾಡಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದರಿಂದ ನಟಿಯನ್ನು ವಶಕ್ಕೆ ಪಡೆದಿದ್ದು, ನಾಳೆ ಕೋರ್ಟ್‌ಗೆ ಹಾಜರುಪಡಿಸಲು ಸಿಸಿಬಿ ತೀರ್ಮಾನಿಸಿದೆ.

