ಕಳೆದ ಅಕ್ಟೋಬರ್ ತಿಂಗಳಲ್ಲಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಮದುವೆಯ ದಿನಾಂಕ ಕೊನೆಗೂ ರಿವಿಲ್ ಆಗಿದ್ದು, ಫೆಬ್ರವರಿ ತಿಂಗಳಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ.
ತೆಲುಗು ಚಿತ್ರರಂಗದ ಜನಪ್ರಿಯ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ವಿವಾಹವು 2026ರ ಫೆಬ್ರವರಿ 26ರಂದು ನಡೆಯಲಿದ್ದು, ರಾಜಸ್ಥಾನದ ಉದಯಪುರದಲ್ಲಿರುವ ಭವ್ಯ ಅರಮನೆದಲ್ಲಿ ವೈಭವಯುತವಾಗಿ ಮದುವೆ ಆಯೋಜನೆ ಮಾಡುವ ಯೋಜನೆ ರೂಪುಗೊಳ್ಳುತ್ತಿದೆ ಎನ್ನಲಾಗಿದೆ.
ವಿಜಯ್ ದೇವರಕೊಂಡ ಅಥವಾ ರಶ್ಮಿಕಾ ಮಂದಣ್ಣ ಅವರಿಂದ ಯಾವುದೇ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ. ಸಿನಿ ವಲಯದ ಮೂಲಗಳ ಪ್ರಕಾರ, ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆ ನೆರವೇರಿಸುವ ಉದ್ದೇಶವಿದೆ ಎನ್ನಲಾಗುತ್ತಿದೆ.
ಅಧಿಕೃತ ಮಾಹಿತಿ ಪ್ರಕಟವಾಗುವವರೆಗೆ ಈ ಸುದ್ದಿ ದೃಢೀಕರಣಕ್ಕೆ ಕಾಯಬೇಕಿದೆ. ಆದರೂ, ಟಾಲಿವುಡ್‌ನ ಸ್ಟಾರ್ ಜೋಡಿಯ ವಿವಾಹ ಸುದ್ದಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

